ಯುವ ಕ್ರಿಕೆಟ್ ಪ್ರತಿಭೆಗಳು ಅವಕಾಶಗಳನ್ನು ಅರಸಿ ಬೆಂಗಳೂರಿಗೆ ಬರುವ ಅಗತ್ಯವಿಲ್ಲ. ಪ್ರತಿಭೆ ಇರುವ ಸ್ಥಳದಲ್ಲಿಯೇ ಕ್ರಿಕೆಟ್ ಬೆಳೆಯಬೇಕು.
ನರಸಾಪುರದಲ್ಲಿ ಕೆಎಸ್ಸಿಎ ಕ್ರಿಕೆಟ್ ಕ್ರೀಡಾಂಗಣಕ್ಕೆ ಭೂಮಿಪೂಜೆ
ಕನ್ನಡಪ್ರಭ ವಾರ್ತೆ ಗದಗ
ಯುವ ಕ್ರಿಕೆಟ್ ಪ್ರತಿಭೆಗಳು ಅವಕಾಶಗಳನ್ನು ಅರಸಿ ಬೆಂಗಳೂರಿಗೆ ಬರುವ ಅಗತ್ಯವಿಲ್ಲ. ಪ್ರತಿಭೆ ಇರುವ ಸ್ಥಳದಲ್ಲಿಯೇ ಕ್ರಿಕೆಟ್ ಬೆಳೆಯಬೇಕು. ಈ ಹಿನ್ನೆಲೆ ಗದಗ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ರಣಜಿ ಪಂದ್ಯಗಳು ನಡೆಯಬೇಕು ಎಂಬ ಉದ್ದೇಶವಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಅಧ್ಯಕ್ಷ ವೆಂಕಟೇಶ ಪ್ರಸಾದ್ ಹೇಳಿದರು.
ಮಂಗಳವಾರ ಸಂಜೆ ಬೆಟಗೇರಿಯ ನರಸಾಪುರದಲ್ಲಿ ಕೆಎಸ್ಸಿಎ ವತಿಯಿಂದ ನಿರ್ಮಿಸಲಿರುವ ಕ್ರಿಕೆಟ್ ಕ್ರೀಡಾಂಗಣದ ಭೂಮಿಪೂಜೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕ್ರಿಕೆಟ್ ರಾಜ್ಯದ ಎಲ್ಲ ಭಾಗಗಳ ಪ್ರತಿಭಾವಂತ ಆಟಗಾರರಿಗೂ ಸಮಾನ ಅವಕಾಶಗಳು ದೊರೆಯಬೇಕು. ಯುವ ಕ್ರಿಕೆಟಿಗರು ತಮ್ಮ ಊರಿನಲ್ಲಿಯೇ ಅಭ್ಯಾಸ ನಡೆಸಿ ಉನ್ನತ ಮಟ್ಟದ ಪಂದ್ಯಗಳಲ್ಲಿ ಭಾಗವಹಿಸುವ ವಾತಾವರಣ ನಿರ್ಮಿಸುವುದು ಸಂಸ್ಥೆಯ ಉದ್ದೇಶವಾಗಿದೆ.
ರಣಜಿ ಪಂದ್ಯಗಳನ್ನು ರಾಜ್ಯದ ವಿವಿಧ ನಗರಗಳಲ್ಲಿ ಆಯೋಜಿಸುವ ನಿಟ್ಟಿನಲ್ಲಿ ಕೆಎಸ್ಸಿಎ ಕ್ರಮ ಕೈಗೊಳ್ಳುತ್ತಿದೆ. ಕಳೆದ ವರ್ಷ ರಣಜಿ ಫೈನಲ್ ಪಂದ್ಯವನ್ನು ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿತ್ತು. ಈ ಬಾರಿ ಬೆಳಗಾವಿಯಲ್ಲಿ ರಣಜಿ ಟ್ರೋಫಿ ಪಂದ್ಯಗಳು ನಡೆಯಲಿವೆ. ಮುಂದಿನ ದಿನಗಳಲ್ಲಿ ಗದಗದಲ್ಲಿಯೂ ರಣಜಿ ಪಂದ್ಯಗಳನ್ನು ಆಯೋಜಿಸುವ ಗುರಿ ಹೊಂದಲಾಗಿದೆ.
ಇದರಿಂದ ಉತ್ತರ ಕರ್ನಾಟಕದ ಕ್ರಿಕೆಟ್ ಆಟಗಾರರಿಗೆ ತಮ್ಮದೇ ನೆಲದಲ್ಲಿ ರಾಷ್ಟ್ರೀಯ ಮಟ್ಟದ ಪಂದ್ಯಗಳನ್ನು ಆಡುವ ಅವಕಾಶ ದೊರೆಯಲಿದೆ ಎಂದರು.
ಗದಗದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲಾಗುತ್ತದೆ. ಕ್ರೀಡಾಂಗಣದ ಜತೆಗೆ ಪೆವಿಲಿಯನ್, ಅಭ್ಯಾಸ ಅಂಕಣ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು. ಕೇವಲ ಪಂದ್ಯಗಳ ಆಯೋಜನೆಗೆ ಮಾತ್ರವಲ್ಲದೆ, ಸ್ಥಳೀಯ ಯುವ ಆಟಗಾರರ ತರಬೇತಿ ಹಾಗೂ ಪ್ರತಿಭೆ ಅನಾವರಣಕ್ಕೂ ಅಕಾಡೆಮಿ ಸ್ಥಾಪನೆಗೂ ಆದ್ಯತೆ ನೀಡಲಾಗಿದೆ ಎಂದರು.
ಶಾಸಕ ಎಚ್.ಕೆ. ಪಾಟೀಲ ಮಾತನಾಡಿ, ಗದಗ ಜಿಲ್ಲೆಯಲ್ಲಿ ವಿವಿಧ ಕ್ರೀಡೆಗಳಿಗೆ ಸೌಲಭ್ಯಗಳಿದ್ದರೂ ಕ್ರಿಕೆಟ್ಗೆ ಸೂಕ್ತ ಮೈದಾನದ ಕೊರತೆಯಿತ್ತು. ಇದೀಗ ಬಹುದಿನಗಳ ಬೇಡಿಕೆ ಈಡೇರುತ್ತಿದ್ದು, 2028ರ ವೇಳೆಗೆ ಗದಗದಲ್ಲಿ ರಣಜಿ ಪಂದ್ಯಗಳು ನಡೆಯುವಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಕೆಎಸ್ಸಿಎ ಗೌರವ ಕಾರ್ಯದರ್ಶಿ ಸಂತೋಷ ಮೆನನ್ ಮಾತನಾಡಿ, ಮೊದಲ ಹಂತದಲ್ಲಿ ₹3 ಕೋಟಿ ವೆಚ್ಚದ ಕಾಮಗಾರಿ ಆರಂಭವಾಗಲಿದೆ. ನಂತರ ಹಂತ ಹಂತವಾಗಿ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಿ, ರಣಜಿ ಪಂದ್ಯಗಳ ಆಯೋಜನೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಕೆಎಸ್ಸಿಎ ಧಾರವಾಡ ವಲಯ ಸಂಚಾಲಕ ವೀರಣ್ಣ ಸವಡಿ ಮಾತನಾಡಿ, ಧಾರವಾಡ ವಲಯದಲ್ಲಿ ಈಗಾಗಲೇ ಎರಡು ಕ್ರೀಡಾಂಗಣಗಳಿದ್ದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುತ್ತಿವೆ. ಗದಗದಲ್ಲಿ ಮೂರನೇ ಕ್ರೀಡಾಂಗಣ ನಿರ್ಮಾಣವಾಗುತ್ತಿರುವುದು ಸಂತಸದ ವಿಷಯ ಎಂದರು.
ಕಾರ್ಯಕ್ರಮದಲ್ಲಿ ಅವಿನಾಶ ವೈದ್ಯ, ಅಲ್ತಾಫ್ ಕಿತ್ತೂರು, ಅನಿರುದ್ಧ ಜೋಶಿ, ವಿಜಯ ವೈದ್ಯ, ವೀರೇಶ ಉಂಡಿ, ಮುನ್ನಾ ಗುಳೇದಗುಡ್ಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಾಸಣ್ಣ ಕುರುಡಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ರಂಗಣ್ಣ ಓದುಗೌಡರ ಉಪಸ್ಥಿತರಿದ್ದರು. ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಸ್ವಾಗತಿಸಿದರು.ನಾನು ಕನ್ನಡದಲ್ಲಿಯೇ ಮಾತಾಡುತ್ತೇನೆ. ನಾನು ಅಪ್ಪಟ ಕನ್ನಡಿಗ, ಕನ್ನಡ ಮಣ್ಣಿನ ಮಗ, 20 ವರ್ಷಗಳ ಹಿಂದೆ ಸುನೀಲ್ ಜೋಶಿ ಅವರ ಮನೆಗೆ ಬಂದಿದ್ದೆ. ಅದಾದ ನಂತರ ಇದೇ ಮೊದಲ ಬಾರಿಗೆ ಗದಗ ನಗರಕ್ಕೆ ಬಂದಿರುವುದು ಖುಷಿ ತಂದಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.