ಗದಗ:ಸಹಕಾರಿ ರಂಗದ ಭೀಷ್ಮ, ಹುಲಕೋಟಿ ಹುಲಿ ಎಂದೇ ಪ್ರಖ್ಯಾತರಾಗಿದ್ದ ದಿ. ಕೆ.ಎಚ್.ಪಾಟೀಲರ ಜನ್ಮ ಶತಮಾನೋತ್ಸವಕ್ಕೆ ಗದಗ ನಗರ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.
ಶುದ್ಧ ಕುಡಿವ ನೀರಿನ ಘಟಕ, ಕಣ್ಣಿನ ತಪಾಸಣೆ, ಹೃದಯ ಶಸ್ತ್ರ ಚಿಕಿತ್ಸೆ, ಕಿಡ್ನಿ ಕಸಿ ಹೀಗೆ ಬಡವರಿಗೆ ಆಸರೆಯಾಗಬಲ್ಲ, ಅವರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆಗಳನ್ನು ತರಬಲ್ಲ ಹತ್ತಾರು ಯೋಜನೆಗಳನ್ನು ಕಾರ್ಯಗತ ಮಾಡುತ್ತಿರುವವರಿಗೆ ದಿ.ಕೆ.ಎಚ್.ಪಾಟೀಲರ ಶತಮಾನೋತ್ಸವ ಒಂದು ದೊಡ್ಡ ಚೈತನ್ಯದ ಚಿಲುಮೆಯಾಗಿದೆ. ಆ ಚೈತನ್ಯವನ್ನು ಮುಂದುವರಿಸಿಕೊಂಡು ಹೋಗುವ ಮತ್ತಷ್ಟು ದೃಢ ಸಂಕಲ್ಪದೊಂದಿಗೆ ಜನ್ಮ ಶತಮಾನೋತ್ಸವಕ್ಕೆ ಅಣಿಯಾಗಿದ್ದಾರೆ.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅವಳಿ ನಗರ ಮತ್ತು ಜಿಲ್ಲೆಯಾದ್ಯಂತ ಬ್ಯಾನರ್‌ಗಳು ರಾರಾಜಿಸುತ್ತಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ನಾಡಿನ ಘಟಾನುಘಟಿ ನಾಯಕರು ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹಮ್ಮಸ್ಸು ದುಪ್ಪಟ್ಟಾಗಿದೆ. ಇದಕ್ಕಾಗಿ ಗದಗ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಬೃಹತ್ ವೇದಿಕೆ ಸಿದ್ಧವಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ದಿ.ಕೆ.ಎಚ್. ಪಾಟೀಲರ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ನೂತನ ಕಟ್ಟಡವೂ ಕೂಡಾ ಉದ್ಘಾಟನೆಗೊಳ್ಳಲಿದೆ.