ಕಾಲ್ತುಳಿತದಿಂದ ಮೃತಪಟ್ಟ ಪೂರ್ಣಚಂದ್ರ ಹುಟ್ಟೂರು ರಾಯಸಮುದ್ರದಲ್ಲಿ ಅಂತ್ಯಕ್ರಿಯೆ

KannadaprabhaNewsNetwork |  
Published : Jun 05, 2025, 11:47 PM ISTUpdated : Jun 05, 2025, 11:48 PM IST
5ಕೆಎಂಎನ್ ಡಿ20,21,22 | Kannada Prabha

ಸಾರಾಂಶ

ಕಾಲ್ತುಳಿತದ ಘಟನೆಯಲ್ಲಿ ದೊಡ್ಡವರ ಮಕ್ಕಳು ಯಾರಾದರೂ ಸತ್ತಿದ್ದಾರಾ.? ಎಲ್ಲಾ ಸತ್ತಿರೋದು ಬಡವರ ಮಕ್ಕಳು. ದೊಡ್ಡೋರ ಮಕ್ಕಳನ್ನು ಸೆಕ್ಯುರಿಟಿ ಮಾಡಿಕೊಂಡು ಕರೆದುಕೊಂಡು ಹೋಗಿದ್ದಾರೆ ಎಂದು ಶಿಕ್ಷಕ ಚಂದ್ರು ತಮ್ಮ ಎದೆಯಾಳದ ದುಃಖದ ಕಿಚ್ಚನ್ನು ಹೊರಹಾಕಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಆರ್ ಸಿಬಿ ತಂಡದ ಐಪಿಎಲ್ ಕಪ್ ವಿಜಯೋತ್ಸವದ ವೇಳೆ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟ ಪೂರ್ಣಚಂದ್ರ ಎಂಬ ಯುವಕನ ಅಂತ್ಯಕ್ರಿಯೆ ಹುಟ್ಟೂರು ರಾಯಸಮುದ್ರ ಗ್ರಾಮದ ಮೃತರ ಜಮೀನಿನಲ್ಲಿ ನಡೆಯಿತು.

ಪೂರ್ಣಚಂದ್ರರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿತ್ತು. ಶಾಸಕ ಎಚ್.ಟಿ.ಮಂಜು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಸೇರಿದಂತೆ ಸಂಬಂಧಿಕರು ಮೃತ ಯುವಕನ ತಂದೆ ಶಿಕ್ಷಕ ಚಂದ್ರು ಅವರ ನಿವಾಸಕ್ಕೆ ಆಗಮಿಸಿ ಸಾಂತ್ವನ ಹೇಳಿದರು.

ಗುರುವಾರ ಮುಂಜಾನೆ ಸುಮಾರು 3.30ರ ವೇಳೆಗೆ ಮೃತ ಪೂರ್ಣಚಂದ್ರರ ಪಾರ್ಥೀವ ಶರೀರ ರಾಯಸಮುದ್ರ ಗ್ರಾಮಕ್ಕೆ ಆಗಮಿಸಿತು. ಮನೆ ಬಳಿಗೆ ಬಂದ ಮಗನ ಪಾರ್ಥೀವ ಶರೀರವನ್ನು ನೋಡುತ್ತಲೇ ಶಿಕ್ಷಕ ಚಂದ್ರು, ಪತ್ನಿ ಕಾಂತಾಮಣಿ ಸೇರಿದಂತೆ ಸಂಬಂಧಿಕರ ರೋಧನ ಮುಗಿಲು ಮುಟ್ಟಿತು.

ಸರ್ಕಾರದ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮೃತ ಪೂರ್ಣಚಂದ್ರರ ಶವ ಗ್ರಾಮಕ್ಕೆ ಸಕಾಲಕ್ಕೆ ಬರುವಂತೆ ಶ್ರಮಿಸಿದ್ದ ಶಾಸಕ ಎಚ್.ಟಿ.ಮಂಜು ಇಂದೂ ಕೂಡ ಮೃತರ ನಿವಾಸಕ್ಕೆ ಆಗಮಿಸಿ, ಮೃತ ಪೂರ್ಣಚಂದ್ರ ಅವರ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ನನ್ನ ಮಗನ ಭವಿಷ್ಯದ ಬಗ್ಗೆ ಸಾಕಷ್ಟು ಕನಸು ಕಟ್ಟಿಕೊಂಡಿದ್ದೆ. ಅನಿರೀಕ್ಷಿತ ಸಾವಿನಿಂದ ನನ್ನ ಕನಸುಗಳು ನುಚ್ಚುನೂರಾಗಿವೆ. ನನಗೆ ಇದ್ದ ಮಗನನ್ನು ಕಳೆದುಕೊಂಡು ಬದುಕು ಬರಿದಾಗಿದೆ. ಮಗ ಪೂರ್ಣಚಂದ್ರನಿಗೆ ಮದುವೆ ಮಾಡಲು ಹುಡುಗಿ ನೋಡ್ತಾ ಇದ್ದೋ. ಮದುವೆಯಲ್ಲಿ ಹಾರ ಹಾಕಬೇಕಾಗಿತ್ತು. ಈಗ ಎಲ್ಲರೂ ಅವನಿಗೆ ಹಾರ ಹಾಕಿದ್ರು ಎಂದು ತಂದೆ ಚಂದ್ರು ಅಳಲು ತೋಡಿಕೊಂಡರು.

ಮಗನಿಗೆ ಕ್ರಿಕೆಟ್ ಅಂದ್ರೆ ತುಂಬಾ ಇಷ್ಟ. ಅವನ ಕ್ರಿಕೆಟ್ ಪ್ರೇಮವೇ ಈಗ ಬಲಿ ತೆಗೆದುಕೊಂಡಿದೆ. ಈ ಘಟನೆಗೆ ಕ್ರಿಕೆಟಿಗರನ್ನು ಹೊಣೆ ಮಾಡೋಕೆ ಆಗಲ್ಲ. ಇದಕ್ಕೆ ಸರ್ಕಾರವೇ ನೇರ ಹೊಣೆ. ಯಾವುದೇ ವಿಜಯೋತ್ಸವ ಮಾಡಬೇಕಾದರೆ ಅದಕ್ಕೆ ತಕ್ಕಂತೆ ಪೂರ್ವ ತಯಾರಿ ಮಾಡಬೇಕಿತ್ತು ಎಂದರು.

ಕಾಲ್ತುಳಿತದ ಘಟನೆಯಲ್ಲಿ ದೊಡ್ಡವರ ಮಕ್ಕಳು ಯಾರಾದರೂ ಸತ್ತಿದ್ದಾರಾ.? ಎಲ್ಲಾ ಸತ್ತಿರೋದು ಬಡವರ ಮಕ್ಕಳು. ದೊಡ್ಡೋರ ಮಕ್ಕಳನ್ನು ಸೆಕ್ಯುರಿಟಿ ಮಾಡಿಕೊಂಡು ಕರೆದುಕೊಂಡು ಹೋಗಿದ್ದಾರೆ ಎಂದು ಶಿಕ್ಷಕ ಚಂದ್ರು ತಮ್ಮ ಎದೆಯಾಳದ ದುಃಖದ ಕಿಚ್ಚನ್ನು ಹೊರಹಾಕಿದರು.

ವೀರಶೈವ ಸಂಪ್ರದಾಯದಂತೆ ಪೂರ್ಣಚಂದ್ರರ ಅಂತಿಮ ಸಂಸ್ಕಾರವನ್ನು ಅವರ ಜಮೀನಿನಲ್ಲಿ ನೆರವೇರಿಸಲಾಯಿತು. ಅಂತ್ಯಕ್ರಿಯೆಯಲ್ಲಿ ಶಾಸಕ ಎಚ್.ಟಿ.ಮಂಜು, ಆರ್‌ಟಿಒ ಮಲ್ಲಿಕಾರ್ಜುನ್, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಬಿಇಒ ವೈ.ಕೆ.ತಿಮ್ಮೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಆರ್.ಪೂರ್ಣಚಂದ್ರ ತೇಜಸ್ವಿ, ಮಾಜಿ ಅಧ್ಯಕ್ಷ ಪದ್ಮೇಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಂದಘಟ್ಟ ಆನಂದ್ ಸೇರಿದಂತೆ ಸಾವಿರಾರು ಸಂಖ್ಯೆಯ ಜನರು ಭಾಗಿಯಾಗಿದ್ದರು.

-----------

‘ಆರ್ ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಲ್ಲಿ ಪೂರ್ಣಚಂದ್ರ ಮೃತಪಟ್ಟಿದ್ದು ಅವರ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಯುವಜನರಲ್ಲಿ ಕ್ರೀಡಾಭಿಮಾನ ಇರಲಿ. ಆದರೆ, ಅಂಧಾಭಿಮಾನ ಬೇಡ. ಈ ಘಟನೆಗೆ ರಾಜ್ಯ ಸರ್ಕಾರವೇ ನೇರ ಹೊಣೆ. ಕ್ರಿಕೆಟ್ ದೇಶದಲ್ಲಿ ಕೇವಲ ಕ್ರೀಡೆಯಾಗಿ ಉಳಿದಿಲ್ಲ. ಅದು ಯುವಜನರ ರಕ್ತದಲ್ಲಿ ಬೆರತು ಹೋಗಿದೆ. ಇದರ ಅರಿವು ರಾಜ್ಯ ಸರ್ಕಾರಕ್ಕೆ ಇರಬೇಕಾಗಿತ್ತು. ಸ್ಟೇಡಿಯಂ ಸಾಮರ್ಥ್ಯಕ್ಕೆ ತಕ್ಕಂತೆ ಜನರು ಸೇರುವ ಹಾಗೇ ನೋಡಿಕೊಳ್ಳಬೇಕಿತ್ತು.’

ಎಚ್.ಟಿ.ಮಂಜು, ಶಾಸಕರು, ಕೆ.ಆರ್.ಪೇಟೆ.

PREV

Recommended Stories

ಡಾ.ಪ್ರಭಾಕರ್‌ ಕೋರೆ 78ನೇ ಜನ್ಮದಿನ ಅರ್ಥಪೂರ್ಣ ಆಚರಣೆ
ರಾಜಕೀಯ ದುರುದ್ದೇಶಕ್ಕೆ ದೇವಾಲಯಗಳ ಬಳಕೆ ಸಲ್ಲದು