ಬಾಲಕಿ ಹತ್ಯೆ ಆರೋಪಿ ಅಂತ್ಯಸಂಸ್ಕಾರ

KannadaprabhaNewsNetwork |  
Published : May 04, 2025, 01:32 AM IST
ಆರೋಪಿ | Kannada Prabha

ಸಾರಾಂಶ

ಏ. 13ರಂದು ರಿತೇಶ ಕುಮಾರ್​ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಬಳಿಕ ಆಕೆಯನ್ನು ನಿರ್ಮಾಣ ಹಂತದ ಕಟ್ಟಡದ ಶೌಚಾಲಯದೊಳಗೆ ಹತ್ಯೆ ಮಾಡಿ ಪರಾರಿಯಾಗಿದ್ದ. ಸಾರ್ವಜನಿಕರು ರೊಚ್ಚಿಗೆದ್ದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಹುಬ್ಬಳ್ಳಿ: ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಯತ್ನಕ್ಕೆ ಮುಂದಾಗಿ ಬಳಿಕ ಹತ್ಯೆಗೈದು ಪೊಲೀಸ್‌ ಎನ್‌ಕೌಂಟರ್‌ಗೆ ಬಲಿಯಾದ ಬಿಹಾರ ಮೂಲದ ವಲಸೆ ಕಾರ್ಮಿಕ ರಿತೇಶ್ ಕುಮಾರ್‌ ಅಂತ್ಯಸಂಸ್ಕಾರ ಶನಿವಾರ ನಡೆಯಿತು.

ಬರೋಬ್ಬರಿ 20 ದಿನಗಳ ನಂತರ ಸಿಐಡಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನಡೆಯಿತು. ಅಧಿಕಾರಿಗಳು ವಿಡಿಯೋ ರೆಕಾರ್ಡ್‌ ಮಾಡಿಕೊಂಡರು.

ಪೈಶಾಚಿಕ ಕೃತ್ಯ: ಏ. 13ರಂದು ರಿತೇಶ ಕುಮಾರ್​ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಬಳಿಕ ಆಕೆಯನ್ನು ನಿರ್ಮಾಣ ಹಂತದ ಕಟ್ಟಡದ ಶೌಚಾಲಯದೊಳಗೆ ಹತ್ಯೆ ಮಾಡಿ ಪರಾರಿಯಾಗಿದ್ದ. ಸಾರ್ವಜನಿಕರು ರೊಚ್ಚಿಗೆದ್ದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಎಲ್ಲೆಡೆ ತೀವ್ರ ರೀತಿಯಲ್ಲಿ ಪ್ರತಿಭಟನೆಗಳು ನಡೆದಿದ್ದವು. ಇದರಿಂದ ಒತ್ತಡಕ್ಕೆ ಮಣಿದ ಅಶೋಕ ನಗರ ಠಾಣೆ ಪೊಲೀಸರು ಸಂಜೆ ವೇಳೆಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಆರೋಪಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಆತ ಇದ್ದ ಶೆಡ್ ಬಳಿ ಕರೆದುಕೊಂಡು ಹೋಗಿದ್ದರು. ಈ ವೇಳೆ ರಾಯನಾಳ ಬ್ರಿಡ್ಜ್ ಬಳಿ ರಿತೇಶ್ ಕುಮಾರ್‌ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದರೂ ರಿತೇಶ್ ಪರಾರಿಯಾಗುವ ತನ್ನ ಪ್ರಯತ್ನ ಮುಂದುವರೆಸಿದ್ದ. ಆಗ ಪೊಲೀಸರು ಗುಂಡು ಹಾರಿಸಿದ್ದರಿಂದ ಆತ ಮೃತಪಟ್ಟಿದ್ದ.

ಪಿಐಎಲ್‌: ಈ ನಡುವೆ ಆರೋಪಿಯ ಶವ ಅಂತ್ಯಸಂಸ್ಕಾರ ಮಾಡಬಾರದು, ಸಾಕ್ಷ್ಯ ನಾಶವಾಗಬಹುದು ಎಂದು ಕೋರಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಹಾಗಾಗಿ ಎನ್‌ಕೌಂಟರ್‌ಗೆ ಬಲಿಯಾದ ರಿತೇಶ್​ ಮೃತದೇಹವನ್ನು ಕೆಎಂಸಿಆರ್​ಐ ಶವಾಗಾರದ ಕೋಲ್ಡ್ ಸ್ಟೋರೇಜ್​ನಲ್ಲಿ ಇಡಲಾಗಿತ್ತು. ಶವ ಕೊಳೆಯುತ್ತಾ ಬಂದ ಹಿನ್ನೆಲೆ ಸಿಐಡಿ ಪೊಲೀಸರಿಗೆ ಶವ ಡಿಕಾಂಪೋಸ್ ಆಗುತ್ತಿದೆ, ಆದಕಾರಣ ಇದನ್ನು ವಶಕ್ಕೆ ಪಡೆಯುವಂತೆ ಕೆಎಂಸಿಆರ್‌ಐ ಪತ್ರ ಬರೆದಿತ್ತು. ಸಿಐಡಿ ಪೊಲೀಸರು ಶವದ ಸಮಾಧಿ ಮಾಡುವ ಅಗತ್ಯವಿದೆ, ಶವ ಕೊಳೆಯುತ್ತಿದೆ ಎಂದು ಕೋರ್ಟ್‌ಗೆ ಮಾಹಿತಿ ನೀಡಿದ್ದರು.

ವಿಚಾರಣೆ ನಡೆಸಿದ್ದ ಕೋರ್ಟ್, ಅಂತ್ಯಸಂಸ್ಕಾರ ಮಾಡಲು ಇತ್ತೀಚೆಗೆ ಅನುಮತಿ‌ ನೀಡಿತ್ತು‌. ಶವವನ್ನು ಹೂಳಬೇಕು ಎಂದು ಆದೇಶಿಸಿತ್ತು. ಕೆಎಂಸಿಆರ್‌ಐ ಶವಗಾರದಲ್ಲಿದ್ದ ಶವವನ್ನು ಸಿಐಡಿ ಎಸ್ಪಿ ವೆಂಕಟೇಶ ಎನ್ ಸಮ್ಮುಖದಲ್ಲಿ ವಿಡಿಯೋ ರೆಕಾರ್ಡ್ ಮೂಲಕ ನಗರದ ಹೊರವಲಯದ ಬಿಡನಾಳ ಸ್ಮಶಾನಕ್ಕೆ ಸಾಗಿಸಲಾಯಿತು.

ಮಹಾನಗರ ಪಾಲಿಕೆ ಸಿಬ್ಬಂದಿ ಶವವನ್ನು ಸ್ಮಶಾನದಲ್ಲಿ ಹೈಕೋರ್ಟ್ ಆದೇಶದಂತೆ ಅಂತ್ಯಸಂಸ್ಕಾರ ಮಾಡಿದರು. ಸಿಐಡಿ ಎಸ್ಪಿ ವೆಂಕಟೇಶ್​, ಶಹರ ತಹಸೀಲ್ದಾರ್​​ ಕಲನಗೌಡ ಹಾಗೂ ಎಸಿಪಿ ಶಿವಪ್ರಕಾಶ್​ ನಾಯಕ್​ ಅವರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಅಂತ್ಯಸಂಸ್ಕಾರವನ್ನು ಸಿಐಡಿ ಅಧಿಕಾರಿಗಳು ವಿಡಿಯೋ ರೆಕಾರ್ಡ್ ಮಾಡಿಕೊಂಡರು.

ಬಳಿಕ ಮಾತನಾಡಿದ ತಹಸೀಲ್ದಾರ್ ಕಲಗೌಡ ಪಾಟೀಲ, ಕೋರ್ಟ್‌ ಆದೇಶದಂತೆ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದಷ್ಟೇ ತಿಳಿಸಿದರು.

ಕುಟುಂಬಸ್ಥರು ಸಿಗಲಿಲ್ಲ: ಈ ನಡುವೆ ಆರೋಪಿ ರಿತೇಶ್ ಕುಮಾರನ ಮೂಲ ಹುಡುಕಲು ಪೊಲೀಸರು ಭಾರೀ ಹರಸಾಹಸಪಟ್ಟಿದ್ದುಂಟು. ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶ ಸೇರಿದಂತೆ ವಿವಿಧೆಡೆ ತೆರಳಿ ಆತನ ಕುಟುಂಬಸ್ಥರನ್ನು ಹುಡುಕಾಡಿದ್ದುಂಟು. ಆದರೂ ಆತನ ಕುಟುಂಬಸ್ಥರು ಮಾತ್ರ ಪತ್ತೆಯಾಗಲಿಲ್ಲ. ಹೀಗಾಗಿ ಪೊಲೀಸರೇ ಅಂತ್ಯಸಂಸ್ಕಾರ ಮಾಡುವಂತಾಯಿತು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌