ಶಿವಮೊಗ್ಗ: ಯುವ ಸಮೂಹ ಭ್ರಾತೃತ್ವದಿಂದ ಸಮಾಜವನ್ನು ಮುನ್ನಡೆಸಬೇಕೆ ವಿನಃ ಐಕ್ಯತೆಯನ್ನು ಮುರಿದು ಮುನ್ನಡೆಸುವುದಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಕಿವಿಮಾತು ಹೇಳಿದರು.ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಸಿ.ಭೀಮಸೇನರಾವ್ ಕಾನೂನು ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಕಾನೂನು ಅಧ್ಯಯನ ಕೇಂದ್ರದಿಂದ ಮಂಗಳವಾರ ಚಂದನ ಸಭಾಂಗಣದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಶಾಂತಿಯ ಸಂದೇಶ : ಸೌಹಾರ್ದ ಸಪ್ತಾಹ ಮತ್ತು ಶಾಂತಿಯ ನಡಿಗೆ ಸೌಹಾರ್ದತೆ ಕಡೆಗೆ ಜಾಥಾ ಸಮಾರೋಪದಲ್ಲಿ ಅವರು ಮಾತನಾಡಿದರು.
ಹಸಿವು, ಬಡತನ ಮುಕ್ತ ಸಮಾಜ ನಿರ್ಮಾಣಕ್ಕೆ ಕಂಕಣಬದ್ಧರಾಗಿ. ಗಾಂಧೀಜಿಯವರು ರೈತರು, ಮಹಿಳೆಯರು, ಎಲ್ಲಾ ಭಾಷೆ, ಜಾತಿಯ ಜನರನ್ನು, ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಸಂಘಟಿಸುತ್ತಿದ್ದರು. ಅದರೇ ಇಂದು ಐಕ್ಯತೆಯನ್ನು ಹೊಡೆದು ಬಿಸಾಕಿದ್ದೇವೆ. ವಿಷವನ್ನು ಬಿತ್ತುವ ಕಾರ್ಯ ನಮ್ಮ ನಡುವೆ ಆಗುತ್ತಿದೆ. ಆಷಾಡಭೂತಿಗಳ ಸಂಖ್ಯೆ ಸಮಾಜದಲ್ಲಿ ಜಾಸ್ತಿಯಾಗುತ್ತಿದೆ. ಅಂತಹ ಅಶಾಷಡಭೂತಿತನ ಯುವ ಸಮೂಹಕ್ಕೆ ಪ್ರೇರಣೆಯಾಗದಿರಲಿ. ಯಾರೆ ಒಪ್ಪಿಕೊಳ್ಳಲಿ ಬಿಡಲಿ, ಗಾಂಧೀಜಿ ಎಂದೆಂದಿಗೂ ಪ್ರಸ್ತುತ. ಮೌಲ್ಯಾಧಾರಿತ ಜೀವನ ಮತ್ತು ಸಮಾಜ ಕಟ್ಟಲು ಗಾಂಧೀಜಿ ಎಂದೆಂದಿಗೂ ಪ್ರೇರಣೀಯ ಎಂದು ಹೇಳಿದರು.
ಬಸವ ಕೇಂದ್ರದ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ಗಾಂಧೀಜಿ ಎಂದಾಗ ಒಂದು ರೀತಿಯ ಅಸಮಾಧಾನ, ಅಸಹಿಷ್ಣತೆಯನ್ನು ಯುವ ಸಮೂಹದಲ್ಲಿ ಕಾಣುತ್ತಿದ್ದೇವೆ. ಅದರೇ ಗಾಂಧೀಜಿಯ ಉದಾತ್ತ ಸ್ವಭಾವವನ್ನು ಅರ್ಥ ಮಾಡಿಕೊಳ್ಳದೆ ಇಂತಹ ಅಸಹಿಷ್ಣತೆ ಸರಿಯಲ್ಲ ಎಂದರು.ಕಾಲೇಜಿನ ಪ್ರಾಂಶುಪಾಲೆ ಡಾ.ಎ.ಅನಲ ಅಧ್ಯಕ್ಷತೆ ವಹಿಸಿದ್ದರು. ಎಸ್.ವೈ.ಎಸ್ ರಾಜ್ಯ ಸಮಿತಿ ಕಾರ್ಯದರ್ಶಿ ಮೌಲಾನಾ ಶಾಹುಲ್ ಹಮೀದ್, ಎಸ್.ಎಂ.ಎಸ್.ಎಸ್ ನಿರ್ದೇಶಕ ಫಾದರ್ ಪಿಯೂಸ್ ಡಿಸೋಜ, ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ನ್ಯಾಯವಾದಿ ಕೆ.ಪಿ.ಶ್ರೀಪಾಲ್, ಐಕ್ಯೂಎಸಿ ಸಂಯೋಜಕ ಡಾ.ಎಸ್.ಕಾಂತರಾಜ್ ಮತ್ತಿತರರಿದ್ದರು.
ಸಮೀಕ್ಷೆಯಲ್ಲಿರುವ ಎಲ್ಲಾ ಪ್ರಶ್ನೆಗಳಿಗೆ
ಉತ್ತರ ನೀಡುವುದು ಕಡ್ಡಾಯವಲ್ಲಸಮೀಕ್ಷೆಯಲ್ಲಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುವುದು ಕಡ್ಡಾಯವಲ್ಲ. ಈ ಸಮೀಕ್ಷೆಯಲ್ಲಿ ಸೇರಿಲ್ಲ ಎನ್ನುವ ಕಾರಣಕ್ಕೆ ಸರ್ಕಾರದಿಂದ ಯಾವುದೇ ಸೌಲಭ್ಯಗಳಿಂದ ವಂಚಿತರಾಗುವುದಿಲ್ಲ. ಗಣತಿಯಲ್ಲಿ ಸೇರಿದ್ದಿರಿ ಎಂಬ ಮಾತ್ರಕ್ಕೆ ಹೆಚ್ಚು ಸೌಲಭ್ಯ ನೀಡುತ್ತಾರೆ ಎಂಬ ಭ್ರಮೆಯು ಬೇಕಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ತಿಳಿಸಿದರು.
ಚಾಣಾಕ್ಯ ಕಾಲದಲ್ಲಿಯೂ ಗಣತಿ ಕಾರ್ಯ ನಡೆದಿದೆ. ಪ್ರತಿಯೊಂದು ರಾಜ ಮಹಾರಾಜರ ಕಾಲದಲ್ಲಿ ತಮ್ಮದೇ ರೀತಿಯಲ್ಲಿ ಗಣತಿ ಕಾರ್ಯ ನಡೆಸಿದ್ದಾರೆ. ಅದಕ್ಕೆ ಪೂರಕವಾಗಿ ಕಾರ್ಯಯೋಜನೆಗಳು ರೂಪಗೊಳ್ಳುತ್ತಿದ್ದವು. ಹಾಗಾಗಿ ಜಾತಿ ಗಣತಿ ಎಂಬುದು ಅವಶ್ಯಕವಾಗಿದೆ ಎಂದರು.ಒಳಮೀಸಲಾತಿ ಕುರಿತು ಆಯೋಗ ಕಾರ್ಯನಿರ್ವಹಿಸುವಾಗ, ಶೇ.80 ಪರಿಶಿಷ್ಟ ಜಾತಿಯ ಮಕ್ಕಳು ಸುಶಿಕ್ಷಿತರಾಗಿದ್ದಾರೆ ಎಂದು ತಿಳಿಯಿತು. ಇದರಲ್ಲಿ ಶೇ.7 ಮಾತ್ರ ಪದವಿ ಹಂತ ಪೂರೈಸಿದ್ದರು ಎಂಬುದು ಗಮನಾರ್ಹ. ಅಂದರೆ ಶೇ.73ರಷ್ಟು ಮಕ್ಕಳು ಶಾಲಾ ಹಂತಕ್ಕೆ ತಮ್ಮ ಶಿಕ್ಷಣ ಮೊಟಕುಗೊಳಿಸಿದ್ದಾರೆ. ಇದಕ್ಕೆ, ಶಾಲಾ ಹಂತದಲ್ಲಿ ಸರ್ಕಾರ ನೀಡುವ ಉಚಿತ ಆಹಾರ ಮತ್ತು ಬಟ್ಟೆ ಕಾರಣವಿರಬಹುದು. ಇಂತಹ ಸತ್ಯ ಸಮಾಜ ಅರಿಯಬೇಕಾದರೆ ಜಾತಿ ಗಣತಿ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಎಲ್ಲಾ ಜನರು ಒಂದಲ್ಲ ಒಂದು ರೀತಿಯಲ್ಲಿ ಮೀಸಲಾತಿ ಅನುಭವಿಸುತ್ತಿದ್ದಾರೆ. ಅದರೇ 62 ಲಕ್ಷ ಹುದ್ದೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಖಾಲಿ ಉಳಿದಿವೆ. ಅನುದಾನಿತ ಸಂಸ್ಥೆಗಳಲ್ಲಿ ಒಂದೇ ಒಂದು ನೇಮಕಾತಿಗೆ ಅವಕಾಶ ಸಿಗುತ್ತಿಲ್ಲ. ಇದರಿಂದ ಮೀಸಲಾತಿಗಳು ರಚನೆಗೊಂಡರೂ ಸರಿಯಾದ ಬಳಕೆ ಮಾಡಿಕೊಳ್ಳುವ ಅವಕಾಶವೇ ಸಿಗುತ್ತಿಲ್ಲ. ಜೊತೆಯಲ್ಲಿ ಆಟೋಮೇಷನ್ ಕಾಲದಲ್ಲಿ ಮಾನವ ಸಂಪನ್ಮೂಲ ಬಳಕೆಯನ್ನು ಕಡಿತಗೊಳಿಸಲಾಗುತ್ತಿದೆ. ಆಧುನಿಕ ತಂತ್ರಜ್ಞಾನ ಎಲ್ಲಾ ಮೀಸಲಾತಿಯನ್ನು ತನ್ನಡೆಗೆ ಸೆಳೆದುಕೊಳ್ಳುತ್ತಿದೆ ಎಂದು ಹೇಳಿದರು.