ಕನ್ನಡಪ್ರಭ ವಾರ್ತೆ ನೆಲಮಂಗಲ
ನಗರದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡ ಜಯಂತಿಗೆ ಪಕ್ಷಾತೀತವಾಗಿ ಎಲ್ಲಾ ಸಮುದಾಯದ ಮುಖಂಡರು ಭಾಗವಹಿಸಿ ಅದ್ಧೂರಿಯಾಗಿ ಆಚರಿಸುತ್ತಿರುವುದು ಸಂತೋಷದ ವಿಷಯ. ಮಾತು ಕೊಟ್ಟಂತೆ ಜಾಗ ಮುಂಜೂರು ಮಾಡಿ ಖಾತೆ ಮಾಡಿಸಿ ಒಕ್ಕಲಿಗರ ಕ್ಷೇಮಾಭಿವೃದ್ಧಿ ಟ್ರಸ್ಟ್‌ಗೆ ದಾಖಲೆ ಹಸ್ತಾಂತರ ಮಾಡಲಾಗಿದೆ. ರಾಜ್ಯದಲ್ಲಿಯೇ ವಿಶೇಷ ರೀತಿಯಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲಾಗುವುದು. ಕೆಂಪೇಗೌಡರು ಕೆರೆಗಳಿಗೆ ಹೆಚ್ಚು ಆದ್ಯತೆ ನೀಡಿರುವುದು ಮರೆಯುವಂತಿಲ್ಲ, ಅವರ ಯೋಜನೆಯಂತೆ ತಾಲೂಕಿನ ಕೆರೆಗಳ ಅಭಿವೃದ್ಧಿಗೆ 400 ಕೋಟಿಗೂ ಹೆಚ್ಚು ಅನುದಾನ ಹಾಗು ಅಂತರ್ಜಲ ಹೆಚ್ಚಳಕ್ಕೆ ವೃಷಭಾವತಿ ಶುದ್ಧೀಕರಿಸಿದ ನೀರು ಹಾಗೂ ಎತ್ತಿನ ಹೊಳೆ ನೀರನ್ನೂ ಸಹ ತರಲಾಗುತ್ತದೆ ಎಂದು ಭರವಸೆ ನೀಡಿದರು.
ಮಹಿಳಾ ಸಮಾಜಕ್ಕೆ ಸಹಕಾರ:ತಾಲೂಕಿನ ಒಕ್ಕಲಿಗರ ಮಹಿಳಾ ಸಮಾಜಕ್ಕೆ ಜಾಗ ಹಾಗೂ ತಾಲೂಕು ಒಕ್ಕಲಿಗರ ಸಂಘದ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ದಾಖಲೆ ನೀಡಿದರೆ ಅದಕ್ಕೂ ಸಹಕರಿಸಲಾಗುವುದು. ತಾಲೂಕಿನಲ್ಲಿ 1.5 ಎಕರೆಯಿಂದ 3 ಎಕರೆಯಷ್ಟು ಜಾಗ ಸಹ ನೀಡಲಾಗುತ್ತದೆ. ನೆಲಮಂಗಲ ನಗರದ ಅಮಾನಿಕೆರೆ ಅಭಿವೃದ್ಧಿ ಮಾಡಿ ನಾಡಪ್ರಭು ಕೆಂಪೇಗೌಡರ ಹೆಸರನ್ನು ನಾಮಕರಣ ಮಾಡಲಾಗುತ್ತದೆ ಎಂದರು ಘೋಷಿಸಿದರು.
ನಗರದ ಟಿ.ಬಿ ಬಸ್‌ನಿಲ್ದಾಣದಿಂದ ತಾಲೂಕು ಕಚೇರಿವರೆಗೂ ತಳಿರುತೋರಣದಿಂದ ಅಲಂಕರಿಸಿ ರಸ್ತೆಯಲ್ಲಿ 20ಕ್ಕೂ ಹೆಚ್ಚು ಕಲಾ ತಂಡಗಳು, 250ಕ್ಕೂ ಹೆಚ್ಚು ಪೂರ್ಣಕುಂಭದೊಂದಿಗೆ ಕೆಂಪೇಗೌಡರ ಪ್ರತಿಮೆಯನ್ನು ಬೆಳ್ಳಿ ರಥಯಲ್ಲಿ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು.
ಒಕ್ಕಲಿಗ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಎಂ.ಕೆ.ನಾಗರಾಜು ಮಾತನಾಡಿ, ನೆಲಮಂಗಲ ತಾಲೂಕಿನ ಇತಿಹಾಸದಲ್ಲಿ ಒಕ್ಕಲಿಗ ಸಮುದಾಯಕ್ಕೆ ಒಂದು ಅಡಿ ಜಾಗವಿರಲಿಲ್ಲ. ಸಮುದಾಯ ಭವನವಿರಲಿಲ್ಲ. ಆದರೆ ಶಾಸಕ ಎನ್.ಶ್ರೀನಿವಾಸ್ 15 ಕೋಟಿ ಬೆಲೆ ಬಾಳುವ 35,500 ಅಡಿ ಜಾಗವನ್ನು ಮಂಜೂರು ಮಾಡಿಸಿ ಸಮುದಾಯಕ್ಕೆ ನೀಡಿರುವುದು ಸಮುದಾಯ ಎಂದಿಗೂ ಮರೆಯುವುದಿಲ್ಲ. ಶಾಸಕರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ತಾಲೂಕಿನ ವಿವಿಧ ಸಮುದಾಯಗಳು ಹಾಗೂ ಒಕ್ಕಲಿಗ ಸಮುದಾಯದಲ್ಲಿ ಸಾಧನೆ ಮಾಡಿದ ರೈತರು, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರದ 50ಸಾಧಕರಿಗೆ ಕೆಂಪೇಗೌಡರತ್ನ ಪ್ರಶಸ್ತಿಯನ್ನು ನೀಡಿ ಅಭಿನಂದಿಸಿದರು.
ಊಟದ ವ್ಯವಸ್ಥೆ: ಮೆರವಣಿಗೆಯಲ್ಲಿ ಸೇರಿದ್ದವರಿಗೆಲ್ಲಾ ಶಾಸಕ ಶ್ರೀನಿವಾಸ್ ಊಟದ ವ್ಯವಸ್ಥೆ ಮಾಡಿಸಿದ್ದರು.