ಲಕ್ಷ್ಮೇಶ್ವರ: ನಮ್ಮ ನಾಡಿನ ಸಾಹಿತ್ಯ, ಕಲೆ, ಸಂಸ್ಕೃತಿಗೆ ಗದಗ ಜಿಲ್ಲೆಯ ಕೊಡುಗೆ ಅಪಾರ, ಪಟ್ಟಣದ ಹಿರಿಯ ಸಾಹಿತಿ ದಿ.ಪ್ರೊ.ಸಿ.ವಿ. ಕೆರಿಮನಿ ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯವಾಗಿದೆ ಎಂದು ಗದಗ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಹೇಳಿದರು.
ಗದಗ ಎಂದೊಡನೆ ನಮಗೆ ನೆನಪಿಗೆ ಬರುವುದು ಕುಮಾರವ್ಯಾಸನ ಗದುಗಿನ ಭಾರತ, ಚಾಮರಸನ ಪ್ರಭುಲಿಂಗಲೀಲೆ, ಸಂಗೀತ ಕ್ಷೇತ್ರದಲ್ಲಿ ಪಂಚಾಕ್ಷರ ಗವಾಯಿಗಳು, ಪುಟ್ಟರಾಜ ಕವಿ ಗವಾಯಿಗಳು, ಸಹಕಾರಿ ಪಿತಾಮಹ ಸಿದ್ದನಗೌಡ ಪಾಟೀಲ ಹಾಗೂ ಸಹಕಾರಿ ರಂಗದ ಭೀಷ್ಮ ಕೆ .ಹೆಚ್.ಪಾಟೀಲರು, ಚಿತ್ರಕಲೆಯಲ್ಲಿ ಚಟ್ಟಿ ಹಾಗೂ ಟಿ.ಪಿ. ಅಕ್ಕಿ, ಸಿ.ಎನ್. ಪಾಟೀಲರು ರಂಗಭೂಮಿಯಲ್ಲಿ ಗರುಡ ಸದಾಶಿವರಾಯರು, ಶಿರಹಟ್ಟಿಯ ವೆಂಕೋಬರಾಯರು, ಸ್ವಾತಂತ್ರ್ಯ ಮೊಳಗಿಸಿದ ನರಗುಂದದ ಬಾಬಾ ಸಾಹೇಬರು, ಮುಂಡರಗಿಯ ಭೀಮರಾಯರು, ಮೈಲಾರ ಮಹಾದೇವ ನಾಯಕತ್ವ ಒಳಗೊಂಡ ಸ್ವಾತಂತ್ರ ಹೋರಾಟಗಾರರು, ಐತಿಹಾಸಿಕ ದೇವಾಲಯ ಗದುಗಿನ ವೀರನಾರಾಯಣ, ಲಕ್ಕುಂಡಿಯ ವಿಶ್ವನಾಥ ದೇವಾಲಯ, ಲಕ್ಷ್ಮೇಶ್ವರದ ಸೋಮೇಶ್ವರ ದೇವಾಲಯ, ಧಾರ್ಮಿಕ ಕೇಂದ್ರ ಗದುಗಿನ ತೋಂಟದಾರ್ಯ ಮಠ, ಮುಂಡರಗಿಯ ಅನ್ನದಾನೇಶ್ವರ ಮಠ, ಶಿರಹಟ್ಟಿಯ ಫಕೀರಸ್ವಾಮಿ ಮಠ , ಏಕೀಕರಣ ಹೋರಾಟಗಾರ ಹುಯಿಲಗೋಳ ನಾರಾಯಣರಾಯರು, ಅಂದಾನೆಪ್ಪಾ ದೊಡ್ಡಮೇಟಿ. ಮುದ್ರಣಾಲಯಗಳು, ಪುಸ್ತಕ ಉದ್ಯಮ, ಪತ್ರಿಕೋದ್ಯಮ, ಶಿಲ್ಪಸಂಪತ್ತು , ಶಾಸನ ಸಂಪತ್ತು, ಕಪ್ಪತ್ತ ಗುಡ್ಡದ ವನ್ಯ ಸಂಪತ್ತು, ಕೃಷಿ, ಕೈಗಾರಿಕೆ, ಕ್ರೀಡೆ, ವಾಣಿಜ್ಯೋದ್ಯಮ, ರಾಜಕೀಯ ಮುತ್ಸದ್ದಿಗಳು, ಜನಪದ ಕಲೆಗಳು, ಸೂಫಿ ಸಂತರು, ಶರಣರು, ಸ್ವಾತಂತ್ರ ಹೋರಾಟಗಾರರು, ಕರ್ನಾಟಕ ಏಕೀಕರಣ ಹೋರಾಟಗಾರರು ಹೀಗೆ ಒಂದೇ ಎರಡೇ ಹಲವಾರು ಕ್ಷೇತ್ರಗಳಲ್ಲಿ ಗದಗ ಜಿಲ್ಲೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದೆ ಮತ್ತು ಉನ್ನತ ಸ್ಥಾನವನ್ನು ಪಡೆದಿದೆ ಎಂದು ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅಭಿಪ್ರಾಯಪಟ್ಟರು .
ಸಮಾರಂಭದ ಅಧ್ಯಕ್ಷತೆಯನ್ನು ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ,ಆರ್.ಎನ್. ಪಾಟೀಲ ವಹಿಸಿದ್ದರು. ಡಿ.ಎಸ್. ಬಾಪುರಿ, ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈಶ್ವರ ಮೆಡ್ಲೇರಿ, ಕಾರ್ಯದರ್ಶಿ ಮಂಜುನಾಥ ಚಾಕಲಬ್ಬಿ, ನಾಗರಾಜ ಕಳಸಾಪುರ, ರವಿರಾಜ ಶಿಗ್ಲಿ ಇದ್ದರು.ಈ ವೇಳೆ ಕದಳಿ ವೇದಿಕೆಯ ಅಧ್ಯಕ್ಷೆ ನಿರ್ಮಲಾ ಅರಳಿ, ಲಲಿತಾ ಕೆರಿಮನಿ, ಪ್ರತಿಮಾ ಮಹಾಜನಶೆಟ್ಟರ, ಕುಸುಮಾ ಮಲ್ಲಾಡದ, ಸಿ,ಜಿ ಹಿರೇಮಠ, ಕೆ.ಎಸ್.ಕೊಡ್ಲಿವಾಡ, ಎಸ್,ಎಫ್ ಆದಿ, ಜಿ,ಎಸ್ ರಾಮಶೆಟ್ಟರ, ಎಹ್.ಜಿ.ದುರಗಣ್ಣವರ, ಬಿ.ಎಸ್. ಸಂಗಪ್ಪಶೆಟ್ಟರ, ರತ್ನಾ ಕರ್ಕಿ ಸೋಮಶೇಖರ ಕೆರಿಮನಿ ಇದ್ದರು. ಡಿ.ಎಫ್. ಪಾಟೀಲ ಸ್ವಾಗತಿಸಿದರು, ರೇಖಾ ವಡಕಣ್ಣವರ ಕಾರ್ಯಕ್ರಮ ನಿರೂಪಿಸಿದರು, ನಾಗರತ್ನ ಬುರುಡಿ ವಂದಿಸಿದರು.