ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ: ಶಾಸಕ ಕೆ.ರಾಘವೇಂದ್ರ ಹಿಟ್ನಾಳ

KannadaprabhaNewsNetwork | Published : Feb 24, 2024 2:36 AM

ಸಾರಾಂಶ

ಸಮಸ್ಯೆ ನಿವಾರಣೆಗೆ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಇನ್ನೊಂದು ವಾರದಲ್ಲಿ ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೇಯೋ ಅಲ್ಲಿ ತ್ವರಿತವಾಗಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಕೆಲಸ ಮಾಡುತ್ತೇವೆ

ಕೊಪ್ಪಳ: ಕ್ಷೇತ್ರದಲ್ಲಿ ಉಲ್ಬಣಗೊಂಡಿರುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ, ಜನತೆಗೆ ತ್ವರಿತವಾಗಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸುವೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.

ಹಿರೇಸಿಂದೋಗಿ ಜಿಪಂ ಕ್ಷೇತ್ರ ವ್ಯಾಪ್ತಿಯ ಕಾತರಕಿ-ಗುಡ್ಲಾನೂರು, ಬೇಳೂರು, ಡೊಂಬರಳ್ಳಿ, ಬಿಕನಹಳ್ಳಿ, ಬಿಸರಳ್ಳಿ, ಮೈನಳ್ಳಿ, ಹಂದ್ರಾಳ, ಹಣವಾಳ, ವದಗನಾಳ ಗ್ರಾಮದಲ್ಲಿ ಅಂದಾಜು ಮೊತ್ತ ₹9 ಕೋಟಿಯ ಸಿಸಿ ರಸ್ತೆ ಮತ್ತು ಚರಂಡಿ ಹಾಗೂ ಸ್ಮಾರ್ಟ್ ಕ್ಲಾಸ್ ಕಾಮಗಾರಿಗೆ ಭೂಮಿಪೂಜೆ ಹಾಗೂ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

ತಾಲೂಕಿನ ವಿವಿಧ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆಯಿಂದ ಜನರಿಗೆ ತೊಂದರೆಯುಂಟಾಗಿದೆ. ಸಮಸ್ಯೆ ನಿವಾರಣೆಗೆ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಇನ್ನೊಂದು ವಾರದಲ್ಲಿ ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೇಯೋ ಅಲ್ಲಿ ತ್ವರಿತವಾಗಿ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಕೆಲಸ ಮಾಡುತ್ತೇವೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಡಜನರ ಬದುಕು ಹಸನಾಗಿದೆ. ರಾಜ್ಯದ ಜನತೆಗೆ ನೀಡಿದ ಆಶ್ವಾಸನೆಯಂತೆ ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಯೋಜನೆ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಯನ್ನು ಅಚ್ಚುಕಟ್ಟಾಗಿ ಜಾರಿಗೊಳಿಸುವ ಮೂಲಕ ಪ್ರತಿ ಮನೆಯ ಕುಟುಂಬದ ಜೀವನ ನಿರ್ವಹಣೆಗೆ ಅನುಕೂಲ ಕಲ್ಪಿಸಲಾಗಿದೆ ಎಂದರು.ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಕೇವಲ 8 ತಿಂಗಳಲ್ಲಿ ಗ್ಯಾರಂಟಿ ಯೋಜನೆಗೆ ಈಗಾಗಲೇ ₹39 ಸಾವಿರ ಕೋಟಿ ಅನುದಾನ ವ್ಯಯಿಸಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ವ್ಯವಸ್ಥೆ ಹದೆಗೆಡಲಿದೆ. ರಾಜ್ಯ ದಿವಾಳಿ ಆಗಲಿದೆ ಎಂದು ಅಪಪ್ರಚಾರ ಮಾಡಿದ ಬಿಜೆಪಿಗರೇ ಇಂದು ಕೇಂದ್ರದಲ್ಲಿ ಮೋದಿ ಗ್ಯಾರಂಟಿ ಜಾರಿಗೊಳಿಸಿದ್ದಾರೆ ಎಂದರು.ನೀರಾವರಿಗೆ ಆದ್ಯತೆ:ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ ನಯಾಪೈಸೆ ಅನುದಾನ ನೀಡದೇ ತಾರತಮ್ಯ ಎಸಗಿದ್ದಾರೆ. ಕ್ಷೇತ್ರದ ಅಳವಂಡಿ ಮತ್ತು ಬಹದ್ದೂರ್ ಬಂಡಿ- ನವಲ್ ಕಲ್ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸಿದ್ದು, ಸುಮಾರು ₹780 ಕೋಟಿ ವೆಚ್ಚದಲ್ಲಿ ಬ್ರಿಜ್ ಕಂ ಬ್ಯಾರೇಜ್, ಚೆಕ್ ಡ್ಯಾಂ ಹಾಗೂ ರಸ್ತೆಗಳ ಅಭಿವೃದ್ಧಿಗೆ ಲೋಕಸಭಾ ಚುನಾವಣೆ ನಂತರ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗುವುದು ಎಂದರು.ಜಿಪಂ ಮಾಜಿ ಅಧ್ಯಕ್ಷ ಟಿ. ಜನಾರ್ದನ ಹುಲಿಗಿ, ಎಸ್.ಬಿ. ನಾಗರಳ್ಳಿ, ರಾಜಶೇಖರ್ ಹಿಟ್ನಾಳ, ಕಾತರಕಿ-ಗುಡ್ಲಾನೂರು ಗ್ರಾಪಂ ಅಧ್ಯಕ್ಷೆ ಲಕ್ಷ್ಮವ್ವ ಇಡಗಲ್, ತಾಪಂ ಮಾಜಿ ಅಧ್ಯಕ್ಷ ಹಾಗೂ ಗ್ಯಾರಂಟಿ ಯೋಜನೆ ಅನುಷ್ಠಾನ ತಾಲೂಕಾಧ್ಯಕ್ಷ ಬಾಲಚಂದ್ರನ್, ಎಪಿಎಂಸಿ ಮಾಜಿ ಅಧ್ಯಕ್ಷ ಹನುಮರಡ್ಡಿ ಹಂಗನಕಟ್ಟಿ, ಕೆಎಂಎಫ್ ನಿರ್ದೇಶಕ ವೆಂಕನಗೌಡ್ರ ಹಿರೇಗೌಡ್ರ, ಜಿಲ್ಲಾ ಯುತ್ ಕಾಂಗ್ರೆಸ್ ಅಧ್ಯಕ್ಷ ಗವಿಸಿದ್ದನಗೌಡ ಮುದ್ದಾಬಳ್ಳಿ, ಮುಖಂಡರಾದ ಪ್ರಸನ್ನ ಗಡಾದ, ವಿಶ್ವನಾಥ ರಾಜು, ಕೃಷ್ಣರಡ್ಡಿ ಗಲಭಿ, ಗಾಳೆಪ್ಪ ಪೂಜಾರ್, ವಿರೂಪಣ್ಣ ನವೊದಯ, ಮುತ್ತಪ್ಪ ಇಡಗಲ್, ಶಿವಣ್ಣ ಶಹಾಪುರ, ವಿರೂಪಾಕ್ಷಗೌಡ, ಬಿಸರಳ್ಳಿ ಗ್ರಾಪಂ ಅಧ್ಯಕ್ಷ ರವೀಂದ್ರಗೌಡ ಮಾಲಿಪಾಟೀಲ್, ಗವಿಸಿದ್ದಪ್ಪ ಇಡಗಲ್, ರಮೇಶ ದೊಡ್ಡಮನಿ, ತಹಸೀಲ್ದಾರ್ ವಿಠ್ಠಲ ಚೌಗಲೆ, ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ ಪಾಷ ಪಲ್ಟನ್ ಇದ್ದರು.

Share this article