ಜಿ.ಮಾದೇಗೌಡರ ಸಾಮಾಜಿಕ ಕಳಕಳಿ ನನಗೆ ಸ್ಫೂರ್ತಿ: ಆಶಯ್ ಜಿ.ಮಧು

KannadaprabhaNewsNetwork | Published : May 1, 2025 12:45 AM

ಸಾರಾಂಶ

ತಾತ ಜಿ.ಮಾದೇಗೌಡ, ತಂದೆ ಮಧು ಮಾದೇಗೌಡರ ಆಪ್ತರ ಒಡನಾಟವಿದೆ. ಮೂರು ತಲೆಮಾರಿನ ಜನರನ್ನು ಒಟ್ಟಿಗೆ ಕರೆದೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ತಾತ ಹಾಗೂ ತಂದೆ ಹೆಸರನ್ನು ಉಳಿಸಲು ಎಲ್ಲ ಒಡನಾಡಿಗಳ ಸಲಹೆ, ಸಹಕಾರ ಪಡೆದು ನಾನು ಮುನ್ನಡೆಯುತ್ತೇನೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ನನ್ನ ತಾತ ಜಿ.ಮಾದೇಗೌಡರ ಸಾಮಾಜಿಕ ಕಳಕಳಿ ನನಗೆ ಸ್ಫೂರ್ತಿಯಾಗಿದೆ. ನಾನು ಕೂಡ ಅವರ ಹಾದಿಯಲ್ಲೇ ಸಾಗುತ್ತೇನೆ ಎಂದು ಭಾರತೀ ವಿದ್ಯಾ ಸಂಸ್ಥೆ ಕಾರ್ಯನಿರ್ವಾಹಕ ಟ್ರಸ್ಟಿ ಆಶಯ್ ಜಿ. ಮಧು ವಿಶ್ವಾಸ ವ್ಯಕ್ತಪಡಿಸಿದರು.

ಸಮೀಪದ ಚಂದೂಪುರ ಸರ್ಕಲ್‌ನಲ್ಲಿ ಇತ್ತೀಚೆಗೆ ಹಾಗಲಹಳ್ಳಿ ಬಸವರಾಜೇಗೌಡ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಜಿ.ಮಾದೇಗೌಡರು ಜೀವಿತವಧಿವರೆಗೂ ಹೋರಾಟಗಳಲ್ಲೇ ತನ್ನ ಜೀವ ಸವಿಸಿದ ಮಹಾನ್ ವ್ಯಕ್ತಿ. ಅಂತವರ ವಂಶದಲ್ಲಿ ಹುಟ್ಟಿದ್ದೇ ಪುಣ್ಯ. ಅವರ ಗುಣಗಳನ್ನು ನಾನು ಕೂಡ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದೇನೆ ಎಂದರು.

ತಾತ ಜಿ.ಮಾದೇಗೌಡ, ತಂದೆ ಮಧು ಮಾದೇಗೌಡರ ಆಪ್ತರ ಒಡನಾಟವಿದೆ. ಮೂರು ತಲೆಮಾರಿನ ಜನರನ್ನು ಒಟ್ಟಿಗೆ ಕರೆದೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ತಾತ ಹಾಗೂ ತಂದೆ ಹೆಸರನ್ನು ಉಳಿಸಲು ಎಲ್ಲ ಒಡನಾಡಿಗಳ ಸಲಹೆ, ಸಹಕಾರ ಪಡೆದು ನಾನು ಮುನ್ನಡೆಯುತ್ತೇನೆ ಎಂದರು.

ಕಾವೇರಿ ನೀರಾವರಿ ನಿಗಮದ ನಿವೃತ್ತ ಇಂಜಿನಿಯರ್ ಹಾಗಲಹಳ್ಳಿ ಬಸವರಾಜೇಗೌಡ ಮಾತನಾಡಿ, ಕಾವೇರಿ ಪುತ್ರ ಜಿ.ಮಾದೇಗೌಡರು ಮಂಡ್ಯ ಜಿಲ್ಲೆಗೆ ನೀಡಿದ ಕೊಡುಗೆ ರೈತರ ಹಿತ ಕಾಯಲು ಅವರು ಮಾಡುತಿದ್ದ ಹೋರಾಟಗಳು ಇಂದಿನ ಪೀಳಿಗೆಗೆ ಅವಿಸ್ಮರಣಿಯವಾಗಿವೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಎಸ್.ಐ. ಹೊನ್ನಲಗೆರೆ(ಚಂದೂಪುರ) ಶ್ರೀ ಶಿವಕ್ಷೇತ್ರ ಮಠದ ಶ್ರೀ ಶಿವಲಿಂಗ ಶಿವಾಚರ್ಯ ಮಹಾಸ್ವಾಮಿ ವಹಿಸಿ ಆರ್ಶೀವಚನ ನೀಡಿದರು. ಈ ವೇಳೆ ಮುಖಂಡರಾದ ಅಣ್ಣೇಸ್ವಾಮಿ, ಎಲ್‌ಐಸಿ ಕೆಂಪೇಗೌಡ, ಪುಟ್ಟಮಾದೇಗೌಡ, ಚಂದೂಪುರ ಪುನೀತ್, ಹಾಗಲಹಳ್ಳಿ ಪ್ರಭ, ಹೊಸೂರು ಅನಿಲ್, ಮುಡೀನಹಳ್ಳಿ ಅಪ್ಪಾಜಿ, ಪವನ್‌ಕುಮಾರ್, ರಮೇಶ್ ಸೇರಿದಂತೆ ಮತ್ತಿತರಿದ್ದರು.

ಮೇ 27ರಿಂದ ಪೌರ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ಆರ್.ನಾಗರಾಜು

ಮಂಡ್ಯ:

ರಾಜ್ಯದ ಎಲ್ಲಾ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ನೌಕರರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮೇ 27ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಮೈಸೂರು ವಿಭಾಗದ ರಾಜ್ಯ ಉಪಾಧ್ಯಕ್ಷ ಆರ್.ನಾಗರಾಜು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಬೇಡಿಕೆ ಈಡೇರಿಸುವ ಕುರಿತಂತೆ ಪೌರಾಡಳಿತ ಸಚಿವ ರಹೀಂಖಾನ್ ಅವರ ಸ್ವ-ಗೃಹದ ಎದುರು ಒಂದು ದಿನದ ಶಾಂತಿಯುತ ಧರಣಿ ನಡೆಸಲಾಗಿತ್ತು. ಅದೇ ದಿನ ಸಚಿವರು ದೂರವಾಣಿ ಕರೆ ಮಾಡಿ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲು ದಿನಾಂಕ ನಿಗಪಡಿಸುವ ಭರವಸೆ ನೀಡಿದ್ದರು. ಆದರೆ, ಇದುವರೆಗೆ ಬೇಡಿಕೆಗಳ ಕುರಿತಂತೆ ಚರ್ಚಿಸಲು ಆಹ್ವಾನ ನೀಡಿಲ್ಲ ಎಂದು ಆರೋಪಿಸಿದರು.

ಪೌರ ಸೇವಾ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಿ ಜಿಪಿಎಫ್, ಕೆಜಿಐಡಿ, ಜ್ಯೋತಿ ಸಂಜೀವಿನಿ ಸೇರಿದಂತೆ ಸರ್ಕಾರಿ ನೌಕರರು ಪಡೆಯುವ ಎಲ್ಲಾ ಸೌಲಭ್ಯ ವಿಸ್ತರಿಸಬೇಕು. ಹೊರ ಗುತ್ತಿಗೆ ಆಧಾರದ ಮೇಲೆ ನೀರು ಸರಬರಾಜು ಸಹಾಯಕರು, ವಾಹನ ಚಾಲಕರು, ಬೀದಿ ದೀಪ ಸಹಾಯಕರು, ಲೋಡರ್ಸ್, ಪಾರ್ಕ್ ಗಾರ್ಡರ್, ಕಾವಲುಗಾರ, ಸ್ಯಾನಿಟರಿ ಸೂಪರ್‌ವೈಸರ್ ಸೇರಿದಂತೆ ವಿವಿಧ ವೃಂದಗಳಲ್ಲಿ ಹೊರ ಗುತ್ತಿಗೆಯಡಿ ಕೆಲಸ ನಿರ್ವಹಿಸುತ್ತಿರುವ ನೌಕರರನ್ನು ನೇರ ಪಾವತಿಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

2023-24ನೇ ಸಾಲಿನಲ್ಲಿ ನೇಮಕಗೊಂಡ ಪೌರ ಕಾರ್ಮಿಕರು, ಲೋಡರ್ಸ್, ಕ್ಲೀನರ್ಸ್ ವೇತನವನ್ನು ಎಸ್‌ಎಫ್‌ಸಿ ವೇತನ ಅನುದಾನದಡಿ ವೇತನ ನೀಡಬೇಕು. ಲ್ಯಾಪ್ ಟೆಕ್ನಿಷಿಯನ್ ಮತ್ತು ಪ್ಲಂಬರ್ ಹುದ್ದೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ಹುದ್ದೆಗಳು ನಗರ ಸ್ಥಳೀಯ ಸಂಸ್ಥೆಗಳ ಕುಡಿಯುವ ನೀರಿನ ಗುಣಮಟ್ಟ ನಿರ್ವಹಣೆಗೆ ಅತ್ಯಂತ ಅವಶ್ಯಕವಾಗಿವೆ. ಆದರೆ, ಇದುವರೆಗೆ ಈ ಹುದ್ದೆಗಳಿಗೆ ನೇಮಕಾತಿ ಮಾಡದಿರುವುದರಿಂದ ನೀರಿನ ಗುಣಮಟ್ಟ ನಿರ್ವಹಣೆಯಲ್ಲಿ ಅನೇಕ ತೊಡಕು ಉಂಟಾಗುತ್ತಿದೆ. ಈ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡುವಂತೆ ಸರ್ಕಾರವನ್ನು ಆಗ್ರಹಿಸಿದರು.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆಗೆ ಮತ್ತು ಮಾಲಿನ್ಯ ನೀರು ನಿರ್ವಹಣೆಗೆ ಅಗತ್ಯ ವಾಹನಗಳನ್ನು ಖರೀದಿಸುತ್ತಿದ್ದಾರೆ. ಈ ವಾಹನಕ್ಕೆ ಪೂರಕವಾಗಿ ವಾಹನ ಚಾಲಕ ಹುದ್ದೆ ಮಂಜೂರು ಮಾಡದಿರುವುದರಿಂದ ಶಾಶ್ವತ ವಾಹನ ಚಾಲಕರನ್ನು ನೇಮಕ ಮಾಡಿಕೊಳ್ಳಲು ತೊಡಕಾಗಿದೆ. ಇದರ ಬಗ್ಗೆ ಪರಿಶೀಲಿಸಿ ಹುದ್ದೆಗಳನ್ನು ವಿಲೀನಗೊಳಿಸುವ ಅಥವಾ ಸಕ್ರಮಗೊಳಿಸುವ ತೀರ್ಮಾನ ಕೈಗೊಳ್ಳುವಂತೆ ಒತ್ತಾಯಿಸಿದರು.

ನಮ್ಮ ಬೇಡಿಕೆಗಳ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ದೊರಕದಿರುವುದರಿಂದ ಹೋರಾಟ ಅನಿವಾರ್ಯವಾಗಿದೆ. ತಕ್ಷಣ ಸ್ಪಂದಿಸದಿದ್ದರೆ ಕುಡಿಯುವ ನೀರು ಪೂರೈಕೆ ಹಾಗೂ ಮ್ಯಾನ್‌ಹೋಲ್‌ಗಳನ್ನು ಬಂದ್ ಮಾಡುವ ಮೂಲಕ ಪ್ರತಿಭಟನೆ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಹದೇವು, ನಂಜುಂಡಪ್ಪ, ಚಂದ್ರು, ಸೋಮಸುಂದರಂ, ಹರೀಶ್ ಇದ್ದರು.

Share this article