ಜಿ.ಮಾದೇಗೌಡರಿಗೆ ಕುಟಂಬ ರಾಜಕಾರಣ ವ್ಯಾಮೋಹವಿರಲಿಲ್ಲ; ನಿಶ್ಚಲಾನಂದನಾಥಸ್ವಾಮಿ

KannadaprabhaNewsNetwork |  
Published : Jan 03, 2026, 01:45 AM IST
2ಕೆಎಂಎನ್ ಡಿ11,12  | Kannada Prabha

ಸಾರಾಂಶ

ನನ್ನ ತಂದೆ ಜಿ.ಮಾದೇಗೌಡರು ವಲ್ಲದ ಮನಸ್ಸಿನಿಂದ 2004ರಲ್ಲಿ ರಾಜಕೀಯಕ್ಕೆ (ತಮ್ಮ ಹೆಗಲ ಮೇಲೆ ಕೂರಿಸಿಕೊಂಡರು) ಪಾದಾರ್ಪಣೆ ಮಾಡಿಸಿದರು. ಅವರು 1994 ರಲ್ಲಿ ನನ್ನನ್ನು ರಾಜಕೀಯಕ್ಕೆ (ತಮ್ಮ ಹೆಗಲ ಮೇಲೆ ಕೂರಿಸಿಕೊಂಡಿದ್ದರೆ) ಕರೆ ತಂದಿದ್ದರು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಮಾಜಿ ಸಂಸದ ದಿ.ಜಿ.ಮಾದೇಗೌಡರಿಗೆ ಕುಟುಂಬ ರಾಜಕಾರಣದ ವ್ಯಾಮೋಹವಿದ್ದಿದ್ದರೆ ಕಳೆದ 15 ವರ್ಷಗಳ ಹಿಂದೆಯೇ ಪುತ್ರ ಮಧು ಮಂತ್ರಿಯಾಗುತ್ತಿದ್ದರು ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥಸ್ವಾಮಿ ತಿಳಿಸಿದರು.

ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಭಾರತೀ ವಿದ್ಯಾಸಂಸ್ಥೆ, ಮಧು ಜಿ.ಮಾದೇಗೌಡ ಅಭಿಮಾನಿ ಬಳಗ ಆಯೋಜಿಸಿದ್ದ ವಿಧಾನಪರಿಷತ್ ಸದಸ್ಯ ಮಧು ಜಿ.ಮಾದೇಗೌಡರ ಹುಟ್ಟುಹಬ್ಬ ಸಂಭ್ರಮದ ಅಭಿನಂದನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಗೌಡರಿಗೆ ತಮ್ಮ ಪುತ್ರ ಮಧು ಜಿ.ಮಾದೇಗೌಡರನ್ನು ರಾಜಕೀಯಕ್ಕೆ ತರಬೇಕೆಂಬ ಆಸೆ ಇರಲಿಲ್ಲ. ಕುಟುಂಬ ರಾಜಕಾರಣದ ದಾಹ ಅವರಿಗಿದ್ದಿದ್ದರೆ ಅಧಿಕಾರದಲ್ಲಿದ್ದಾಗಲೇ ತಮ್ಮ ಪುತ್ರನಿಗೆ ಹಲವು ಅಧಿಕಾರ ನೀಡಬಹುದಿತ್ತು. ಆದರೆ, ಅವರಿಗೆ ಕುಟುಂಬ ರಾಜಕೀಯ ಕಿಂಚಿತ್ತು ಇಷ್ಟವಿರಲಿಲ್ಲ ಎಂದರು.

ಕುಗ್ರಾಮ ಕಾಳಮುದ್ದನದೊಡ್ಡಿಯಲ್ಲಿ ಕಾರ್ಖಾನೆ, ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆ ಸ್ಥಾಪಿಸಿ ಒಂದು ದೊಡ್ಡ ನಗರವಾಗಿ ರೂಪಿಸಿದ ಕೀರ್ತಿ ಜಿ.ಮಾದೇಗೌಡರಿಗೆ ಸಲ್ಲಬೇಕು. ಗೌಡರ ಸತ್ಯ ನಿಷ್ಠೆ, ನೇರ- ನಿಷ್ಠುರ ನುಡಿಗಳಿಂದ ಅವರ ಹೆಸರು ಸೂರ್ಯ- ಚಂದ್ರ ಇರುವವರೆಗೂ ಪಸರಿಸುತ್ತದೆ ಎಂದು ಸ್ಮರಿಸಿದರು.

ಹಳ್ಳಿಗಾಡಿನಲ್ಲಿ ಶೈಕ್ಷಣಿಕ ಸಂಸ್ಥೆ ಸ್ಫಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿ ದೇಶ-ವಿದೇಶಗಳಲ್ಲಿ ಉದ್ಯೋಗದಲ್ಲಿರಲು ಶ್ರಮಿಸಿ ಶೈಕ್ಷಣಿಕ ಕ್ರಾತಿ ಉಂಟು ಮಾಡಿರುವ ಗೌಡರ ಆಶಯಗಳನ್ನು ಪುತ್ರ ಮಧು ಈಡೇರಿಸುತ್ತ ಭಾರತೀ ವಿದ್ಯಾ ಸಂಸ್ಥೆಯನ್ನು ವಿಶ್ವವಿದ್ಯಾನಿಲಯದಂತೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಜಿ.ಮಾದೇಗೌಡರು ಗಾಂಧಿ ಆಶಯಗಳನ್ನು ಇಂದಿನ ಯುವ ಸಮುದಾಯಕ್ಕೆ ತೋರಿಸುವ ನಿಟ್ಟಿನಲ್ಲಿ ತಮ್ಮ ಇಳಿವಯಸ್ಸಿನವರೆಗೂ ಗಾಂಧಿ ಗ್ರಾಮಕ್ಕಾಗಿ ಹೋರಾಟ ಮಾಡಿ ನಿವೇಶನ ಪಡೆದಿದ್ದು, ಗಾಂಧಿ ಗ್ರಾಮದ ಪರಿಕಲ್ಪನೆಯನ್ನು ಮಧು ಮಾದೇಗೌಡ ಹೊತ್ತು ತಂದೆ ಆಸೆಯನ್ನು ಈಡೇರಿಸುವತ್ತ ದಾಪುಗಾಲು ಹಾಕುತ್ತ ತಂದೆಗೆ ತಕ್ಕ ಮಗ ಎನಿಸಿ ಕೊಂಡಿದ್ದಾರೆ ಎಂದರು.

ಮಂಡ್ಯದ ಕೆ.ವಿ.ಶಂಕರೇಗೌಡ ಶಿಕ್ಷಣ ಮಹಾವಿದ್ಯಾಲಯ ವಿಶ್ರಾಂತ ಪ್ರಾಂಶುಪಾಲ ಡಾ.ಎಸ್.ಬಿ.ಶಂಕರೇಗೌಡ ಮಾತನಾಡಿ, ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಕಾಳಮುದ್ದನದೊಡ್ಡಿಯನ್ನು ವಿಶ್ವ ಭೂಪಟದಲ್ಲಿ ಕಾಣುವಂತೆ ಭಾರತೀನಗರವನ್ನಾಗಿಸಿದ ಕೀರ್ತಿ ಮಹಾಪುರುಷ ದಿ.ಜಿ.ಮಾದೇಗೌಡರಿಗೆ ಸಲ್ಲುತ್ತದೆ. ತಂದೆ ಹೆಸರನ್ನು ಮತ್ತಷ್ಟು ವಿಸ್ತಾರಗೊಳಿಸುತ್ತಿರುವ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಕೆ.ವಿ.ಶಂಕರೇಗೌಡ ಮತ್ತು ಜಿ.ಮಾದೇಗೌಡ ಇಬ್ಬರು ಕೋಪಿಷ್ಠ ರಾಜಕಾರಣಿಗಳು. ಆದರೆ, ಜನ ಅವರನ್ನೆ ಹೆಚ್ಚು ಪ್ರೀತಿಸಿ ಆರಾಧಿಸುತಿದ್ದರು. ಕಾರಣ ಅವರು ನೇರ ನಡೆ, ನುಡಿಗಳಿಂದ ಸಮಾಜಮುಖಿ ಚಿಂತನೆ ಹೊಂದಿದ್ದರು ಎಂದು ಹೇಳಿದರು.

ಕೊಮ್ಮೇರಹಳ್ಳಿ ವಿಶ್ವಮಾನವ ಕ್ಷೇತ್ರದ ಪುರುಷೋತ್ತಮಾನಂದನಾಥಸ್ವಾಮಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಭಾರತೀ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಬಿ.ಎಂ.ನಂಜೇಗೌಡ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಪಾಂಶುಪಾಲ ಡಾ.ಎಸ್.ಬಿ.ಮಹದೇವಸ್ವಾಮಿ, ಬಿಂದು ಮಧು, ಮತ್ತಿತರರು ಉಪಸ್ಥಿತರಿದ್ದರು. ಎಂಎಲ್ಸಿ ಮಧು ಮಾದೇಗೌಡ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

ಮುಂದಿನ ವಿಧಾನಸಭೆಗೆ ಸ್ಪರ್ಧಿಸಲು ಮಧು ಮಾದೇಗೌಡ ಇಂಗಿತ

ಕೆ.ಎಂ.ದೊಡ್ಡಿ: ವಿಧಾನ ಪರಿಷತ್ ಸದಸ್ಯ ಸ್ಥಾನ ಇನ್ನೂ 3 ವರ್ಷವಿದೆ. ನಂತರ 5 ವರ್ಷಕ್ಕೆ ನಿಮ್ಮ ಆಶೀರ್ವಾದ, ಬೆಂಬಲ ನೀಡಬೇಕು ಎನ್ನುವ ಮೂಲಕ ಎಂಎಲ್ಸಿ ಮಧು ಜಿ.ಮಾದೇಗೌಡ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದರು.

ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ತಮ್ಮ ಹುಟ್ಟುಹಬ್ಬದ ಅಂಗವಾಗಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ನಮ್ಮ ಸಂಸ್ಥೆ ಸಿಬ್ಬಂದಿಯ ಪರಿಶ್ರಮ ಮತ್ತು ಅವರು ನೀಡಿದ ಮತ ಭಿಕ್ಷೆಯಿಂದ ನಾನು ವಿಧಾನ ಪರಿಷತ್ ಸದಸ್ಯನಾಗಿ ನಿಮ್ಮ ಸೇವೆ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬೆಂಬಲ ನೀಡುವಂತೆ ಕೋರಿದರು.

ಹಳ್ಳಿಗಾಡಿನಂತಿದ್ದ ಕೆ.ಎಂ.ದೊಡ್ಡಿಯ ಭಾರತೀಸಂಸ್ಥೆ ಇಂದು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದು, ನಗರ ಪ್ರದೇಶದಂತೆ ಮತ್ತಷ್ಟು ಸಾಧಿಸಬೇಕೆಂಬ ಛಲವಿದೆ. ಆದರೆ, ರಾಜಕೀಯದಲ್ಲಿ ಮಾತ್ರ ನಾನು 1ನೇ ತರಗತಿಯಲ್ಲಿದ್ದು ಏನು ಸಾಧಿಸಿಲ್ಲ. ಅದರಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡಬೇಕಿದ್ದು, ನೀವು ನನಗೆ ಹೆಚ್ಚಿನ ಬಲ ನೀಡಬೇಕು ಎಂದರು.

ನನ್ನ ತಂದೆ ಜಿ.ಮಾದೇಗೌಡರು ವಲ್ಲದ ಮನಸ್ಸಿನಿಂದ 2004ರಲ್ಲಿ ರಾಜಕೀಯಕ್ಕೆ (ತಮ್ಮ ಹೆಗಲ ಮೇಲೆ ಕೂರಿಸಿಕೊಂಡರು) ಪಾದಾರ್ಪಣೆ ಮಾಡಿಸಿದರು. ಅವರು 1994 ರಲ್ಲಿ ನನ್ನನ್ನು ರಾಜಕೀಯಕ್ಕೆ (ತಮ್ಮ ಹೆಗಲ ಮೇಲೆ ಕೂರಿಸಿಕೊಂಡಿದ್ದರೆ) ಕರೆ ತಂದಿದ್ದರು. ಇಂದು ನಾನು ರಾಜಕೀಯವಾಗಿ ಮತ್ತಷ್ಟು ಪ್ರಬಲವಾಗಬಹುದಿತ್ತು. ಆದರೆ, ಈಗ ಸೀಮಿತ ವರ್ಷಗಳಲ್ಲಿ ರಾಜಕೀಯ ಹೋರಾಟ ಮಾಡಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾಜ ನನಗೆ ಬಹಳಷ್ಟು ಕೊಟ್ಟಿದೆ. ಸಮಾಜಕ್ಕೆ ನಾನು ಸಾಕಷ್ಟು ಕೊಡುಗೆ ನೀಡಲು ಜನರು ಶಕ್ತಿ ನೀಡಬೇಕು. ರಾಜ್ಯದಲ್ಲಿ ನನ್ನ ತಂದೆ ಜಿ.ಮಾದೇಗೌಡರಂತೆ ಗುರುತಿಸಿಕೊಳ್ಳಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಓದಿನತ್ತ ಗಮನ ಹರಿಸದ್ದಿರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅಸಾಧ್ಯ
ಸಂಘಟನೆಗಳು ಸಮಾಜದ ಏಳಿಗೆಗೆ ದುಡಿಯಲಿ: ಶ್ರೀಗುರುದೇವ್ ಸ್ವಾಮೀಜಿ