ಆರ್‌ಸಿಬಿ ತಂಡ ಜಯಗಳಿಸಲಿ ಎಂದು ಅಭಿಮಾನಿಗಳು ಮಾದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಹನೂರು
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮಂಗಳವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಫೈನಲ್ ಹಣಾಹಣಿ ನಡೆಯಲಿದ್ದು ಆರ್‌ಸಿಬಿಗೆ ಜಯವಾಗಲೆಂದು ಮಲೆಮಾದೇಶ್ವರನಿಗೆ ಆರ್‌ಸಿಬಿ ಅಭಿಮಾನಿಗಳು ಶಿವಾಷ್ಟೋತ್ತರ ಪೂಜೆ ಸಲ್ಲಿಸಿದರು.
18ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉತ್ತಮ ಪ್ರದರ್ಶನ ನೀಡುತ್ತಾ ಫೈನಲ್ ಪ್ರವೇಶಿಸಿದೆ. ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಫೈನಲ್ ಹಣಹಣಿ ನಡೆಯಲಿದ್ದು ಬೆಂಗಳೂರು ತಂಡ ಜಯಗಳಿಸಲಿ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಹಾಗೂ ಮಾದಪ್ಪ ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಪವಾಡ ಪುರುಷ ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಅಭಿಮಾನಿಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಸರಿನಲ್ಲಿ ಶಿವ ಅಷ್ಟೋತ್ತರ, ಬಿಲ್ವಾರ್ಚನೆ ಸಲ್ಲಿಸಿ ಪೂಜೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ.
ಈಡುಗಾಯಿ ಒಡೆದ ಅಭಿಮಾನಿಗಳು:
ಸೋಮವಾರ ಸಂಜೆಯೂ ಕೂಡ ಮಲೆಮಹದೇಶ್ವರ ಬೆಟ್ಟದಲ್ಲಿ ಅಭಿಮಾನಿಗಳು ಪೂಜೆ ಸಲ್ಲಿಸಿ ಆರ್‌ಸಿಬಿ ಗೆಲುವಿಗೆ ಹಾರೈಸಿದ್ದು ಈಡುಗಾಯಿ ಒಡೆದು ಜಯಘೋಷ ಕೂಗಿದ್ದಾರೆ. ಇಂದಿನ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದು ಬೀಗಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದಾರೆ. ದೇಗುಲ ಮುಂಭಾಗ ಆರ್‌ಸಿಬಿ ಜೆರ್ಸಿ ಹಿಡಿದು ಜಯಘೋಷ ಕೂಗಿದ ಅಭಿಮಾನಿಗಳು ಈ ಸಲ ಕಪ್ ನಮ್ದೆಯಾಗಲಿ ಎಂದು ಮಾದಪ್ಪನಿಗೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ, ಯಾರಾ ಕಣ್ಣು ಬೀಳದಿರಲಿ, ಈ ಸಲ ಬೆಂಗಳೂರು ಕಪ್ ಗೆಲ್ಲಲಿ ಎಂದು ಹಾರೈಸಿ ಅಭಿಮಾನಿಗಳು ಈಡುಗಾಯಿ ಒಡೆದಿದ್ದಾರೆ.
ಬೆಂಗಳೂರು ತಲಘಟ್ಟಪುರದ ಆರ್‌ಸಿಬಿ ಅಭಿಮಾನಿಗಳು ಮಾದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಮಂಗಳವಾರ ನಡೆಯುವ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಲಿ ಎಂದು ತಮ್ಮ ಕಾರಿನ ಮೇಲೆ ಆರ್‌ಸಿಬಿ ಎಂದು ಬರೆಯುವ ಮೂಲಕ ಎಲ್ಲರ ಗಮನ ಸೆಳೆದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.