ಲಕ್ಷ್ಮೇಶ್ವರ: ಇಲಾಖೆವಾರು ಸರಿಯಾದ ಪ್ರಸ್ತಾವನೆ ಸಲ್ಲಿಸಿದರೆ ಸರ್ಕಾರದಿಂದ ಅನುದಾನ ತರುವ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಡಾ. ಚಂದ್ರು ಲಮಾಣಿ ತಿಳಿಸಿದರು.
ಮಂಗಳವಾರ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕಿನ ತಾಲೂಕು ಯೋಜನಾ ಮತ್ತು ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಧಿಕಾರಿಗಳು ಮಾಹಿತಿ ಕೊರತೆಯಿಂದ ಕ್ರಿಯಾಯೋಜನೆ ಸರಿಯಾಗಿ ಮಾಡಿಕೊಂಡು ಬಂದಿಲ್ಲ ಎಂದರು.ಅಧಿಕಾರಿಗಳು ಕ್ರಿಯಾಶೀಲರಾಗದಿದ್ದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುವಾಗುತ್ತವೆ. ಇಲಾಖೆಗಳಲ್ಲಿ ಕರ್ತವ್ಯಕ್ಕೆ ಅಡ್ಡಿ ಪಡಿಸುವವರ ಮೇಲೆ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ಅಧಿಕಾರಿಗಳಿಗೆ ಖಡಕ್ ಸಂದೇಶ ನೀಡಿದರು.
ಬ್ಯಾಂಕ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಶಿಕ್ಷಣ ಸಾಲ ತೆಗೆದುಕೊಳ್ಳುವವರಿಗೆ ಸರಳೀಕರಣಗೊಳಿಸಿ, ಸಾಲಕ್ಕಾಗಿ ಬ್ಯಾಂಕುಗಳಿಗೆ ಪಾಲಕರನ್ನು ಅಲೆದಾಡಿಸಬೇಡಿ. ಅಲ್ಲದೆ ಸರ್ಕಾರದಿಂದ ರೈತರಿಗೆ ಬರುವ ಸಹಾಯಧನ, ಪರಿಹಾರ ನಿಧಿ, ವಿಮೆ ಹಣವನ್ನು ಸಾಲಕ್ಕೆ ತೆಗೆದುಕೊಳ್ಳಬೇಡಿ ಎಂದು ಸೂಚಿಸಿದರು.ಜಿಪಂ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ ಮಾತನಾಡಿ, ಮೊದಲೆಲ್ಲ ಇಲಾಖೆ ಕಡೆಗಳಿಂದ ಬಜೆಟ್ ಪ್ರಸ್ತಾವನೆ ಹೋಗುತ್ತಿತ್ತು. ಸದ್ಯ ಪಂಚಾಯತ್ ರಾಜ್ ಆ್ಯಕ್ಟ್ ಯೋಜನಾ ಸಮಿತಿ ರಚನೆಯಾಗಿದ್ದು, ಕೆಳಹಂತದ ಸಮಸ್ಯೆಗಳನ್ನು ಪಟ್ಟಿ ಮಾಡಿ ಕ್ರೂಢೀಕರಣ ಮಾಡಿ ಅನುಮೋದನೆ ಪಡೆಯಲು ವಾರ್ಷಿಕ ಯೋಜನೆ ತಯಾರಿಸಬೇಕಾಗಿದೆ ಎಂದರು.
ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಗದಗ ಜಿಪಂ ಯೋಜನಾ ನಿರ್ದೇಶಕ ತಾಪಂ ಆಡಳಿತಾಧಿಕಾರಿ ಎಂ.ವಿ. ಚಳಗೇರಿ, ಶಿರಹಟ್ಟಿ ತಹಸೀಲ್ದಾರ್ ಕೆ. ರಾಘವೇಂದ್ರರಾವ, ಲಕ್ಷ್ಮೇಶ್ವರ ತಾಪಂ ಇಒ ಧರ್ಮರ ಕೃಷ್ಣಪ್ಪ, ಶಿರಹಟ್ಟಿ ತಾಪಂ ಇಒ ಆರ್.ವಿ. ದೊಡ್ಡಮನಿ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಉಭಯ ತಾಲೂಕುಗಳ ಯೋಜನಾ ಅಧಿಕಾರಿ ಶಿವಕುಮಾರ್ ವಾಲಿ, ಎಚ್.ಎ. ಕೊಂಡಿಕೊಪ್ಪ, ತಾಲೂಕು ಆರೋಗ್ಯ ಅಧಿಕಾರಿ ಡಾ. ಸುಭಾಷ್ ದಾಯಗೊಂಡ ಇತರರು ಇದ್ದರು.