ಕನಕಗಿರಿ: ಶಿಕ್ಷಕರ ದಿನಾಚರಣೆಯಲ್ಲಿ ಲಕ್ಷಾಂತರ ಹಣ ಸಂಗ್ರಹ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೆ. 22ರಂದು ಜಿಪಂ ಸಿಇಒ ವರ್ಣಿತ್ ನೇಗಿ ಅವರಿಗೆ 2ನೇ ದೂರು ಸಲ್ಲಿಕೆಯಾಗಿದೆ.
ಅಖಂಡ ಗಂಗಾವತಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸೆ. 17ರಂದು ಕನಕಗಿರಿಯಲ್ಲಿ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಬಳಿಗೆ ಹೋಗಿ ಲಕ್ಷಾಂತರ ಹಣ ಸಂಗ್ರಹಿಸಲಾಗಿದೆ ಎಂದು ಆರೋಪಿಸಿ ತಾಲೂಕು ನೌಕರರ ಸಂಘದ ಅಧ್ಯಕ್ಷೆ ಶಂಶಾದಬೇಗಂ ವಿರುದ್ಧ 2ನೇ ದೂರನ್ನು ಸಾಮಾಜಿಕ ಹೋರಾಟಗಾರ ಬಾಳಪ್ಪ ಗದ್ದಿ ಜಿಪಂ ಸಿಇಒ ಅವರಿಗೆ ನೀಡಿದ್ದಾರೆ.ಶಿಕ್ಷಕರ ದಿನಾಚರಣೆಗೆ ಇಲಾಖೆಯಿಂದ ₹20 ಸಾವಿರ ನೀಡಲಾಗಿದೆ. ಫ್ಲೆಕ್ಸ್ ಹಾಗೂ ಅಕ್ಷರ ದಾಸೋಹದಿಂದ ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಸ್ವತಃ ಬಿಇಒ ಅವರು ಹೇಳಿಕೊಂಡಿದ್ದಾರೆ. ಈ ಕಾರ್ಯಕ್ರಮವನ್ನೆ ಬಂಡವಾಳ ಮಾಡಿಕೊಂಡಿರುವ ಶಿಕ್ಷಕಿ ಶಂಶಾದಬೇಗಂ ಅವರು ಪೋನ್ ಪೇ ಹಾಗೂ ನಗದು ರೂಪದಲ್ಲಿ ಲಕ್ಷಾಂತರ ಹಣ ವಸೂಲಿ ಮಾಡಿರುವುದು ಅಕ್ಷಮ್ಯ ಅಪರಾಧ. ಕೆಸಿಎಸ್ಆರ್ ನಿಯಮ ಗಾಳಿಗೆ ತೂರಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಅಲ್ಲದೇ 2023 ಅ. 2ರಂದು ಲಾಲ್ ಬಹದ್ದೂರ್ ಶಾಸ್ತ್ರಿಜೀ ಬದಲಾಗಿ ರಾಜೇಂದ್ರ ಪ್ರಸಾದ ಅವರ ಫೋಟೋಕ್ಕೆ ಪೂಜೆ ಸಲ್ಲಿಸಿದ್ದು, ಶಾಸ್ತ್ರೀ ಅವರಿಗೆ ಅವಮಾನ ಮಾಡಿದ್ದಾರೆ. ಈ ಎಲ್ಲ ದಾಖಲೆಗಳನ್ನು ನೀಡಿ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಈ ವರೆಗೂ ಕ್ರಮ ಕೈಗೊಂಡಿಲ್ಲ. ಹಣ ಎತ್ತುವಳಿ ಮಾಡಿರುವ ಕುರಿತು ಆಡಿಯೋ ಹಾಗೂ ಪೋನ್ ಪೇ ಮೂಲಕ ಹಣ ಪಡೆದಿರುವುದು ದಾಖಲೆಗಳಿವೆ. ಇದಕ್ಕೆಲ್ಲ ಬೆಂಬಲವಾಗಿ ನಿಂತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ದೂರುದಾರರು ಒತ್ತಾಯಿಸಿದ್ದಾರೆ. ವರದಿ ಸಲ್ಲಿಸಲು ಸೂಚನೆ: ಸೆ. 17ರಂದು ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಲಕ್ಷಾಂತರ ರು. ಹಣ ವಸೂಲಿ ಮಾಡಿರುವ ಕುರಿತು ದೂರು ಸಲ್ಲಿಕೆಯಾಗಿವೆ. ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಡಿಡಿಪಿಐಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ವರದಿ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ವರ್ಣಿತ್ ನೇಗಿ ಹೇಳಿದರು.