ಕನ್ನಡಪ್ರಭ ವಾರ್ತೆ ಬೆಂಗಳೂರು
ಅಂತರಾಷ್ಟ್ರೀಯ ಬುಕರ್ ಪ್ರಶಸ್ತಿಗೆ ಭಾಜನರಾದ ಲೇಖಕಿ ಬಾನು ಮುಷ್ತಾಕ್ ಹಾಗೂ ಅನುವಾದಕಿ ದೀಪಾ ಭಾಸ್ತಿ ಅವರಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಗಿದ್ದು, ಬಾನು ಮುಷ್ತಾಕ್ ಅವರು ಒಪ್ಪಿದರೆ ಬಿಡಿಎ ಜಿ ಕೆಟಗರಿ ನಿವೇಶನ ನೀಡಲು ತೀರ್ಮಾನಿಸಲಾಗಿದೆ.ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎದೆಯ ಹಣತೆ ಕೃತಿಯ ಮೂಲ ಲೇಖಕಿ ಬಾನು ಮುಷ್ತಾಕ್ ಹಾಗೂ ಈ ಕೃತಿಯನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿದ ದೀಪಾ ಭಾಸ್ತಿ ಅವರಿಗೆ ಸಚಿವ ಸಂಪುಟ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಗಿದೆ. ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ತಂದಿರುವ ಅವರು ನಾಡಿನ ಹೆಮ್ಮೆ ಎಂದು ಹೇಳಿದರು.ಇದೇ ವೇಳೆ ಬಾನು ಮುಷ್ತಾಕ್ ಅವರು ಒಪ್ಪಿದರೆ ಅವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಜಿ ಕೆಟಗರಿ ನಿವೇಶನ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದು ಮೂಲ ಲೇಖಕಿಯಾದ ಬಾನು ಮುಷ್ತಾಕ್ ಅವರು ಒಬ್ಬರಿಗೆ ಮಾತ್ರ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ತವರು ಹಾಸನದಲ್ಲಿ ಸಂಭ್ರಮ:ಹಾಸನ: ನಾಡಿನ ಖ್ಯಾತ ಲೇಖಕಿ, ಸಾಹಿತಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾರ್ಗದರ್ಶಿ ಸಮಿತಿ ಸದಸ್ಯರಾದ ಬಾನು ಮುಷ್ತಾಕ್ ಅವರಿಗೆ ಅಂತಾರಾಷ್ಟ್ರೀಯ ಬುಕರ್ ಸಾಹಿತ್ಯ ಪಶಸ್ತಿ ದೊರೆತ ಹಿನ್ನೆಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಪರಿಷತ್ತಿಗೆ ವಿದ್ಯುತ್ ದೀಪಾಂಲಕಾರ ಮಾಡಿಸಿ, ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಚ್.ಎಲ್ ಮಲ್ಲೇಶಗೌಡ ಅವರು ಬಾನು ಮುಷ್ತಾಕ್ ಅವರ ಪತಿ ಮುಷ್ತಾಕ್ ಹಾಗೂ ಪುತ್ರ ತಾಹೀರ್ ಅವರಿಗೆ ಸಿಹಿ ತಿನ್ನಿಸಿ ಶುಭಾಶಯ ಕೋರಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಲ್ ಮಲ್ಲೇಶಗೌಡ ಮಾತನಾಡಿ, ಕರುನಾಡು ಇಂದು ಅಭಿಮಾನದಿಂದ ಬೀಗುವಂತಾಗಿದೆ. ಕನ್ನಡ ಭಾಷೆಯ ಮುಕುಟಕ್ಕೆ ವಿಶ್ವದ ಕಿರೀಟ ಪ್ರಾಪ್ತಿಯಾಗಿದೆ. ಬಾನು ಮುಷ್ತಾಕ್ ಅವರು ‘ಹಾರ್ಟ್‌ಲ್ಯಾಂಪ್’ ಕೃತಿಗೆ ಬೂಕರ್ ಧಕ್ಕಿಸಿಕೊಳ್ಳುವ ಮೂಲಕ ಕನ್ನಡಿಗರು ಹೆಮ್ಮೆಪಡುವಂತೆ ಮಾಡಿದ್ದಾರೆ. ಅವರು ತವರಿಗೆ ಹಿಂದಿರುಗಿದ ಮೇಲೆ ದೊಡ್ಡ ಅಭಿನಂದನಾ ಸಮಾರಂಭವನ್ನು ಕನ್ನಡ ಸಾಹಿತ್ಯ ಪರಿಷತ್ತು ನಡೆಸಲಿದೆ ಎಂದರು.