ಜಿಪ್ಲಸ್‌ಟು ಮನೆಗಳು ಫೆಬ್ರವರಿಯಲ್ಲಿ ಹಸ್ತಾಂತರ: ತಮ್ಮಯ್ಯ

KannadaprabhaNewsNetwork | Published : Jan 3, 2024 1:45 AM

ಸಾರಾಂಶ

ಉಪ್ಪಳ್ಳಿಯ ವಾಜಪೇಯಿ ಬಡಾವಣೆ ಸಮೀಪದಲ್ಲಿ ರಾಜೀವ್‌ ಗಾಂಧಿ ವಸತಿ ನಿಗಮದಿಂದ ಜಿಪ್ಲಸ್‌ಟು ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಲಾಗಿರುವ 300 ಮನೆಗಳನ್ನು ಫೆಬ್ರವರಿ ತಿಂಗಳಲ್ಲಿ ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಗುವುದು.

ಚಿಕ್ಕಮಗಳೂರು: ನಗರದ ಉಪ್ಪಳ್ಳಿಯ ವಾಜಪೇಯಿ ಬಡಾವಣೆ ಸಮೀಪದಲ್ಲಿ ರಾಜೀವ್‌ ಗಾಂಧಿ ವಸತಿ ನಿಗಮದಿಂದ ಜಿಪ್ಲಸ್‌ಟು ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಲಾಗಿರುವ 300 ಮನೆಗಳನ್ನು ಫೆಬ್ರವರಿ ತಿಂಗಳಲ್ಲಿ ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಗುವುದು ಎಂದು ಶಾಸಕ ಎಚ್‌.ಡಿ.ತಮ್ಮಯ್ಯ ಹೇಳಿದರು.

ಮಂಗಳವಾರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬಳಿಕ ಮಾತನಾಡಿದ ಅವರು, ಸುಮಾರು 107 ಕೋಟಿ ರು. ವೆಚ್ಚದಲ್ಲಿ ವಸತಿರಹಿತರಿಗೆ ನಿರ್ಮಿಸುತ್ತಿರುವ 1511 ಮನೆಗಳ ಪೈಕಿ ಫೆಬ್ರವರಿ ತಿಂಗಳು 300 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲು ಕಾಮಗಾರಿ ಶೀಘ್ರ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಗರದ ವಸತಿರಹಿತರಿಗೆ 1511 ಮನೆಗಳನ್ನು ನಿರ್ಮಿಸುವ ಕಾರ್ಯಪ್ರಗತಿಯಲ್ಲಿದೆ. ಒಂದು ಮನೆಗೆ ಮೂಲಸೌಕರ್ಯ ವೆಚ್ಚ ಸೇರಿ ಒಟ್ಟು 7.50 ಲಕ್ಷ ರು. ವೆಚ್ಚವಾಗಲಿದೆ ಎಂದರು.

ಇದರಲ್ಲಿ ಫಲಾನುಭವಿ ಹಿಂದಿನ ಬಿಜೆಪಿ ಸರ್ಕಾರ ನಿಗದಿಮಾಡಿದ್ದ 3 ಲಕ್ಷ ರು. ಭರಿಸಬೇಕಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2 ಲಕ್ಷ ರು. ಭರಿಸಲಿದ್ದು, ಫಲಾನುಭವಿಗಳಿಗೆ 1 ಲಕ್ಷ ರು. ನೀಡಬೇಕಿದೆ. ಇದಕ್ಕೂ ಬ್ಯಾಂಕ್ ಸಾಲಸೌಲಭ್ಯ ಒದಗಿಸಲಾಗಿದೆ. ಒಂದು ಬೆಡ್ ರೂಂ, ಹಾಲ್, ಶೌಚಾಲಯ, ಕಿಚನ್ ರೂಂ 3.50 ಚದರ ಅಡಿ ಮನೆ ಹೊಂದಿರಲಿದ್ದು, ಈಗಾಗಲೇ ಮನೆಗಳು ಸಿದ್ಧವಾಗಿವೆ ಎಂದರು.

ಇದೇ ರೀತಿ ಗ್ರಾಮೀಣ ಭಾಗದಲ್ಲಿ ವಸತಿರಹಿತರಿಗೆ ಸೂರು, ನಿವೇಶನ ಒದಗಿಸಿಕೊಡಲು ಈಗಾಗಲೇ ಜಾಗ ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ನನ್ನ ಕ್ಷೇತ್ರದಲ್ಲಿ 100 ಎಕರೆ ಜಾಗ ಗುರುತಿಸಿದ್ದು, 50 ಎಕರೆ ತಕರಾರಿಲ್ಲ. ಉಳಿದ 50 ಎಕರೆ ಡೀಮ್ಡ್ ಅರಣ್ಯ ಎಂದು ಹೇಳಲಾಗಿದೆ. ಅರಣ್ಯ ಮತ್ತು ಕಂದಾಯ ಭೂಮಿಯ ಗೊಂದಲ ನಿವಾರಣೆಗೆ ಕಾಂಗ್ರೆಸ್ ಸರ್ಕಾರ ಎರಡೂ ಇಲಾಖೆಯ ಭೂಮಿಯ ಜಂಟಿ ಸರ್ವೆ ಮಾಡಲು ಈಗಾಗಲೇ 15 ಭೂಮಾಪಕರನ್ನು ನೇಮಿಸಿ ಸರ್ವೆ ಕಾರ್ಯಕ್ರಮ ಸಹ ಆರಂಭವಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ನೀಡಿದ್ದ 5 ಭರವಸೆಗಳನ್ನು ಈಡೇರಿಸುತ್ತಿದೆ. ಫೆ.12ರಿಂದ ಯುವ ನಿಧಿ ಫಲಾನುಭವಿಗಳಿಗೆ ಹಣ ಹಾಕುವ ಕೆಲಸ ಆಗಲಿದೆ. ಇದೀಗ ಸರ್ಕಾರ ಅಭಿವೃದ್ಧಿ ಕಡೆಗೆ ಗಮನಹರಿಸುತ್ತಿದೆ. ಜಿಲ್ಲೆಯ 5 ಕ್ಷೇತ್ರಗಳ ರಸ್ತೆ ಅಭಿವೃದ್ಧಿ ಎಸ್‌ಎಚ್‌ಡಿಪಿ ಯೋಜನೆ ಅಡಿ ಹಣ ಬಿಡುಗಡೆ ಮಾಡಿದೆ ಎಂದು ಹೇಳಿದರು.

ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಸಖರಾಯಪಟ್ಟಣ ರಸ್ತೆ ಅಭಿವೃದ್ಧಿಗೆ 25 ಕೋಟಿ ರು. ಮಂಜೂರು ಮಾಡಿದೆ. ಹಿಂದಿನ ಸರ್ಕಾರದಲ್ಲಿ ಅರ್ಧಂಬರ್ಧ ಆಗಿದ್ದ ಕಾಮಗಾರಿಗಳಿಗೂ ಚಾಲನೆ ದೊರೆಯಲಿದೆ. ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಅನುದಾನ ನೀಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದು, ಈಗಾಗಲೇ ಹಣ ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು.

ಜೆಜೆಎಂ ಯೋಜನೆ ಅಡಿ ಕ್ಷೇತ್ರದ ಬಯಲು ಭಾಗದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಚಾಲನೆ ಸಿಗಲಿದೆ ಎಂದರು.

ಈ ಸಂದರ್ಭದಲ್ಲಿ ರಾಜೀವ್‌ ಗಾಂಧಿ ವಸತಿ ಅಭಿವೃದ್ಧಿ ನಿಗಮದ ಎಜಿಎಂ ಪ್ರಕಾಶ್, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಪೌರಾಯುಕ್ತ ಬಿ.ಸಿ ಬಸವರಾಜು, ಯೋಜನಾ ನಿರ್ದೇಶಕಿ ನಾಗರತ್ನ, ನಗರಸಭೆ ಇಂಜಿನಿಯರ್ ರಶ್ಮಿ, ಮಿಥುನ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Share this article