ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿ ಜಿ- 20 ರಾಷ್ಟ್ರಗಳ ಶೃಂಗಸಭೆಗೆ ಸಾಕ್ಷಿಯಾದ 2023ರ ವರ್ಷ ವಿಜಯನಗರ ಜಿಲ್ಲೆಯ ಇತಿಹಾಸದಲ್ಲಿ ಮತ್ತೊಂದು ಅಧ್ಯಾಯ ತೆರೆದಿದೆ.
ಬರಪೀಡಿತ ಜಿಲ್ಲೆ: ಈ ಬಾರಿ ಮಳೆ ಕೊರತೆ ಜಿಲ್ಲೆಯ ಜನರನ್ನು ಅದರಲ್ಲೂ ಮುಖ್ಯವಾಗಿ ರೈತ ಸಮುದಾಯವನ್ನು ಬಹುವಾಗಿ ಕಾಡಿತು. ತುಂಗಭದ್ರಾ ಜಲಾಶಯ ಭರ್ತಿಯಾಗಲೇ ಇಲ್ಲ. ಜಿಲ್ಲೆಯ ಅರೂ ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಯಿತು. ಜಿಲ್ಲೆಯ 2.69 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆ ಹಾನಿ ಉಂಟಾಗಿ, ₹1,370 ಕೋಟಿ ನಷ್ಟ ರೈತರಿಗೆ ಆಗಿರುವುದನ್ನು ಅಂದಾಜಿಸಲಾಯಿತು. ಬರ ಪರಿಹಾರ ರೂಪದಲ್ಲಿ ವರ್ಷಾಂತ್ಯದ ವೇಳೆಗೆ ನಯಾಪೈಸೆ ಸಿಗದೆ ಇರುವುದೂ ಕಟು ವಾಸ್ತವ.
ಹೊಸಪೇಟೆ ನಗರದೊಳಗೆ ಸಕ್ಕರೆ ಕಾರ್ಖಾನೆ ಸ್ಥಾಪಿಸುವ ವಿಚಾರ ರಾಜಕೀಯ ಪ್ರತಿಷ್ಠೆಯಾದುದು ಈ ವರ್ಷದ ದೊಡ್ಡ ವಿದ್ಯಮಾನಗಳಲ್ಲಿ ಒಂದು. ಬಿಜೆಪಿ ಅಧಿಕಾರದಲ್ಲಿದ್ದಾಗ ಮಂಜೂರು ಮಾಡಿಸಿದ ಸರ್ಕಾರಿ ಜಮೀನನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ರದ್ದುಗೊಳಿಸಿದ್ದು, ಬದಲಿ ಜಾಗದಲ್ಲಿ ಸಕ್ಕರೆ ಕಾರ್ಖಾನೆಗೆ ಜಾಗ ಹುಡುಕಿದ್ದು, ಕೊನೆಗೆ ತಾವೇ ಸಕ್ಕರೆ ಕಾರ್ಖಾನೆ ಸ್ಥಾಪಿಸುವುದಾಗಿ ಶಾಸಕ ಎಚ್.ಆರ್. ಗವಿಯಪ್ಪ ಹೇಳಿದ್ದಾರೆ.ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಇಟ್ಟು 50 ವರ್ಷ ಸಂದ ಹಿನ್ನೆಲೆ ವರ್ಷಪೂರ್ತಿ ನಡೆಯುವ ‘ಕರ್ನಾಟಕ 50ರ ಸಂಭ್ರಮ’ ಅಭಿಯಾನಕ್ಕೆ ಹಂಪಿಯಿಂದಲೇ ಚಾಲನೆ ನೀಡಿದ್ದು ದೇವರಾಜ ಅರಸು ಅವರ ಕಾಲದ ಸನ್ನಿವೇಶವನ್ನು ಮತ್ತೆ ನೆನಪಿಗೆ ತರುವಂತೆ ಮಾಡಿತು. ಹಂಪಿ ಕನ್ನಡ ವಿಶ್ವವಿದ್ಯಾಲಯ ನಾಡಿನ ಹೆಮ್ಮೆಗಳಲ್ಲಿ ಒಂದಾಗಿದ್ದರೂ, ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಅದನ್ನು ಪಾರು ಮಾಡುವ ಪ್ರಯತ್ನ ಇಡೀ ವರ್ಷದಲ್ಲಿ ನಡೆಯಲಿಲ್ಲ.