ಕೊಟ್ಟೂರು: ಕ್ಷೇತ್ರದಲ್ಲಿನ ಅಂತರ್ಜಲ ಸಮಸ್ಯೆಯುಳ್ಳ ಕೊಳವೆಬಾವಿಗಳನ್ನು ಮರುಪೂರಣ ಮಾಡಲು ತಮ್ಮ ಅನುದಾನವನ್ನು ಮೀಸಲಿಡುವುದಾಗಿ ಶಾಸಕ ಕೆ.ನೇಮರಾಜನಾಯ್ಕ್ ಭರವಸೆ ನೀಡಿದರು.ತಾಲೂಕಿನ ತಿಮ್ಮಲಾಪುರ ಗ್ರಾಮದಲ್ಲಿ ಸೋಮವಾರ ಐಸಿಆರ್‌ಎ (ಇಕ್ರಾ ಸಂಸ್ಥೆ) ನೇತೃತ್ವದ್ದಲ್ಲಿ ಆಯೋಜಿಸಿದ "ಕೊಳವೆಬಾವಿ ಮರುಪೂರಣ " ಈ ವಿಷಯ ಕುರಿತು ರೈತರ ಜೊತೆ ಸಂವಾದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ನಾಡಿಗೆ ಅನ್ನ ಕೊಡುವ ಅನ್ನದಾತ ರೈತ, ಅನ್ನದಾತನೇ ಕಷ್ಟಕ್ಕೀಡಾದರೆ ದೇಶವೇ ಸಂಕಷ್ಟಕ್ಕೀಡಾಗಬೇಕಾಗುತ್ತೆ. ಈ ಹಿನ್ನೆಲೆ ಸಮೀಕ್ಷೆ ಮಾಡಿ ಎಲ್ಲ ಬೋರ್ವೆಲ್ ಗಳ ವರದಿ ಕೊಡಿ, ನಿರ್ದಿಷ್ಟ ಅನುದಾನ ಮೀಸಲಿಡುವೆ. 2028ಕ್ಕೆ ಜಲ ಸಂರಕ್ಷಣೆಯಲ್ಲಿ ಈ ಕ್ಷೇತ್ರವನ್ನ ಮಾಧರಿ ಕ್ಷೇತ್ರವಾಗಿ ಮಾಡುವೆ ಎಂದು ಭರವಸೆ ನೀಡಿದರು.ಜಲ ತಜ್ಞ ಡಾ.ದೇವರಾಜ್ ರಡ್ಡಿ ಬೋರ್‌ವೆಲ್‌ಗಳಲ್ಲಿ ನೀರು ಕಡಿಮೆ ಆದ ತಕ್ಷಣ ರೈತರು ಇನ್ನೊಂದು, ಮತ್ತೊಂದು ಬೋರ್ವೆಲ್ ಕೊರೆಸುತ್ತಾರೆ. ಇದರಿಂದ ಭೂಮಿಯಲ್ಲಿನ ನೀರು ಬರಿದಾಗುತ್ತದೆಯೇ ವಿನಃ ಸಂರಕ್ಷಣೆ ಆಗಲಾರದು.
ಅಂತರ್ಜಲ ಹೆಚ್ಚಳ ಹಾಗೂ ಜಲ ಸಂರಕ್ಷಣೆಗೆ ರೈತರು ಕೊಳವೆಬಾವಿಗಳಿಗೆ ಮಳೆ ನೀರು ಇಂಗಿಸುವ ಮರುಪೂರಣ ಕಾರ್ಯ ಕೈಗೊಳ್ಳಬೇಕು ಎಂದು ಉಪನ್ಯಾಸ ನೀಡಿದರು.ಪ್ರತಿ ವರ್ಷ ಶೇ.100 ರಷ್ಟು ಮಳೆ ಬಂದರೆ ಶೇ.80ರಷ್ಟು ನೀರು ಹೊರಹೋಗುತ್ತದೆ. ಇದನ್ನು ತಮ್ಮ ಹೊಲಗಳಲ್ಲಿಯೇ ಇಂಗುಗುಂಡಿಗಳಿಂದ ಇಂಗಿಸಿದರೆ ಪ್ರತಿ ವರ್ಷ 1 ಕೋಟಿ ಲೀಟರ್ ನೀರು ಸಂಗ್ರಹ ಆಗುತ್ತದೆ. ಇದರಿಂದ ಕೊಳವೆ ಬಾವಿಗಳ ಅಂತರ್ಜಲ ಹೆಚ್ಚಳ ಮತ್ತು ಶುದ್ಧ ನೀರು ನಮಗೆ ದೊರೆಯುತ್ತದೆ ಎಂದು ವಿವರಿಸಿದರು.
ಹಗರಿಬೊಮ್ಮನಹಳ್ಳಿ ತಾಲೂಕು ಜೆಡಿಎಸ್ ವೈ. ಮಲ್ಲಿಕಾರ್ಜುನ್ ಮಾತನಾಡಿ, ನಾನು 43 ಸಾವಿರ ಬೋರ್ವೆಲ್ ಗಳ ಪಾಯಿಂಟ್ ಮಾಡಿರುವೆ. ಕೆಲವು ಕಡೆ 800-1000 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಮರುಪೂರಣ ಮಾಡಿಕೊಳ್ಳಲು 70 ರಿಂದ 75 ಸಾವಿರ ರು. ಬೇಕಾಗುತ್ತದೆ. ಇದು ರೈತರಿಗೆ ಆರ್ಥಿಕ ಹೊರೆಯಾಗುತ್ತದೆ. ಶಾಸಕರು ಈ ಬಗ್ಗೆ ಸದನದಲ್ಲಿ ರೈತರಿಗೆ ಸರ್ಕಾರದಿಂದ ಕೊಳವೆ ಬಾವಿಗಳ ಮರು ಪೂರಣ ಮಾಡುವುದಕ್ಕೆ ಅನುದಾನ ನೀಡುವಂತೆ ದ್ವನಿ ಎತ್ತಬೇಕು ಎಂದು ಮನವಿ ಮಾಡಿಕೊಂಡರು.ಇಕ್ರಾ ಸಂಸ್ಥೆ ಮುಖ್ಯಸ್ಥೆ ವಿ.ಗಾಯಿತ್ರಿ ಪ್ರಾಸ್ತಾವಿಕ ನುಡಿಗಳಾಡಿದರು. ರೈತ ಮಲ್ಲಿಕಾರ್ಜುನ ತನ್ನ ಹೊಲದಲ್ಲಿ ನೀರಿನ ಸಮಸ್ಯೆ ಇತ್ತು ಇಕ್ರಾ ಸಂಸ್ಥೆ ಮಾರ್ಗದರ್ಶನದ ಮೇರಿಗೆ ಬೋರ್‌ವೆಲ್ ಗೆ ಮರುಪೂರಣ ಮಾಡಿಕೊಂಡೆ. ಈಗ ಸಮೃದ್ಧ ನೀರು ಇದೆ ಎಂದು ಅನುಭವ ಹಂಚಿಕೊಂಡರು. ರೈತರಾದ ಉಮೇಶ ಹಾಗೂ ಗೀತಾ ಬೋರ್ವೆಲ್ ಮರು ಪೂರಣದಿಂದಾದ ಲಾಭವನ್ನು ತಿಳಿಸಿದರು. ತಾಪಂ ಇಒ ಡಾ.ಆನಂದ ಕುಮಾರ, ರುದ್ರಪ್ಪ, ಲಕ್ಕಪ್ಪ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಪಂ ನರೇಗಾ ಅಧಿಕಾರಿ ವಿಜಯಕುಮಾರ್, ಭೂಮಿ ಮಿತ್ರ ಒಕ್ಕೂಟದ ಅಧ್ಯಕ್ಷ ಅಳವಂಡಿ ಕೊಟ್ರೇಶ, ನೀಲಕಂಠಪ್ಪ, ಚಂದ್ರಣ್ಣ, ಕೃಷಿ ಇಲಾಖೆ ರಾಕೇಶ್, ಶ್ಯಾಮ್ ಸುಂದರ ಇದ್ದರು.