ಶಿವಕುಮಾರ ಕುಷ್ಟಗಿ
ಗದಗ: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಗದಗ ಜಿಲ್ಲೆಯ ಅಧಿಕಾರಿಗಳ ಉತ್ತಮ ಕಾರ್ಯವೈಖರಿಯಿಂದಾಗಿ ಈಗಾಗಲೇ ಶೇ. 50ಕ್ಕಿಂತಲೂ ಹೆಚ್ಚಿನ ಪ್ರಗತಿ ಸಾಧಿಸಿದ್ದು, ರಾಜ್ಯಮಟ್ಟದಲ್ಲಿ 3ನೇ ಸ್ಥಾನದಲ್ಲಿದೆ.ಜಿಲ್ಲಾಡಳಿತ ಒಟ್ಟು 2.80 ಲಕ್ಷ ಕುಟುಂಬಗಳ ಸಮೀಕ್ಷೆ ಪೂರ್ಣಗೊಳಿಸುವ ಗುರಿ ಹೊಂದಿದೆ. ಮಂಗಳವಾರ ಸಂಜೆಯವರೆಗೆ 1.51 ಲಕ್ಷ ಕುಟುಂಬಗಳ ಮಾಹಿತಿ ಸಂಗ್ರಹಣೆ ಪೂರ್ಣಗೊಳಿಸಲಾಗಿದೆ. ಇನ್ನೆರಡು ದಿನಗಳಲ್ಲಿ 50 ಸಾವಿರಕ್ಕೂ ಅಧಿಕ ಕುಟುಂಬಗಳ ಮಾಹಿತಿ ತಂತ್ರಾಂಶದಲ್ಲಿ ದಾಖಲಾಗುವ ಸಾಧ್ಯತೆ ಇದ್ದು, ಗದಗ ಜಿಲ್ಲೆ ಉತ್ತಮ ಪ್ರಗತಿ ಹೊಂದಿದೆ.ಹೇಳಲಾರದ ಸಮಸ್ಯೆಗಳು: ಜಿಲ್ಲೆಯಲ್ಲಿ ಸಮೀಕ್ಷಾ ಕಾರ್ಯವು ಪ್ರತಿನಿತ್ಯದ ನಿಗದಿತ ಗುರಿಗಿಂತ ಹೆಚ್ಚು ಪ್ರಮಾಣದಲ್ಲಿ ನಡೆಯುತ್ತಿರುವುದು ಸಮೀಕ್ಷೆಯಲ್ಲಿ ಗದಗ ಜಿಲ್ಲೆ ಮುಂಚೂಣಿಯಲ್ಲಿ ಇರಲು ಕಾರಣವಾಗಿದೆ. ಆದರೆ ಸಮೀಕ್ಷೆ ತೆರಳುವ ಸಿಬ್ಬಂದಿಗೆ ಕುಟುಂಬಸ್ಥರಿಂದ ನಿರೀಕ್ಷಿತ ಪ್ರಮಾಣದಲ್ಲಿ ಸಹಕಾರ ಸಿಗುತ್ತಿಲ್ಲ. ಮುಖ್ಯವಾಗಿ ಮನೆಗಳ ಹುಡುಕಾಟದಲ್ಲಿ ಆಗುತ್ತಿರುವ ತೊಂದರೆ, ಸಮೀಕ್ಷೆ ವೇಳೆ ಕುಟುಂಬಸ್ಥರಿಂದ ಎದುರಾಗುತ್ತಿರುವ ಅನಿರೀಕ್ಷಿತ ಪ್ರಶ್ನೆಗಳು, ಇದಕ್ಕೆಲ್ಲಾ ಉತ್ತರಿಸಿ ಅವರನ್ನು ಮಾಹಿತಿ ನೀಡಲು ಒಪ್ಪಿಸುವುದರೊಳಗಾಗಿ ಗಣತಿ ಸಿಬ್ಬಂದಿ ಹೈರಾಣಾಗಿದ್ದಾರೆ. ಇದರೊಟ್ಟಿಗೆ ಸಮೀಕ್ಷೆಗೆ ತೆರಳಿದ ಕೆಲವೆಡೆ ಸಿಬ್ಬಂದಿ ನಾಯಿ ಕಡಿತಕ್ಕೂ ಒಳಗಾಗಿದ್ದಾರೆ.ತಾಂತ್ರಿಕ ಸಮಸ್ಯೆ ನಿವಾರಣೆ: ಸಮೀಕ್ಷಾ ಕಾರ್ಯದ ಆರಂಭದಲ್ಲಿ ತಾಂತ್ರಿಕ ಸಮಸ್ಯೆ ಪ್ರಗತಿಗೆ ಅಡಚಣೆಯಾಗಿದ್ದವು. ಆದರೆ, ಸಣ್ಣಪುಟ್ಟ ಸಮಸ್ಯೆ ಹೊರತುಪಡಿಸಿ ತಾಂತ್ರಿಕ ಸಮಸ್ಯೆಗಳು ಬಹುತೇಕ ಬಗೆಹರಿದಿರುವುದರಿಂದ ಸಮೀಕ್ಷಾ ಕಾರ್ಯವು ಗಣನೀಯ ವೇಗ ಪಡೆದುಕೊಂಡಿದೆ. ಆದರೆ ಡೇಟಾ ಮತ್ತು ನೆಟ್‌ವರ್ಕ್ ಸಮಸ್ಯೆ ಕೂಡಾ ಎದುರಾಗುತ್ತಿದ್ದು, ಇದರ ಪರಿಹಾರಕ್ಕೂ ಅಧಿಕಾರಿಗಳು ಗಮನ ನೀಡಬೇಕಿದೆ.
ಮೌಖಿಕ ಎಚ್ಚರಿಕೆರಾಜ್ಯದ ಇನ್ನಿತರ ಜಿಲ್ಲೆಗಳಲ್ಲಿ, ಸಮೀಕ್ಷಾ ಕಾರ್ಯದ ಬಗ್ಗೆ ಅಸಡ್ಡೆ ತೋರಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗಿದೆ. ಆದರೆ ಜಿಲ್ಲೆಯಲ್ಲಿ ಅಂಥ ಒಂದೇ ಒಂದು ಘಟನೆ ನಡೆದಿಲ್ಲ. ಕೇವಲ ಮೌಖಿಕ ಸೂಚನೆ ಮೇರೆಗೆ ಸಿಬ್ಬಂದಿಗಳಿಂದ ಕೆಲಸ ಪಡೆಯುವಲ್ಲಿ ಗದಗ ಜಿಲ್ಲೆ ಮುಂಚೂಣಿಯಲ್ಲಿರುವುದು ಸಂತಸದ ಸಂಗತಿ.2600 ಸಿಬ್ಬಂದಿ ಬಳಕೆಸಮೀಕ್ಷೆಯನ್ನು ತ್ವರಿತವಾಗಿ ಮತ್ತು ನಿಖರವಾಗಿ ನಡೆಸಲು ಜಿಲ್ಲೆಯಲ್ಲಿ ಒಟ್ಟು 2600 ಜನ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿದೆ. ಆದರೆ, ಗರ್ಭಿಣಿಯರು, ನಿವೃತ್ತಿಯ ಅಂಚಿನಲ್ಲಿರುವವರು ಮತ್ತು 100ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರಿಗೆ ಸಮೀಕ್ಷಾ ಕಾರ್ಯದಿಂದ ವಿನಾಯಿತಿ ನೀಡಲಾಗಿದೆ.
ಕಾರ್ಯಕ್ಷಮತೆ: ಸಮೀಕ್ಷಾ ಕಾರ್ಯದಲ್ಲಿ ರಾಜ್ಯದ ಮುಂಚೂಣಿ ಮೂರು ಜಿಲ್ಲೆಗಳಲ್ಲಿ ಗದಗ ಜಿಲ್ಲೆ ತನ್ನ ಸ್ಥಾನ ಭದ್ರಪಡಿಸಿಕೊಂಡಿದ್ದು, ಜಿಲ್ಲಾಡಳಿತ ಮತ್ತು ಸಮೀಕ್ಷೆಗೆ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ಷಮತೆಯಿಂದ ಇದೆಲ್ಲಾ ಸಾಧ್ಯವಾಗಿದೆ ಎಂದು ಸಮೀಕ್ಷೆಯ ಸದಸ್ಯ ಕಾರ್ಯದರ್ಶಿ ಡಾ. ಬಸವರಾಜ ಬಳ್ಳಾರಿ ತಿಳಿಸಿದರು.ಪ್ರಗತಿ ಉತ್ತಮ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪ್ರಗತಿ ಉತ್ತಮವಾಗಿದೆ. ಆರಂಭದಿಂದಲೂ ರಾಜ್ಯದ ಮುಂಚೂಣಿ ಮೂರು ಜಿಲ್ಲೆಗಳಲ್ಲಿ ಸ್ಥಾನ ಪಡೆದುಕೊಂಡಿದ್ದು, ನಿಗದಿತ ಅವಧಿಯಲ್ಲಿ ಸಮೀಕ್ಷೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಜಿಲ್ಲಾಧಿಕಾರಿ ಶ್ರೀಧರ ಸಿ.ಎನ್. ತಿಳಿಸಿದರು.