ಗದಗ: ಗದಗ-ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರ ಹಾಗೂ ಪ್ರಾಧಿಕಾರದ ಅಭಿವೃದ್ಧಿಯ ಪರಿಕಲ್ಪನೆಯ ಅನಾವರಣವು ಒಂದು ಅದ್ಭುತ ಕಾರ್ಯಕ್ರಮವಾಗಿದೆ. ಈ ಯೋಜನೆಯು ಅಭಿವೃದ್ಧಿಗೆ ಪೂರಕವಾದಂತಹ ಯೋಜನೆಯಾಗಿದೆ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ ಹೇಳಿದರು.
ಇದೊಂದು ಐತಿಹಾಸಿಕ ಯೋಜನೆಯಾಗಿದೆ.ಈ ಯೋಜನೆ ಪೂರ್ಣಗೊಂಡ ನಂತರ ಇಡೀ ಗದಗ-ಬೆಟಗೇರಿ ನಗರದ ಚಿತ್ರಣವೇ ಬದಲಾಗಲಿದೆ. ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಈ ಪರಿಕಲ್ಪನೆಯು ಇಡೀ ರಾಜ್ಯಕ್ಕೆ ಮಾದರಿಯಾಗಿದೆ.ಈ ಯೋಜನೆಗೆ ಬೇಕಾಗುವಂತಹ ಅನುದಾನ ಒದಗಿಸುವದರ ಜತೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವದು ಎಂದ ಅವರು, ಎಚ್.ಕೆ.ಪಾಟೀಲ ದೂರದೃಷ್ಟಿಯಿಂದ ಗದಗ ಇಂದು ಎಲ್ಲ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದೆ ಎಂದು ಹೇಳಿದರು.
ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು,ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವ ಡಾ. ಎಚ್.ಕೆ.ಪಾಟೀಲ ಮಾತನಾಡಿ, ಗದಗ-ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ಪ್ರಾಧಿಕಾರದ ಉದ್ಘಾಟನೆ ಹಾಗೂ ಪ್ರಾಧಿಕಾರದ ಅಭಿವೃದ್ಧಿಯ ಪರಿಕಲ್ಪನೆಯ ಅನಾವರಣಗೊಳ್ಳುವಂತಹ 34 ಎಕರೆ 32 ಗುಂಟೆ ಭೂಮಿ ಹೋರಾಟದ ಭೂಮಿಯಾಗಿದೆ. ಇಂತಹ ಸಾರ್ವಜನಿಕರ ಭೂಮಿ ಉಳಿಸಿದ ಪ್ರಾಮಾಣಿಕ ಅಧಿಕಾರಿ, ಸಾರ್ವಜನಿಕರನ್ನು ಅಭಿನಂದಿಸಿದರು.ಈ ಯೋಜನೆಯ 19.33.000 ಚ.ಸೆ.ಮಿ.ಕಟ್ಟಡ ಕಾಮಗಾರಿ ಪ್ರದೇಶವಾಗಿರುತ್ತದೆ. ಇಲ್ಲಿ ಉತ್ತಮ ಗುಣಮಟ್ಟದ ಕಟ್ಟಡ ಕಾಮಗಾರಿಗೆ ₹500 ಕೋಟಿ ಅನುದಾನದನ ಅಗತ್ಯವಿರುತ್ತದೆ. ಈ ಯೋಜನೆ ಶೀಘ್ರದಲ್ಲಿಯೇ ಪ್ರಾರಂಭಿಸಿ ಮೂರು ವರ್ಷದೊಳಗಾಗಿ ಪೂರ್ಣಗೊಳಿಸಲು ಪ್ರಯತ್ನಿಸಲಾಗುವದು. ಈ ಯೋಜನೆಯ ಯಶಸ್ವಿಗಾಗಿ ಎಲ್ಲರ ಸಹಕಾರ ಅಗತ್ಯವಾಗಿದ್ದು ಸ್ಥಳೀಯರು ಇದರ ಹೆಚ್ಚಿನ ಸದುಪಯೋಗ ಪಡೆದುಕೊಳ್ಳುವಂತೆ ಸಚಿವರು ಕರೆ ನೀಡಿದರು.
ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಗದಗ-ಬೆಟಗೇರಿ ನಗರದ ಮಧ್ಯಭಾಗದಲ್ಲಿ ಹೊಸ ವಿಚಾರಗಳು ಹೊಸ ಕಟ್ಟಡಗಳು ನಿರ್ಮಾಣವಾಗಬೇಕು ಎನ್ನುವದು ಎಲ್ಲರ ಕನಸಾಗಿತ್ತು. ಆ ಕನಸು ನನಸಾಗುವ ಕಾಲ ಕೂಡಿ ಬಂದಿದ್ದು ಗದಗ ಜನ ಇದರ ಸದುಪಯೋಗ ಪಡೆದುಕೊಳ್ಳಬೇಕು. ವ್ಯಾಪಾರಸ್ಥರು ಬೇರೆ ನಗರಗಳಲ್ಲಿ ಹೂಡಿಕೆ ಮಾಡುವದಕ್ಕೂ ಮುಂಚೆ ಜಿಲ್ಲೆಯಲ್ಲಿ ಹೂಡಿಕೆ ಮಾಡುವಂತೆ ಹೇಳಿದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ್ ಬಬರ್ಚಿ, ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಬಿ.ಬಿ.ಅಸೂಟಿ, ಗದಗ ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ನಗರಸಭೆ ಸದಸ್ಯರುಗಳು, ಮಾಜಿ ಶಾಸಕ ಡಿ.ಆರ್. ಪಾಟೀಲ, ರಾಮಣ್ಣ ಲಮಾಣಿ, ಮಾಜಿ ಸಂಸದ ಐ.ಜಿ.ಸನದಿ, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಜಿಪಂ ಸಿ.ಇ.ಓ ಭರತ. ಎಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸ್ವಾಗತಿಸಿದರು. ವೆಂಕಟೇಶ ಅಲ್ಕೋಡ ಹಾಗೂ ತಂಡದವರು ನಾಡಗೀತೆ ಪ್ರಸ್ತುತಿಸಿದರು.
ಇದೇ ಸಂದರ್ಭದಲ್ಲಿ ವರ್ಷ ಎರಡು ಹರ್ಷ ನೂರು ಕಿರುಹೊತ್ತಿಗೆ ಬಿಡುಗಡೆಗೊಳಿಸಲಾಯಿತು.