ಜಿ+3 ಮಾದರಿ ವಸತಿ ವ್ಯವಸ್ಥೆ: ಬಗೆಹರಿದ ಜಾಗದ ಸಮಸ್ಯೆ

KannadaprabhaNewsNetwork |  
Published : Oct 13, 2023, 12:16 AM IST
ಚಿತ್ರ: ಡಿ೧೨-ಬಿಡಿವಿಟಿ(ಎ)ಭದ್ರಾವತಿ ನಗರಸಭೆ ವತಿಯಿಂದ ಆಶ್ರಯ ಯೋಜನೆಯಡಿ ನಿವೇಶನ ರಹಿತರಿಗೆ ಜಿ+೩ ಮಾದರಿಯ ವಸತಿ ವ್ಯವಸ್ಥೆ ಕಲ್ಪಿಸಲು ಉಂಟಾಗಿದ್ದ ಜಾಗದ ಸಮಸ್ಯೆಯನ್ನು ಗುರುವಾರ ಅಧಿಕಾರಿಗಳ ತಂಡ ಬಗೆಹರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.  | Kannada Prabha

ಸಾರಾಂಶ

ಜಿಲ್ಲಾ ಯೋಜನಾ ನಿರ್ದೇಶಕ ಮನೋಹರ್ ನೇತೃತ್ವದ ತಂಡ ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಸರ್ವೇ

ಕನ್ನಡಪ್ರಭ ವಾರ್ತೆ, ಭದ್ರಾವತಿ ನಗರಸಭೆ ವತಿಯಿಂದ ಆಶ್ರಯ ಯೋಜನೆಯಡಿ ನಿವೇಶನ ರಹಿತರಿಗೆ ಜಿ+3 ಮಾದರಿಯ ವಸತಿ ವ್ಯವಸ್ಥೆ ಕಲ್ಪಿಸಲು ಉಂಟಾಗಿದ್ದ ಜಾಗದ ಸಮಸ್ಯೆಯನ್ನು ಗುರುವಾರ ಅಧಿಕಾರಿಗಳ ತಂಡ ಬಗೆಹರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆಶ್ರಯ ಯೋಜನೆಯಡಿ ನಿವೇಶನ ರಹಿತರಿಗೆ ಜಿ+3 ಮಾದರಿಯ ವಸತಿ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದು, ಈಗಾಗಲೇ ಈ ಸಂಬಂಧ ಫಲಾನುಭವಿಗಳನ್ನು ಸಹ ಗುರುತಿಸಿ ಎಲ್ಲ ಪ್ರಕ್ರಿಯೆಗಳು ಸಹ ಮುಕ್ತಾಯಗೊಂಡಿವೆ. ಅಲ್ಲದೇ, ಸರ್ಕಾರ ಸಹ ಅಗತ್ಯವಿರುವ ಅನುದಾನ ಬಿಡುಗಡೆಗೊಳಿಸಿದೆ. ಆದರೆ, ಜಾಗದ ಸಮಸ್ಯೆಯಿಂದಾಗಿ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ನಂಜಾಪುರ ಗ್ರಾಮಕ್ಕೆ ಹೊಂದಿಕೊಂಡಂತ್ತಿರುವ ಕಸಬಾ ಹೋಬಳಿ ಬುಳ್ಳಾಪುರ ಗ್ರಾಮದ ಸರ್ವೆ ನಂ.55ರ 378.28 ಎಕರೆ ಗೋಮಾಳ ಪೈಕಿ 9.38+ 6.02 ಒಟ್ಟು 16 ಎಕರೆಯನ್ನು ಜಿಲ್ಲಾಧಿಕಾರಿ ಅವರು ಆಶ್ರಯ ಯೋಜನೆಯಡಿ ನಿವೇಶನರಹಿತರಿಗೆ ಜಿ+3 ಮಾದರಿ ವಸತಿ ವ್ಯವಸ್ಥೆ ಕಲ್ಪಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ- 1964ರ ಕಲಂ-71ರಡಿ ಪೌರಾಯುಕ್ತರು, ನಗರಸಭೆ, ಭದ್ರಾವತಿ ಹೆಸರಿಗೆ ಮಂಜೂರಾತಿ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಸ್ಥಳದಲ್ಲಿ ಕಾಮಗಾರಿ ಆರಂಭಿಸಲು ಈ ಹಿಂದೆ ಶಾಸಕ ಬಿ.ಕೆ. ಸಂಗಮೇಶ್ವರ್ ಗುದ್ದಲಿ ಪೂಜೆ ನೆರವೇರಿಸಲು ಮುಂದಾಗಿದ್ದರು. ಆದರೆ, ನಂಜಾಪುರ ನಿವಾಸಿಗಳು ಇದಕ್ಕೆ ವಿರೋಧ ವ್ಯಕ್ತಿಪಡಿಸಿದ್ದರು. ಈ ಸಂಬಂಧ ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆ ಸಹ ನಡೆದಿತ್ತು. ಗುರುವಾರ ಬೆಳಗ್ಗೆ ಜಿಲ್ಲಾ ಯೋಜನಾ ನಿರ್ದೇಶಕ ಮನೋಹರ್ ನೇತೃತ್ವದ ತಂಡ ಬಿಗಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಸರ್ವೇ ನಡೆಸಿ, ಜೆಸಿಬಿ ಬಳಸಿ, ಗಿಡಗಳನ್ನು ತೆರವುಗೊಳಿಸುವ ಜೊತೆಗೆ ಫಲಕ ಅಳವಡಿಸಿದೆ. ಕಾರ್ಯಾಚರಣೆಯಲ್ಲಿ ತಹಸೀಲ್ದಾರ್ ಕೆ.ಆರ್. ನಾಗರಾಜ್, ನಗರಸಭೆ ಪೌರಾಯುಕ್ತ ಎಚ್.ಎಂ. ಮನುಕುಮಾರ್ ಹಾಗೂ ನಗರಸಭೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಇನ್ನಿತರರು ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಗ್ರಾಮಸ್ಥರು ತೀವ್ರ ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿದರು. ಸರ್ಕಾರದ ಆದೇಶದಂತೆ ಯಾವುದೇ ಗ್ರಾಮದ ಸಮೀಪ ಗೋಮಾಳ ಜಾಗವಿದ್ದಲ್ಲಿ ಕನಿಷ್ಠ 30 ಎಕರೆ ಜಾಗ ನೀಡಬೇಕು. ಈ ಹಿನ್ನೆಲೆ ಜಾಗ ನೀಡುವಂತೆ ಆಗ್ರಹಿಸಿದರು. ಕಾರ್ಯಾಚರಣೆ ಮುಕ್ತಾಯಗೊಂಡ ನಂತರ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಸಾಕಷ್ಟು ಜಾಗ ಉಳಿದಿದ್ದು, ಸರ್ಕಾರದ ಆದೇಶದಂತೆ ಉಳಿದಿರುವ ಜಾಗದಲ್ಲಿ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದರು. ನಂಜಾಪುರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ/ ಪಂಗಡದವರು ವಾಸಿಸುತ್ತಿದ್ದು, ಜಾಗದ ಅವಶ್ಯಕತೆ ಇರುವುದಾಗಿ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಯಿತು. ಪ್ರಮುಖರಾದ ಪ್ರಜಾಪ್ರತಿನಿಧಿ ಸುರೇಶ್, ಬಿಜೆಪಿ ಯುವ ಮುಖಂಡ ಮಂಗೋಟೆ ರುದ್ರೇಶ್, ಗ್ರಾಮದ ಮುಖಂಡರು, ವಿವಿಧ ಸಂಘ -ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು. ಆಶ್ರಯ ಯೋಜನೆಯಡಿ ನಿವೇಶನ ರಹಿತರಿಗೆ ಜಿ+3 ಮಾದರಿಯ ವಸತಿ ವ್ಯವಸ್ಥೆ ಕಲ್ಪಿಸಲು ಅಡ್ಡಿಯಾಗಿದ್ದ ಜಾಗದ ಸಮಸ್ಯೆ ಒಂದು ಹಂತದಲ್ಲಿ ಬಗೆಹರಿದಿದ್ದು, ಕಾಮಗಾರಿ ಶೀಘ್ರವಾಗಿ ಆರಂಭಗೊಳ್ಳಬೇಕಾಗಿದೆ. - - - -ಡಿ12ಬಿಡಿವಿಟಿ(ಬಿ): ಕಾರ್ಯಾಚರಣೆ ಮುಕ್ತಾಯ ನಂತರ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಚರ್ಚಿಸಿ ಸರ್ಕಾರದ ಆದೇಶದಂತೆ ಉಳಿದಿರುವ ಭೂಮಿಯಲ್ಲಿ ಅವಕಾಶ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ 33 ಹಳ್ಳಿಗಳಲ್ಲಿ ಪ್ರತಿ ದಿನ ಸಂಜೆ 7- 9 ಗಂಟೆವರೆಗೆ ಮೊಬೈಲ್‌, ಟಿವಿ ಬಂದ್‌
ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಕೊಟ್ರು ಸಚಿವೆ ಲಕ್ಷ್ಮೀ