ಕುಮಟಾ: ಡಾ. ಜಿ.ಎಲ್. ಹೆಗಡೆ ಅವರು ಸಮಷ್ಟಿಯಾಗಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಒಬ್ಬ ಪ್ರಾಧ್ಯಾಪಕರು ನಿವೃತ್ತಿ ಆದ ಐದು ವರ್ಷಗಳ ಬಳಿಕವೂ ಇಂಥ ಅಭಿನಂದನಾ ಸಮಾರಂಭ ನಡೆಯುವುದೇ ಅವರ ಸಾಧನೆಗೆ ಸಾಕ್ಷಿ. ಅದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಎಂದು ಬೆಂಗಳೂರು ಉತ್ತರ ವಿವಿಯ ಕುಲಪತಿ ಡಾ. ನಿರಂಜನ ವಾನಳ್ಳಿ ತಿಳಿಸಿದರು.
ತಾಲೂಕಿನ ತಲಗೋಡದ ಜನಾರ್ದನ ದೇವಸ್ಥಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಯಕ್ಷಗಾನ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಡಾ. ಜಿ.ಎಲ್. ಹೆಗಡೆ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.ಜಿ.ಎಲ್. ಹೆಗಡೆ ಅವರಂಥ ಮೇಷ್ಟ್ರು ಇಂದಿನ ಅಗತ್ಯ. ಕಲಿಸುವ ವಿಷಯದ ಜತೆ ಬಹುಮುಖಿ ಗೀಳನ್ನು ಹೆಚ್ಚಿಸಿದ ಜಿ.ಎಲ್. ಹೆಗಡೆ ಅವರ ವ್ಯಕ್ತಿತ್ವವೇ ಸಮಾಜಕ್ಕೆ ಪಾಠ ಮಾಡಿದೆ ಎಂದರು.ಸಂಗೀತ ವಿದ್ವಾಂಸ, ಗಾಯಕ ಡಾ. ವಿದ್ಯಾಭೂಷಣ ಮಾತನಾಡಿ, ಧರ್ಮ ಅಧರ್ಮ ಕುರಿತು ಅರಿತು ನೋಡಿಕೊಳ್ಳಬೇಕು. ಅಧರ್ಮದ ಬೇರು ಕತ್ತರಿಸಿಕೊಳ್ಳಬೇಕು. ಜಿ.ಎಲ್. ಹೆಗಡೆ ಸದಾ ಸಮಚಿತ್ತತೆ, ಸಮಾಧಾನ ಉಳ್ಳವರು ಎಂದರು. ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿ ಮಾತನಾಡಿ, ಲೌಕಿಕ ಬೆಳಗಿಸುವ ಕಾರ್ಯ ಆಗಬೇಕು. ಭಗವತ್ ದಾಸ್ಯದ ಗುಣ ಮನಸ್ಸಿನಲ್ಲಿ ಇರಬೇಕು. ಇನ್ನೊಬ್ಬರು ನಮ್ಮ ಬಗ್ಗೆ ಹೇಳಬೇಕು. ಜಿ.ಎಲ್. ಹೆಗಡೆ ಅವರ ಕಾರ್ಯ ದೊಡ್ಡದು ಎಂದರು.ಗುರು ಗೌರವ ವರ್ಣ ವೈಭವ ಬಹುಭಾಷಾ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ ಅಭಿನಂದನಾ ಮಾತನಾಡಿದ ಡಾ. ಎಂ. ಪ್ರಭಾಕರ ಜೋಶಿ, ಬೇರೆಯವರು ಮಾಡಿದ್ದು, ಮಾಡದಿರುವುದು, ಮಾಡಲಾಗದ್ದನ್ನೂ ಜಿ.ಎಲ್. ಹೆಗಡೆ ಮಾಡಿದ್ದಾರೆ. ಬಹುಮುಖಿ ಸಾಧಕರು. ರಂಗಭೂಮಿ ಕಲಾವಿದರೂ ಹೌದು. ಅಧ್ಯಾತ್ಮವಾದಿ. ಹಾಲಕ್ಕಿ ಸಮಾಜದ ಅಧ್ಯಯನ ಮಾಡಿದವರು. ಕನ್ನಡ ಇರುವ ತನಕ ಇರುವಂಥ ಕೃತಿಗಳನ್ನು ಬರೆದಿದ್ದಾರೆ ಎಂದು ಬಣ್ಣಿಸಿದರು.ಶಾಸಕ ದಿನಕರ ಶೆಟ್ಟಿ ಮಾತನಾಡಿ, ಡಾ. ಹೆಗಡೆ ದಂಪತಿಗಳು ಅಪರೂಪದ ಸಾಧಕರು ಎಂದರು. ಗುರು ಗೌರವ ಸ್ವೀಕರಿಸಿದ ಡಾ. ಜಿ.ಎಲ್. ಹೆಗಡೆ ಮಾತನಾಡಿ, ಮಾಡುವ ಕಾರ್ಯಕ್ಕೆ ದೈವಾನುಗ್ರಹ ಬೇಕು. ತಾಯಿ ಪ್ರೀತಿ ಕಂಡವರು ಯಾರನ್ನೂ ದ್ವೇಷ ಮಾಡಲು ಸಾಧ್ಯವಿಲ್ಲ. ಗುರು ಪರಂಪರೆಗೆ, ಪ್ರೀತಿ- ವಾತ್ಸಲ್ಯ ನೀಡಿದ ತಾಯಿಯ ಪ್ರೀತಿಗೆ ಏನು ಕೊಡಲು ಸಾಧ್ಯವಿದೆ. ಧನ್ಯತಾಭಾವ ಬಿಟ್ಟು ಬೇರೇನೂ ಇಲ್ಲ ಎಂದರು. ವೇದಿಕೆಯಲ್ಲಿ ಮುರಳೀಧರ ಪ್ರಭು, ಮಾಯಾ ಜಿ. ಹೆಗಡೆ ಇತರರು ಇದ್ದರು. ಡಾ. ಸುರೇಶ ಜಿ. ಹೆಗಡೆ ಸ್ವಾಗತಿಸಿದರು. ಗೋಪಾಲಕೃಷ್ಣ ಹೆಗಡೆ ಹುಕ್ಲಮಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಧರ ಹೆಗಡೆ ಭದ್ರನ್ ಅಭಿನಂದನಾ ಗ್ರಂಥದ ಕುರಿತು ವಿವರಿಸಿದರು. ಮಂಜುನಾಥ ಭಟ್ ಸುವರ್ಣಗದ್ದೆ ವಂದಿಸಿದರು. ಗಣೇಶ ಜೋಶಿ ನಿರ್ವಹಿಸಿದರು.
ಡಾ. ಕೆ.ಪಿ. ಹೆಗಡೆ, ಡಾ. ಕೆ.ಪಿ. ಭಟ್ಟ ಹಾಗೂ ಡಾ. ಶ್ರೀಪಾದ ಹೆಗಡೆ ಅವರಿಂದ ಹಾಲಕ್ಕಿ ಸಮಾಜದ ಒಂದು ಅಧ್ಯಯನ, ಡಾ. ಎಚ್.ಎನ್. ಮುರಳೀಧರ, ಕೆ.ಪಿ. ಪ್ರಕಾಶ ಅವರಿಂದ ಶೇಣಿ ರಾಮಾಯಣ ಕೃತಿ ಲೋಕಾರ್ಪಣೆಗೊಂಡಿತು. ಜತೆಗೆ ಡಾ. ಕೆ.ಪಿ. ಭಟ್ಟ, ಡಾ. ಗೋಪಾಲಕೃಷ್ಣ ಶರ್ಮಾ, ಸುಬ್ರಹ್ಮಣ್ಯ ಭಟ್ಟ, ಮಂಜುನಾಥ ಭಟ್ಟ ಕೊಡ್ಲೆಕೆರೆ, ಜಿ.ಜಿ. ಭಟ್ಟ ಉಂಚಗಿ, ವಿನಾಯಕ ಎಸ್. ಹೆಗಡೆ ಅವರನ್ನು ಜಿ.ಎಲ್. ಹೆಗಡೆ ಗೌರವಿಸಿದರು.