ರೈತರಿಂದ ಜಿ.ನರೇಂದರ್ ಸಮಿತಿ ಅಹವಾಲು ಸ್ವೀಕಾರ: 5 ಗಂಟೆಗಳ ಕಾಲ ಸುಮಾರು ರೈತರ ಅಹವಾಲು ಆಲಿಕೆ

KannadaprabhaNewsNetwork |  
Published : Oct 01, 2026, 01:15 AM IST
30ಕೆಆರ್ ಎಂಎನ್ 2.ಜೆಪಿಜಿರಾಮನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ಜಿ.ನರೇಂದರ್ ಸಮಿತಿಗೆ ಅಹವಾಲು ಸಲ್ಲಿಸಲು ಆಗಮಿಸಿರುವ ರೈತರು. | Kannada Prabha

ಸಾರಾಂಶ

ಬೆಳಗ್ಗೆ 11.15ರ ವೇಳೆಗೆ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯ ಪರಿಶೀಲನಾ ಸಮಿತಿ ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಗುಹನಾಥನ್ ನರೇಂದರ್, ಸದಸ್ಯರಾದ ನಿವೃತ್ತ ಮುಖ್ಯಕಾರ್ಯದರ್ಶಿ ಎಸ್.ವಿ. ರಂಗನಾಥ್, ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ನಿವೃತ್ತ ಐಎಎಸ್ ಅಧಿಕಾರಿ ಪ್ರಸನ್ನ ಕುಮಾರ್ ಅವರು ರಾಮನಗರದ ಜಿಲ್ಲಾ ಕಚೇರಿಗಳ ಸಂಕೀರ್ಣಕ್ಕೆ ಆಗಮಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್ ) ಯೋಜನೆ ಸಂಬಂಧ ಪರ- ವಿರೋಧ ಹೋರಾಟ ತೀವ್ರಗೊಂಡಿರುವ ಬೆನ್ನ ಹಿಂದೆಯೇ ಹೈಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಾಧೀಶರಾದ ಜಸ್ಟೀಸ್ ಗುಹನಾಥನ್ ನರೇಂದರ್ ನೇತೃತ್ವದ ಸಮಿತಿ ಬುಧವಾರ ಯೋಜನೆ ವ್ಯಾಪ್ತಿಯ ರೈತರು ಮತ್ತು ಭೂ ಮಾಲೀಕರಿಂದ ಅಹವಾಲು ಆಲಿಸಿತು.

ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದಲ್ಲಿರುವ ಕೋರ್ಟ್ ಹಾಲ್ ನಲ್ಲಿ ಬೆಳಗ್ಗೆ 11.30 ರಿಂದ ಸಂಜೆ 4 ಗಂಟೆವರೆಗೆ ಜಸ್ಟೀಸ್ ಗುಹನಾಥನ್ ನರೇಂದರ್ ನೇತೃತ್ವದ ಸಮಿತಿ ರೈತರು - ಭೂ ಮಾಲೀಕರಿಂದ ಅಹವಾಲು ಪ್ರತಿ ಸ್ವೀಕರಿಸಿ, ಅಭಿಪ್ರಾಯ ಸಂಗ್ರಹ ಮಾಡಿತು.

ಬೆಳಗ್ಗೆ 11.15ರ ವೇಳೆಗೆ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯ ಪರಿಶೀಲನಾ ಸಮಿತಿ ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಗುಹನಾಥನ್ ನರೇಂದರ್, ಸದಸ್ಯರಾದ ನಿವೃತ್ತ ಮುಖ್ಯಕಾರ್ಯದರ್ಶಿ ಎಸ್.ವಿ. ರಂಗನಾಥ್, ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ನಿವೃತ್ತ ಐಎಎಸ್ ಅಧಿಕಾರಿ ಪ್ರಸನ್ನ ಕುಮಾರ್ ಅವರು ರಾಮನಗರದ ಜಿಲ್ಲಾ ಕಚೇರಿಗಳ ಸಂಕೀರ್ಣಕ್ಕೆ ಆಗಮಿಸಿದರು.

ಈ ಸಂಕೀರ್ಣದಲ್ಲಿ ಮೊದಲ ಮಹಡಿಯಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಪಕ್ಕದ ನ್ಯಾಯಾಲಯದ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷರಾದ ಗುಹನಾಥನ್ ನರೇಂದರ್ ಹಾಗೂ ಸದಸ್ಯರು ಆಸೀನರಾದರು. ಬಳಿಕ ಪಹಣಿ ಮತ್ತು ಆಧಾರ್ ಕಾರ್ಡ್ ನೀಡಿ ಹೆಸರು ನೋಂದಣಿ ಮಾಡಿಕೊಂಡಿದ್ದ ಒಬ್ಬೊಬ್ಬ ರೈತರಿಂದ ದಾಖಲೆಗಳ ಸಮೇತ ಅಹವಾಲು ಸ್ವೀಕರಿಸುವ ಜೊತೆಗೆ ಅವರ ಅಭಿಪ್ರಾಯವನ್ನು ಸಂಗ್ರಹಿಸಿದರು.

ಸಮಿತಿ ಎದುರು ಪರ- ವಿರೋಧ ಅಭಿಪ್ರಾಯಗಳು:

ಬಿಡದಿ ಟೌನ್ ಶಿಪ್ ಯೋಜನೆ ವ್ಯಾಪ್ತಿಯ ಬೈರಮಂಗಲ, ಬನ್ನಿಗಿರಿ, ಕೆ.ಜಿ.ಗೊಲ್ಲರಪಾಳ್ಯ, ಕೆಂಪಯ್ಯನಪಾಳ್ಯ, ಮಂಡಲಹಳ್ಳಿ ಗ್ರಾಮಗಳ ರೈತರು ಸಮಿತಿ ಅಧ್ಯಕ್ಷರು ಮತ್ತು ಸದಸ್ಯರ ಎದುರು ಅಹವಾಲು ಹೇಳಿಕೊಂಡರು.

ಟೌನ್ ಶಿಪ್ ಪರವಾಗಿರುವ ಮತ್ತು ವಿರೋಧಿಸುತ್ತಿರುವ ರೈತರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ರೈತರು ಮತ್ತು ಭೂ ಮಾಲೀಕರಲ್ಲಿ ಟೌನ್ ಶಿಪ್ ವಿರೋಧಿಸುತ್ತಿರುವ ರೈತರು, ನಮ್ಮ ಜೀವನಕ್ಕೆ ಭೂಮಿಯೇ ಆಧಾರ, ಅದನ್ನು ಉಳಿಸಿಕೊಡಿ. ವಾಸ್ತವ ಸ್ಥಿತಿ ಅರಿಯಲು ನೀವು (ಸಮಿತಿ) ಗ್ರಾಮಗಳಿಗೆ ಭೇಟಿ ನೀಡಬೇಕು. ನಾವು ಯಾವ ಕಾರಣಕ್ಕೂ ಟೌನ್ ಶಿಪ್ ಯೋಜನೆಯನ್ನು ಒಪ್ಪುವುದಿಲ್ಲ. ರೈತರಿಗೆ ಅಹವಾಲು ಸಲ್ಲಿಸಲು ಮತ್ತಷ್ಟು ಸಮಯ ಅವಕಾಶ ನೀಡಬೇಕೆಂದು ಮನವಿ ಮಾಡಿದರು.

ಇನ್ನು ಟೌನ್ ಶಿಪ್ ಪರವಾಗಿರುವ ರೈತರು ಟೌನ್ ಶಿಪ್ ಯೋಜನೆ ಅಭಿವೃದ್ಧಿಗೆ ಪೂರಕವಾಗಿದೆ. ಕೊಳಚೆ ನೀರಿನಿಂದ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ರೆಡ್ ಜೋನ್ ಕಾರಣ ದಶಕಗಳಿಂದ ರೈತರು ಸಂಕಷ್ಟದಲ್ಲಿ ಸಿಲುಕಿದ್ದೇವೆ. ಅದರಿಂದ ಮುಕ್ತಿಗೊಳಿಸಿ. ಎಕರೆ ಭೂಮಿಗೆ ₹5 ಕೋಟಿ ಪರಿಹಾರ ನೀಡುವಂತೆ ಸಮಿತಿ ಅಧ್ಯಕ್ಷ ಗುಹನಾಥನ್ ನರೇಂದರ್ ಎದುರು ಮನವಿ ಮಾಡಿದರು ಎಂದು ತಿಳಿದು ಬಂದಿದೆ.

ರೈತರಿಗೆ ಕುರ್ಚಿಗಳ ವ್ಯವಸ್ಥೆ:

ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯ ಪರಿಶೀಲನಾ ಸಮಿತಿಗೆ ಅರ್ಜಿ ಸಲ್ಲಿಸಿ ಅಹವಾಲು ಹೇಳಿಕೊಳ್ಳಲು ಬೈರಮಂಗಲ, ಬನ್ನಿಗಿರಿ, ಕೆ.ಜಿ.ಗೊಲ್ಲರಪಾಳ್ಯ, ಕೆಂಪಯ್ಯನಪಾಳ್ಯ ಹಾಗೂ ಮಂಡಲಹಳ್ಳಿ ಗ್ರಾಮಗಳ ನೂರಾರು ರೈತರು - ಭೂ ಮಾಲೀಕರು ಜಿಲ್ಲಾ ಕಚೇರಿಗಳ ಸಂಕೀರ್ಣಕ್ಕೆ ಆಗಮಿಸಿದರು.

ಭೂ ಮಾಲೀಕರಾದ ವಯೋವೃದ್ಧರು ಹಾಗೂ ವಿಶೇಷ ಚೇತನರು ಪರಿಚಿತರ ನೆರವಿನೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದಿದ್ದರು. ರೈತರಿಗಾಗಿಯೇ ಶಾಮಿಯಾನ ಹಾಕಿ ಕುರ್ಚಿಗಳ ವ್ಯವಸ್ಥೆ ಮಾಡಲಾಗಿತ್ತು.

ಬಿಡದಿಯ ನಾಡ ಕಚೇರಿಯಲ್ಲಿ ಪೂರ್ವ ನೋಂದಣಿಯಾದ ರೈತರಿಗೆ ಮಾತ್ರ ಜಿಲ್ಲಾ ಕಚೇರಿಗಳ ಸಂಕೀರ್ಣದೊಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತಿತ್ತು. ಸಂಕೀರ್ಣದ ಬಳಿ 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ, ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ಇಂದು ಅಹವಾಲು ಸ್ವೀಕಾರ ವಿವರ

ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯ ಪರಿಶೀಲನಾ ಸಮಿತಿ ಅ.1ರಂದು ಹೊಸೂರು, ಕಂಚುಗಾರನಹಳ್ಳಿ, ಅರಳಾಳುಸಂದ್ರ, ವಡೇರಹಳ್ಳಿ ರೈತರಿಂದ ಅಹವಾಲು ಸ್ವೀಕಾರ ಮಾಡಲಿದೆ.

---

ಗ್ರಾಮಗಳಿಗೆ ಜಿ.ನರೇಂದರ್ ಸಮಿತಿ ಭೇಟಿ ನೀಡಬೇಕೆಂದು ರೈತರ ಒತ್ತಾಯ

ರಾಮನಗರ: ಬಿಡದಿ ಟೌನ್ ಶಿಪ್ ಯೋಜನೆ ಸಂಬಂಧ ರೈತರಿಗೆ ಅಹವಾಲು ಹೇಳಿಕೊಳ್ಳಲು ಹೆಚ್ಚಿನ ಕಾಲಾವಕಾಶ ಮತ್ತು ಸಮಿತಿ ಸ್ಥಳ ಪರಿಶೀಲನೆ ಮಾಡಬೇಕೆಂದು ಒತ್ತಾಯಿಸಿ ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯ ಪರಿಶೀಲನಾ ಸಮಿತಿ ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಗುಹನಾಥನ್ ನರೇಂದರ್ ಅವರಿಗೆ ಬೈರಮಂಗಲ - ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರ ಭೂ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಮನವಿ ಸಲ್ಲಿಸಿ ಒತ್ತಾಯಿಸಿದರು.

ಕಂಚುಗಾರನಹಳ್ಳಿ ಮತ್ತು ಬೈರಮಂಗಲ ಗ್ರಾಮ ಪಂಚಾಯಿತಿಯ ಕಂದಾಯ ಗ್ರಾಮಗಳು ಹಾಗೂ 15 ಉಪ ಗ್ರಾಮಗಳು ಸೇರಿ ಒಟ್ಟು 24 ಗ್ರಾಮಗಳಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ಕುಟುಂಬಗಳು ವಾಸ ಮಾಡುತ್ತಿವೆ. 500ಕ್ಕೂ ಹೆಚ್ಚು ಕುಟುಂಬಗಳ ಕೂಲಿ ಕಾರ್ಮಿಕರು ಜೀವನ ಸಾಗಿಸುತ್ತಿದ್ದಾರೆ. ಎಲ್ಲ ರೈತರು ಮತ್ತು ಕೂಲಿ ಕಾರ್ಮಿಕರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಎರಡು ದಿನಗಳ ಕಾಲಾವಕಾಶ ಸಾಕಾಗುವುದಿಲ್ಲ. ಇನ್ನೂ ಹೆಚ್ಚಿನ ದಿನಗಳ ಕಾಲಾವಕಾಶ ಕೊಡಬೇಕು. ಈ ಎರಡು ಗ್ರಾಮ ಪಂಚಾಯಿತಿಗಳಿಗೆ ತಾವು ಭೇಟಿ ಮಾಡಿ ಗ್ರಾಮಗಳ ವೀಕ್ಷಣೆ ಮಾಡಬೇಕು. ಕಂದಾಯ ಗ್ರಾಮಗಳ ಜಮೀನಿನಲ್ಲಿರುವ ಬೆಳೆಗಳು ಮತ್ತು ಮರ- ಗಿಡಗಳನ್ನು ವೀಕ್ಷಣೆ ಮಾಡಬೇಕೆಂದು ಸಂಘದ ಪದಾಧಿಕಾರಿಗಳು ಸಮಿತಿ ಅಧ್ಯಕ್ಷ ಗುಹನಾಥನ್ ನರೇಂದರ್ ಅವರಲ್ಲಿ ಮನವಿ ಮಾಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಲಿತರಿಗೆ ದೇಗುಲ ಪ್ರವೇಶ ನಿರ್ಬಂಧ: ತಹಸೀಲ್ದಾರ್ ಭೇಟಿ
ಗ್ಯಾರಂಟಿ ಬಡವರ ಬದುಕಿನಲ್ಲಿ ಹೊಸ ಚೈತನ್ಯ ನೀಡಿವೆ: ಶಿವು ಚಂಗಾವರ