ಭಾರತದ ಆಧ್ಯಾತ್ಮಿಕ ಬಲದಿಂದಾಗಿ ಭವಿಷ್ಯ: ಬಸವಾನಂದ ಸ್ವಾಮೀಜಿ

KannadaprabhaNewsNetwork |  
Published : Apr 11, 2024, 12:45 AM IST
ಫೋಟೋ : ೧೦ಕೆಎಂಟಿ_ಏಪಿಆರ್_ಕೆಪಿ1 : ಯುಗಾದಿ ಉತ್ಸವ ಸಮಿತಿಯಿಂದ ಧರ್ಮಸಭೆಯನ್ನು ಶ್ರೀ ಬಸವಾನಂದ ಮಹಾಸ್ವಾಮೀಜಿ ಉದ್ಘಾಟಿಸಿದರು. ಎಸ್. ಜಿ. ನಾಯ್ಕ, ಜಿ.ಎಸ್.ಹೆಗಡೆ, ರಾಮದಾಸ ಗುನಗಿ, ಸುಧಾ ಶಾನಭಾಗ ಇನ್ನಿತರರು ಇದ್ದರು. | Kannada Prabha

ಸಾರಾಂಶ

ಭಾರತ ಪರಮಾತ್ಮನ ಪ್ರಯೋಗಶಾಲೆ. ಇಲ್ಲಿ ಸಮಸ್ತ ಸೃಷ್ಟಿ- ಸ್ಥಿತಿಯೊಂದಿಗೆ ನೀತಿ- ಮೌಲ್ಯಗಳ ಪ್ರಯೋಗವೂ ನಡೆಯುತ್ತದೆ ಎಂದು ಬಸವಾನಂದ ಸ್ವಾಮೀಜಿ ತಿಳಿಸಿದರು.

ಕುಮಟಾ: ಪ್ರಾಮಾಣಿಕತೆಯ ಬದುಕು, ಸ್ತ್ರೀ ಶೋಷಣೆ- ಹಿಂಸೆರಹಿತ ಚಿಂತನೆ, ಮಾನವೀಯ ಮೌಲ್ಯಗಳ ಆರಾಧನೆ, ಸದಾ ದೈವಚಿಂತನೆಯೂ ದೇಶಭಕ್ತಿಯೇ ಆಗಿದೆ. ಇದೇ ನಿಜವಾದ ದೇಶಭಕ್ತಿಯ ವ್ಯಾಖ್ಯೆ ಎಂದು ಧಾರವಾಡದ ಮನಗುಂಡಿಯ ಗುರುಬಸವ ಮಹಾಮನೆಯ ಬಸವಾನಂದ ಸ್ವಾಮೀಜಿ ನುಡಿದರು.

ಇಲ್ಲಿನ ಯುಗಾದಿ ಉತ್ಸವ ಸಮಿತಿಯವರು ಮಂಗಳವಾರ ಮಣಕಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಯುಗಾದಿ ಉತ್ಸವದ ಧರ್ಮಸಭೆ ಉದ್ಘಾಟಿಸಿ ಆಶೀರ್ವದಿಸಿದರು.

ಭಾರತ ಪರಮಾತ್ಮನ ಪ್ರಯೋಗಶಾಲೆ. ಇಲ್ಲಿ ಸಮಸ್ತ ಸೃಷ್ಟಿ- ಸ್ಥಿತಿಯೊಂದಿಗೆ ನೀತಿ- ಮೌಲ್ಯಗಳ ಪ್ರಯೋಗವೂ ನಡೆಯುತ್ತದೆ. ಭಾರತದ ನೆಲದಲ್ಲಿ ಹುಟ್ಟಿದಂಥ ಜ್ಞಾನಿಗಳು, ಮಹಾತ್ಮರು ಅಮೆರಿಕದಂಥ ದೇಶಗಳಲ್ಲಿ ಯಾವತ್ತೂ ಹುಟ್ಟದೇ ಇರುವುದಕ್ಕೆ ಈ ನೆಲದ ವಿಶೇಷತೆಯೇ ಕಾರಣ. ಇಲ್ಲಿ ಆಧ್ಯಾತ್ಮಿಕ ಬಲ ಇರುವುದರಿಂದಲೇ ಭಾರತಕ್ಕೆ ಭವಿಷ್ಯವಿದೆ ಎಂದರು.

ದೇಶ ಭಕ್ತರನ್ನು ವಿರೋಧಿಸುವ ಭರದಲ್ಲಿ, ದೇಶ ಛಿದ್ರಗೊಳಿಸುವ ಕಾರ್ಯ ಮಾಡಬಾರದು ಎಂದು ಕರೆ ನೀಡಿದ ಶ್ರೀಗಳು, ನಾವೆಲ್ಲರೂ ಒಂದು ಎಂಬ ಭಾವದಿಂದ ಹದಿನೈದು ವರ್ಷದಿಂದ ಯುಗಾದಿ ಉತ್ಸವ ಆಚರಿಸುತ್ತಿರುವುದು ಅನುಕರಣೀಯ ಎಂದರು.

ವಿದ್ವಾನ್ ಡಾ. ಗೋಪಾಲಕೃಷ್ಣ ಹೆಗಡೆ ಪಂಚಾಂಗ ಶ್ರವಣ ನಡೆಸಿಕೊಟ್ಟರು. ಮಾತಾಪಿತೃ ಪೂಜನ ನಡೆಯಿತು. ಭಜನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕೂಜಳ್ಳಿಯ ಭಾವಧಾರಾ ತಂಡ, ದ್ವಿತೀಯ ಸ್ಥಾನ ಪಡೆದ ಗಂಧರ್ವ ಕಲಾಕೇಂದ್ರದ ತಂಡ, ತೃತೀಯ ಸ್ಥಾನ ಪಡೆದ ಶಿರಸಿಯ ಸ್ವರ್ಣವಲ್ಲಿ ಮಾತೃವೃಂದ ಹಾಗೂ ಕುಮಟಾದ ಗಂಧರ್ವ ಭಾರತಿ ತಂಡಕ್ಕೆ ಬಹುಮಾನ ವಿತರಿಸಲಾಯಿತು. ಸಾಧಕರಾದ ಶ್ರೀಧರ ನಾಯ್ಕ, ಮಂಜುನಾಥ ಪಟಗಾರ, ಮಹೇಶ ಹರಿಕಾಂತ, ಗಣಪತಿ ಮುಕ್ರಿ, ವೆಂಕಟೇಶ ಪ್ರಭು, ಬಲೀಂದ್ರ ಗೌಡ ಅವರನ್ನು ಸನ್ಮಾನಿಸಲಾಯಿತು.

ವೇ. ಕೃಷ್ಣಮೂರ್ತಿ ಮೈಯರ್ ಅವರಿಂದ ವೇದಘೋಷದೊಂದಿಗೆ ಆರಂಭವಾದ ಧರ್ಮಸಭೆಯಲ್ಲಿ ಯುಗಾದಿ ಉತ್ಸವ ಸಮಿತಿಯ ಅಧ್ಯಕ್ಷ ಡಾ. ಸುರೇಶ ಹೆಗಡೆ ಸ್ವಾಗತಿಸಿದರು. ಸಮಿತಿಯ ಸದಸ್ಯ ಎಂ.ಟಿ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮದಾಸ ಗುನಗಿ ವಂದಿಸಿದರು. ಗೌರವಾಧ್ಯಕ್ಷ ಸುಬ್ರಾಯ ನಾಯ್ಕ, ಕೋಶಾಧ್ಯಕ್ಷ ಜಿ.ಎಸ್. ಹೆಗಡೆ, ಉಪಾಧ್ಯಕ್ಷೆ ಸುಧಾ ಶಾನಭಾಗ, ಸಂಚಾಲಕ ಮುರಲೀಧರ ಪ್ರಭು, ಆನಂದು ನಾಯಕ, ಅರುಣ ಹೆಗಡೆ, ಗಣೇಶ ಭಟ್ಟ ಇತರರು ಇದ್ದರು.

ಈಶ್ವರ ಭಟ್ಟ ಕಡ್ಲೆ ನಿರೂಪಿಸಿದರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಭಾ ಕಾರ್ಯಕ್ರಮಕ್ಕೆ ಮುನ್ನ ವೈವಿಧ್ಯಮಯ ಶೋಭಾಯಾತ್ರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಹೊಸ ವರ್ಷದ ಸಂಚಲನ ಮೂಡಿಸಿತು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ