ಕನ್ನಡಪ್ರಭ ವಾರ್ತೆ ಬೇಲೂರುಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಭೂಮಿಕ್ ಅಂತ್ಯಕ್ರಿಯೆ ಆತನ ಹುಟ್ಟೂರಾದ ತಾಲೂಕಿನ ಕುಪ್ಪಗೋಡಿನಲ್ಲಿ ಗುರುವಾರ ನಡೆಯಿತು.ಭೂಮಿಕ್ (20) ಬೆಂಗಳೂರಿನಲ್ಲಿ ದ್ವಿತೀಯ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ. ಕಾಲೇಜಿಗೆ ತೆರಳಿದ ಸಂದರ್ಭದಲ್ಲಿ ಸ್ನೇಹಿತರ ಜೊತೆಗೂಡಿ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಿದ್ದಾನೆ. ಕಾಲು ತುಳಿತ ಸಂದರ್ಭದಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಭೂಮಿಕ್ ತಾಯಿ ಸಾಕಷ್ಟು ಬಾರಿ ಕರೆ ಮಾಡಿದರೂ ಮೊಬೈಲ್ ರಿಸೀವ್ ಆಗಿಲ್ಲ. ಒಂದು ಗಂಟೆಯ ನಂತರ ನಿಮ್ಮ ಮಗ ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾನೆ ಎಂದು ಮೊಬೈಲ್‌ನಲ್ಲಿ ಮಾಹಿತಿ ತಿಳಿದು ಬಂದಿದ್ದು, ಇದರಿಂದ ತಾಯಿ ತೀವ್ರ ಅಸ್ವಸ್ಥಗೊಂಡಿದ್ದರು. ನಂತರ ಆಸ್ಪತ್ರೆಗೆ ತೆರಳಿ ಶವವನ್ನು ವೀಕ್ಷಿಸಿದಾಗ ತಮ್ಮ ಪುತ್ರ ಎಂದು ಖಚಿತಪಡಿಸಿಕೊಂಡ ನಂತರ ಪೋಷಕರ ಆಕ್ರಂದನ ಹೇಳತೀರದಾಗಿತ್ತು. ಭೂಮಿಕ್ ಅವರ ತಂದೆ ಡಿ.ಟಿ.ಲಕ್ಷ್ಮಣ ತಾಲೂಕಿನ ಕುಪ್ಪುಗೋಡು ಗ್ರಾಮದವರಾಗಿದ್ದು, ಅವರಿಗೆ ಸೇರಿದ ಜಮೀನಿದೆ. ವಿದ್ಯಾಭ್ಯಾಸದಲ್ಲಿ ಚುರುಕಾಗಿದ್ದ ಭೂಮಿಕ್ ಕ್ರಿಕೆಟ್ ಬಗ್ಗೆಯೂ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದ. ಒಬ್ಬನೇ ಮಗನಾಗಿದ್ದರಿಂದ ಅತಿ ಹೆಚ್ಚು ಪ್ರೀತಿಯಿಂದ ಬೆಳೆಸಿ ಅವನ ಮುಂದಿನ ಜೀವನಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆಗಳನ್ನು ತಂದೆ ಕಲ್ಪಿಸಿದ್ದರು.
ಸರ್ಕಾರವೇ ನೇರ ಹೊಣೆ:
ಈ ಕ್ರಿಕೆಟ್ ಸಂಭ್ರಮಾಚರಣೆ ಎಂಬ ಭೂತ ನನ್ನ ಮಗನನ್ನು ಬಲಿಪಡದಿದೆ. ಯಾವುದೇ ಪೋಷಕರಿಗೂ ಸಹ ಇಂತಹ ದುಸ್ಥಿತಿ ಬರಬಾರದು. ಸರ್ಕಾರ ಯಾವುದೇ ಭದ್ರತೆ ಇಲ್ಲದೆ, ಮುಂಜಾಗ್ರತೆ ಇಲ್ಲದೆ ಈ ರೀತಿ ಸಮಾರಂಭ ಏರ್ಪಾಡು ಮಾಡಿದ್ದು ನನ್ನ ಮಗ ಸೇರಿದಂತೆ ಹಲವು ಅಮಾಯಕರ ಪ್ರಾಣ ಹೋಗಲು ಕಾರಣ. ಹಾಗೆಯೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬೇಜವಾಬ್ದಾರಿತನವೇ ಇದಕ್ಕೆ ಕಾರಣ ಎಂದು ಪೋಷಕರು ಹಿಡಿಶಾಪ ಹಾಕಿದರು.* ಬಾಕ್ಸ್; ಸಂಭ್ರಮಾಚರಣೆ ಸಮಾರಂಭಗಳನ್ನು ಕೈಬಿಡಲು ಆಗ್ರಹಕುಪ್ಪುಗೋಡು ಗ್ರಾಮಸ್ಥರಾದ ಭರತ್, ಹರೀಶ್, ರಂಜಿತ್ ಮಾತನಾಡಿ, ಕಳೆದ 20 ವರ್ಷಗಳ ಹಿಂದೆ ಬೆಂಗಳೂರಿಗೆ ಲಕ್ಷ್ಮಣ್ ಕುಟುಂಬ ತೆರಳಿತ್ತು. ಆಗಾಗ ಕುಟುಂಬದೊಂದಿಗೆ ಗ್ರಾಮಕ್ಕೆ ಬಂದು ಒಂದೆರಡು ದಿನ ಇದ್ದು ತೆರಳುತ್ತಿದ್ದರು. ಭೂಮಿಕ್ ನಮ್ಮೆಲ್ಲರ ಪ್ರೀತಿಯ ಹುಡುಗನಾಗಿದ್ದ. ಆದರೆ ಇಂದು ಶವವಾಗಿ ನಮ್ಮ ಗ್ರಾಮಕ್ಕೆ ಬಂದಿರುವುದು ಬಹಳ ದುಃಖಕರವಾಗಿದೆ. ಕ್ರಿಕೆಟ್ ಎಂಬ ಸಂಭ್ರಮಾಚರಣೆಯ ಕರಿ ನೆರಳಿಗೆ ನಮ್ಮ ಯುವಕ ಬಲಿಯಾಗಿದ್ದು, ಆರ್‌ಸಿಬಿ ಗೆಲ್ಲಲೇ ಬಾರದಿತ್ತು ಎಂದು ಈಗ ಅನಿಸತೊಡಗಿದೆ. ಕ್ರಿಕೆಟ್ ಹುಚ್ಚಾಟಕ್ಕೆ ಯುವಕರು ಬಲಿಯಾಗುತ್ತಿದ್ದು ಭಾರತದಲ್ಲಿ ಐಪಿಎಲ್ ಮ್ಯಾಚ್‌ಗಳನ್ನೇ ಬ್ಯಾನ್ ಮಾಡಬೇಕು. ಸಂಭ್ರಮಾಚರಣೆ ಸಮಾರಂಭಗಳನ್ನು ಕೈಬಿಡಬೇಕು ಎಂದು ತಮ್ಮ ದುಃಖ ತೋಡಿಕೊಂಡರು.