ಕನ್ನಡಪ್ರಭ ವಾರ್ತೆ ಮಾಗಡಿ
ಬಿಜಿಎಸ್ ಕಾಲೇಜಿನಲ್ಲಿ ಪಿಯು ಶಿಕ್ಷಣ ನೀಡುತ್ತಿದ್ದು, ಮುಂದೆ ಆದಿಚುಂಚನಗಿರಿ ಮಠದ ಶ್ರೀಗಳಿಂದ ಉನ್ನತ ಶಿಕ್ಷಣವನ್ನು ಈ ಭಾಗದ ಮಕ್ಕಳಿಗೆ ಕೊಡುವ ಕೆಲಸ ಆಗಬೇಕಿದ್ದು, ಈ ಪ್ರಯತ್ನಕ್ಕೆ ನಮ್ಮ ಸಂಪೂರ್ಣ ಸಹಕಾರ ಇರುತ್ತದೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.ಪಟ್ಟಣದ ಬಿಜಿಎಸ್ ಕಾಲೇಜಿನಲ್ಲಿ 2024ನೇ ಸಾಲಿನ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಸಮಾಜಕ್ಕೆ ಒಳ್ಳೆಯ ಪ್ರಜೆಗಳನ್ನು ಹೊರತರುತ್ತಿದ್ದು, ಮಾಗಡಿ ತಾಲೂಕಿನಲ್ಲಿ ಆದಿಚುಂಚನಗಿರಿ ಮಠ ಹಾಗೂ ಸಿದ್ದಗಂಗಾ ಮಠಗಳು ಅನ್ನ,ಅಕ್ಷರ ಹಾಗೂ ಆಶ್ರಯ ದಾಸೋಹಗಳನ್ನು ನೀಡುವ ಮೂಲಕ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿವೆ ತಿಳಿಸಿದರು.
ಪೋಷಕರ ಹೆಸರಿನಲ್ಲಿ ಪ್ರೋತ್ಸಾಹ ಧನ ವಿತರಣೆ:ಮುಂದಿನ ವರ್ಷದಿಂದ ನಮ್ಮ ಪೋಷಕರ ಹೆಸರಿನಲ್ಲಿ ತಾಲೂಕಿನಲ್ಲಿ ಎಸ್ಎಸ್ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮೂರು ಜನ ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರು. ನಗದು ಬಹುಮಾನ ನೀಡಿ ಗೌರವಿಸುವ ಕೆಲಸ ಮಾಡಲಾಗುತ್ತದೆ ಎಂದು ಶಾಸಕ ಬಾಲಕೃಷ್ಣ ಭರವಸೆ ನೀಡಿದರು.
ಆದಿಚುಂಚನಗಿರಿ ಮಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿ, ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಲಸ ಮಾಡುವಾಗ ಶ್ರದ್ಧೆಯನ್ನು ಬೆಳೆಸಿಕೊಂಡರೆ ಆ ಕ್ಷೇತ್ರದಲ್ಲಿ ಯಶಸ್ಸು ಕಾಣಲು ಸಾಧ್ಯ. ಕಳೆದ 15 ವರ್ಷಗಳಿಂದಲೂ ಮಾಗಡಿಯ ಬಿಜಿಎಸ್ ಕಾಲೇಜಿನಲ್ಲಿ ಇಬ್ಬರೂ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಶ್ರದ್ಧೆ, ಶಿಸ್ತಿನ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಗೂ ಅಂಕದ ಜೊತೆಗೆ ಶಿಸ್ತನ್ನು ಬೆಳೆಸಿ, ಸಾಧನೆಗೈಯಲು ಬಿಜಿಎಸ್ ಸಂಸ್ಥೆ ಸಾಕಷ್ಟು ಶ್ರಮಿಸುತ್ತಿದೆ, ಮಕ್ಕಳ ಈ ಶಿಸ್ತನ್ನು ನೋಡಿದರೆ ಶಿಕ್ಷಕರ ಶ್ರಮ ಎಷ್ಟಿದೆ ಎಂಬುದು ತಿಳಿಯುತ್ತದೆ. ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಮಹತ್ವದ ಘಟ್ಟ ಎಂದು ಎಲ್ಲರೂ ಹೇಳುತ್ತಾರೆ.ಆದರೆ, ವಿದ್ಯಾರ್ಥಿ ಜೀವನದ ಆರಂಭದ 25 ವರ್ಷಗಳೂ ಕೂಡ ಮಹತ್ವವಾದ ಘಟ್ಟವಾಗಿದ್ದು, ಪೋಷಕರು ನಿಮ್ಮ ಸಾಧನೆಯನ್ನು ನೋಡಿ ಹೆಚ್ಚು ಖುಷಿ ಪಡುತ್ತಾರೆ, ಆದ್ದರಿಂದ ಶ್ರದ್ಧೆಯ ಮೂಲಕ ಜ್ಞಾನ ಸಂಪಾದಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಪಿಯುಸಿಯ ವಾಣಿಜ್ಯ, ವಿಜ್ಞಾನ, ಕಲಾ ವಿಭಾಗದಲ್ಲಿ ಅತಿ ಹೆಚ್ಚುಅಂಕಗಳಿಸಿದ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತದ ವತಿಯಿಂದ ಪ್ರತಿಭಾ ಪುರಸ್ಕಾರ ನೆರವೇರಿಸಲಾಯಿತು. ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಲಾಯಿತು, ಕಾರ್ಯಕ್ರಮದಲ್ಲಿ ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ರಾಮನಗರದ ಅನ್ನದಾನೇಶ್ವರ ನಾಥ ಸ್ವಾಮೀಜಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಸಿಎಒ ಡಾ.ಎನ್.ಶಿವರಾಮ್ ರೆಡ್ಡಿ, ಮಾಗಡಿ ಪಿಯು ಕಾಲೇಜು ಪ್ರಾಂಶುಪಾಲ ಉಮೇಶ್, ಉಪಪ್ರಾಂಶುಪಾಲ ಗುರುರಾಜ್, ಗಣ್ಯರಾದ ಶಾಂತಕುಮಾರ್, ರಂಗನಾಥ್ ಜಯಸಿಂಹ, ಮಧು ಸುಧನ್ ಸೇರಿ ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.