ಗದಗ: ನಮ್ಮ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳು ಸಾಮಾಜಿಕ ನ್ಯಾಯದ ತಳಹದಿಗಳಾಗಿವೆ. ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಿ ಪ್ರತಿಯೊಬ್ಬರಿಗೆ ನ್ಯಾಯ ದೊರಕುವಂತಾಗಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ದಿವಾಣಿ ನ್ಯಾಯಾಧೀಶ ಕೆ. ಗುರುಪ್ರಸಾದ ಹೇಳಿದರು.
ಸಮಾನತೆಯ ಪರಿಕಲ್ಪನೆಯಡಿ ೨೦೦೭ರಲ್ಲಿ ವಿಶ್ವ ಸಂಸ್ಥೆಯಲ್ಲಿ ಠರಾವು ಪಾಸ್ ಮಾಡಲಾಗಿದ್ದು, ಅದರ ಪ್ರಕಾರ ವಿಶ್ವದಾದ್ಯಂತ ೨೦೦೯ರಿಂದ ಪ್ರತಿ ವರ್ಷ ಫೆ. ೨೦ರಂದು ವಿಶ್ವ ಸಾಮಾಜಿಕ ನ್ಯಾಯ ದಿನ ಆಚರಿಸುತ್ತಾ ಬರಲಾಗಿದೆ ಎಂದರು.
ಸಂವಿಧಾನದ ಪೀಠಿಕೆಯಲ್ಲಿರುವ ಪ್ರಮುಖ ಅಂಶಗಳಲ್ಲಿ ಸಾಮಾಜಿಕ ನ್ಯಾಯವೂ ಒಂದು. ನಮ್ಮ ಸಮಾಜದಲ್ಲಿರುವ ಜನರ ಮಧ್ಯೆ ಜಾತಿ-ಧರ್ಮಾಧಾರಿತ, ಲಿಂಗಾಧಾರಿತ ವ್ಯತ್ಯಾಸಗಳಿವೆ. ಅವುಗಳನ್ನು ಹೋಗಲಾಡಿಸಿ ಪ್ರತಿಯೊಬ್ಬರಿಗೂ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಮೀಸಲಾತಿ ಸೇರಿದಂತೆ ಹತ್ತು ಹಲವಾರು ಕಾನೂನುಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.ಈ ವೇಳೆ ತಾಲೂಕು ಸಮಾಜ ಕಲ್ಯಾಣಾಧಿಕಾರಿ ವಿಜಯಲಕ್ಷ್ಮಿ ಇಂಗಳಳ್ಳಿ ಮಾತನಾಡಿದರು. ವಸತಿ ನಿಲಯದ ವಾರ್ಡನ್ ವಸಂತಾ ಇದ್ದರು. ವಿದ್ಯಾರ್ಥಿನಿ ಸಂಗೀತಾ ಪ್ರಾರ್ಥಿಸಿದರು. ನೇತ್ರಾವತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.