ಗದಗ ಎಪಿಎಂಸಿ ಯಾರ್ಡ್ ಸ್ವಾಮಿ ವಿವೇಕಾನಂದ ಸಭಾಭವನ ಹಾಗೂ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಆ. 14ರಿಂದ 18ರ ವರೆಗೆ ಜರುಗಲಿರುವ ಗದಗ ಉತ್ಸವ- 2026 ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಲಾಯಿತು.
ಗದಗ: ಗದಗ ಉತ್ಸವ ಕೇವಲ ವಸ್ತು ಪ್ರದರ್ಶನವಲ್ಲ, ಇದು ಗದುಗಿನ, ರಾಜ್ಯ ಮತ್ತು ಅಂತಾರಾಜ್ಯದ ಉತ್ಪನ್ನ, ಉದ್ಯಮ ಸಾಮರ್ಥ್ಯವನ್ನು ಜಗತ್ತಿಗೆ ತೋರುವ, ಮಾರುಕಟ್ಟೆ ಒದಗಿಸುವ ಕನ್ನಡಿಯಾಗಿದೆ ಎಂದು ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಜಿ.ಕೆ. ಆದಪ್ಪಗೌಡ್ರ ಹೇಳಿದರು.
ಶುಕ್ರವಾರ ಆ. 14ರಿಂದ 18ರ ವರೆಗೆ ಗದಗ ಎಪಿಎಂಸಿ ಯಾರ್ಡ್ ಸ್ವಾಮಿ ವಿವೇಕಾನಂದ ಸಭಾಭವನ ಹಾಗೂ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಗ್ರಾಮೀಣ ಮತ್ತು ಸಣ್ಣ ಉದ್ಯಮ ವಿಭಾಗ ಹಾಗೂ ಜಿಪಂ ಆಶ್ರಯದಲ್ಲಿ ಜರುಗಲಿರುವ ಗದಗ ಉತ್ಸವ- 2026 ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದರು.
ಕೃಷಿ ಮತ್ತು ಕೃಷಿ ಉತ್ಪನ್ನಗಳ ದೊಡ್ಡ ಮಾರುಕಟ್ಟೆಯಾಗಿರುವ ಗದಗ ಜಿಲ್ಲೆ ಈಗ ವೇಗವಾಗಿ ಉದ್ಯಮೀಕರಣದತ್ತ ಸಾಗುತ್ತಿದೆ. ಜಿಲ್ಲೆ ಪ್ರಮುಖ ವ್ಯಾಪಾರ ಕೇಂದ್ರವಾಗಿ ಹೊರ ಹೊಮ್ಮುತ್ತಿದ್ದು, ಉದ್ಯೋಗ ಸೃಷ್ಟಿ ಕೇಂದ್ರವಾಗುವ ಎಲ್ಲ ಲಕ್ಷಣಗಳನ್ನು ಹೊಂದಿದೆ. ಗದಗ ಜಿಲ್ಲೆಯಲ್ಲಿ ಉಗ್ರಾಣ, ಶೀತಲ ಸರಕು ಸಂಗ್ರಹಣಾ ಘಟಕ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ರಫ್ತು ಘಟಕಗಳಿಗೆ ಪೂರಕ ವಾತಾವರಣವಿದೆ. ಇದರಿಂದ ತಲಾ ಆದಾಯ ಹಾಗೂ ಉದ್ಯೋಗ ಸೃಷ್ಟಿ ಹೆಚ್ಚಲಿದೆ. ಯುವ ಪೀಳಿಗೆ ಉದ್ಯೋಗ ಅರಸಿ ಹೋಗುವವರಾಗದೆ, ಉದ್ಯೋಗ ನೀಡುವ ಉದ್ಯಮಿಗಳಾಗಬೇಕು. ಸಣ್ಣ, ಅತಿ ಸಣ್ಣ ಹಾಗೂ ಗುಡಿ ಕೈಗಾರಿಕೆಗಳಿಗೆ ಜಿಲ್ಲೆಯಲ್ಲಿ ಅಪಾರ ಅವಕಾಶವಿದೆ ಎಂದರು.
ಈ ವೇಳೆ ತೋಂಟದ ಸಿದ್ದರಾಮ ಶ್ರೀಗಳು ಸೇರಿದಂತೆ ಗಣ್ಯರು ಹಾಗೂ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಪದಾಧಿಕಾರಿಗಳು ಸೇರಿದಂತೆ ಪ್ರಮುಖರು ಇದ್ದರು.
ಕೈಗಾರಿಕಾ ವಸ್ತು ಪ್ರದರ್ಶನ ಮೇಳಕ್ಕೆ ಸಚಿವರ ಭೇಟಿ
ಗದಗ ನಗರದ ಎಪಿಎಂಸಿ ಯಾರ್ಡ್‌ನ ಸ್ವಾಮಿ ವಿವೇಕಾನಂದ ಸಭಾಭವನ ಹಾಗೂ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಗ್ರಾಮೀಣ ಮತ್ತು ಸಣ್ಣ ಉದ್ಯಮ ವಿಭಾಗ ಹಾಗೂ ಜಿಪಂ ಆಶ್ರಯದಲ್ಲಿ ನಡೆಯುತ್ತಿರುವ ಗದಗ ಉತ್ಸವ-2026 ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಶನಿವಾರ ಉನ್ನತ ಶಿಕ್ಷಣ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಭೇಟಿ ನೀಡಿದರು.ಮೇಳದ ಮಳಿಗೆಗಳನ್ನು ವೀಕ್ಷಿಸಿದ ಸಚಿವರು, ವಾಣಿಜ್ಯೋದ್ಯಮ ಸಂಸ್ಥೆ ಅತ್ಯಂತ ವ್ಯವಸ್ಥಿತವಾಗಿ ಏರ್ಪಡಿಸಿರುವ ಗದಗ ಉತ್ಸವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಉತ್ಪಾದಕರಿಗೆ ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸಲು ಹಾಗೂ ಮಾರಾಟ ಮಾಡಲು ಇದೊಂದು ಉತ್ತಮ ವೇದಿಕೆ ಎಂದರು.ಜಿಲ್ಲಾ ವಾಣಿಜ್ಯೊದ್ಯಮ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಗುಡಿಮನಿ, ಗೌರವ ಕಾರ್ಯದರ್ಶಿ ಚನ್ನವೀರಪ್ಪ ಹುಣಶೀಕಟ್ಟಿ, ಉತ್ಸವ ಸಮಿತಿಯ ಚೇರ್‌ಮನ್ ಮಧುಸೂದನ ಪುಣೇಕರ ಹಾಗೂ ಪದಾಧಿಕಾರಿಗಳಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.