ಬೆಂಗಳೂರು : ರಾಜ್ಯ ಸರ್ಕಾರದ ಅಧಿಕಾರಿ ಅಥವಾ ನೌಕರರು ಮುಂಬಡ್ತಿ ಹೊಂದಲು ಅಗತ್ಯ ವೃತ್ತಿ ಕೌಶಲ್ಯ ತರಬೇತಿ ಕಡ್ಡಾಯಗೊಳಿಸಲು ಹಾಗೂ ದೌರ್ಜನ್ಯಕ್ಕೊಳಗಾಗಿ ಮೃತಪಟ್ಟ ಎಸ್ಸಿ/ಎಸ್ಟಿ ವರ್ಗದ ವ್ಯಕ್ತಿಗಳ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡಲು ಸಚಿವ ಸಂಪುಟ ಸಭೆ ನಿರ್ಧಾರ ಮಾಡಿದೆ.
ರಾಜ್ಯದಲ್ಲಿ ದೌರ್ಜನ್ಯಕ್ಕೆ ಒಳಗಾಗಿ ಮೃತಪಟ್ಟ ಎಸ್ಸಿ/ಎಸ್ಟಿ ವರ್ಗದ ವ್ಯಕ್ತಿಗಳ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ಗ್ರೂಪ್ ಸಿ ಅಥವಾ ಗ್ರೂಪ್ ಡಿ ವೃಂದದ ಹುದ್ದೆಗಳಿಗೆ ನೇಮಕ ಮಾಡಲು ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ದೌರ್ಜನ್ಯಕ್ಕೊಳಗಾದ 87 ಪ್ರಕರಣಗಳನ್ನು ಅನುಕಂಪದ ಆಧಾರದ ಮೇಲೆ ವಿಶೇಷ ಪ್ರಕರಣಗಳೆಂದು ಒಂದು ಬಾರಿಗೆ ಮಾತ್ರ ಪರಿಗಣಿಸಲು ತೀರ್ಮಾನಿಸಲಾಗಿತ್ತು. ಆದರೆ ಇಂತಹ ಪ್ರಕರಣಗಳಿಗೆ ನ್ಯಾಯ ಒದಗಿಸಲು ಕರ್ನಾಟಕ ನಾಗರಿಕ ಸೇವಾ (ದೌರ್ಜನ್ಯದಿಂದ ಮೃತಪಟ್ಟ ಎಸ್ಸಿ/ಎಸ್ಟಿ ವರ್ಗಕ್ಕೆ ಸೇರಿದ ವ್ಯಕ್ತಿಗಳ ಕುಟುಂಬದ ಸದಸ್ಯರಿಗೆ ಅನುಕಂಪ ಆಧಾರಿತ ನೇಮಕಾತಿ ವಿಶೇಷ ತಿದ್ದುಪಡಿ ನಿಯಮ-2022ರ ನಿಯಮ 4(1)ಕ್ಕೆ ತಿದ್ದುಪಡಿ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ನಿರ್ದೇಶನ ನೀಡಲು ಸಂಪುಟ ನಿರ್ಧರಿಸಿದೆ ಎಂದು ಹೇಳಿದರು.
ಮುಂಬಡ್ತಿಗೆ ತರಬೇತಿ ಕಡ್ಡಾಯ:
ನೌಕರರು ಹಾಗೂ ಅಧಿಕಾರಿಗಳು ಮುಂಬಡ್ತಿ ಹೊಂದಲು ಹುದ್ದೆಗೆ ಅಗತ್ಯವಾದ ತರಬೇತಿ ಪಡೆಯುವುದನ್ನು ಕಡ್ಡಾಯಗೊಳಿಸಿ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ. ವಿವಿಧ ಇಲಾಖೆಗಳ ಉನ್ನತ ಹುದ್ದೆಗಳಿಗೆ ಕಂಪ್ಯೂಟರ್, ತಂತ್ರಾಂಶ, ಸಾಫ್ಟ್ ಸ್ಕಿಲ್ಸ್ ಸೇರಿ ಹಲವು ತರಬೇತಿ ಅಗತ್ಯವಿರುತ್ತದೆ. ಈ ತರಬೇತಿ ಪಡೆಯದಿದ್ದರೆ ಮುಂಬಡ್ತಿಗೆ ಅವಕಾಶವಿಲ್ಲ ಎಂದು ಸಂಪುಟ ತೀರ್ಮಾನಿಸಿದೆ.
ಮಾರುಕಟ್ಟೆ ತ್ಯಾಜ್ಯದಿಂದ ಬಯೋ ಸಿಎನ್‌ಜಿ:
ದಾಸನಪುರ, ಕೋಲಾರ, ಮೈಸೂರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ 74.88 ಕೋಟಿ ರು. ವೆಚ್ಚದಲ್ಲಿ 50 ಟಿಪಿಡಿ ಸಾಮರ್ಥ್ಯದ ತಲಾ ಒಂದು ಬಯೋ ಸಿಎನ್‌ಜಿ ಘಟಕ ಸ್ಥಾಪಿಸಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ.
ಮಾರುಕಟ್ಟೆ ಪ್ರಾಂಗಣದಲ್ಲಿ ಸಂಗ್ರಹವಾಗುವ ತರಕಾರಿ ಅಥವಾ ಹಸಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಈ ತ್ಯಾಜ್ಯದಿಂದ ಬಯೋ ಸಿ.ಎನ್.ಜಿ ಉತ್ಪಾದಿಸಲಾಗುವುದು ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ವಿಜಯಪುರ ಜಿಲ್ಲೆಯಲ್ಲಿ ವಿಜಯಪುರ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳ 618.75 ಕೋಟಿ ರು. ಪರಿಷ್ಕೃತ ಅಂದಾಜಿಗೆ ಅನುಮೋದನೆ ನೀಡಲಾಗಿದೆ. ಗದಗ ಜಿಲ್ಲೆಯ ರೋಣ ತಾಲೂಕಿನ 9 ಸಣ್ಣ ನೀರಾವರಿ ಜಿಪಂ ಕೆರೆಗಳಿಗೆ 43.50 ಕೋಟಿ ರು. ವೆಚ್ಚದಲ್ಲಿ ಮಲಪ್ರಭಾ ಬಲದಂಡೆ ಕಾಲುವೆಯಿಂದ ನೀರು ಎತ್ತಿ ತುಂಬಿಸುವ ಯೋಜನೆ ಜಾರಿಗೆ ಆಡಳಿತಾತ್ಮಕ ಅನುಮೋದನೆ, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ವ್ಯಾಪ್ತಿಯಲ್ಲಿನ ಕರ್ನಾಳ್ ಏತನೀರಾವರಿ ಯೋಜನೆಯನ್ನು 50.75 ಕೋಟಿ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಪ್ರಮುಖ ಜೈಲುಗಳಲ್ಲಿ ಕೈದಿಗಳ
ಮೊಬೈಲ್ ಬಳಕೆಗೆ ಕಡಿವಾಣ
ರಾಜ್ಯದ ಕೇಂದ್ರ ಕಾರಾಗೃಹಗಳಾದ ಬಳ್ಳಾರಿ, ವಿಜಯಪುರ, ಧಾರವಾಡ, ಶಿವಮೊಗ್ಗ, ಬೆಳಗಾವಿ, ಮೈಸೂರು, ಕಲಬುರಗಿ ಹಾಗೂ ತುಮಕೂರು ಜಿಲ್ಲಾ ಕಾರಾಗೃಹಗಳಲ್ಲಿ ಕೈದಿಗಳ ಮೊಬೈಲ್ ಬಳಕೆ ಹಾಗೂ ವಿಚ್ಛಿದ್ರಕಾರಿ ಚಟುವಟಿಕೆಗೆ ಕಡಿವಾಣ ಹಾಕಲು 16.75 ಕೋಟಿ ರು. ವೆಚ್ಚದಲ್ಲಿ ಕಾಲ್ ಬ್ಲಾಕಿಂಗ್ ಸಿಸ್ಟಂ ಟವರ್‌ಗಳ ಅಳವಡಿಕೆಗೆ ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಸಭೆ ನಂತರ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, ಮೊಬೈಲ್ ಟವರ್ ಅಳವಡಿಸಲು ಮತ್ತು 5 ವರ್ಷಗಳ ನಿರ್ವಹಣೆ ಮಾಡುವ ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
ಈಗಾಗಲೇ ಕಾರಾಗೃಹಗಳ ಬಳಿ ನೆಟ್ವರ್ಕ್ ಸಮಸ್ಯೆ ಕುರಿತು ಸ್ಥಳೀಯರು ದೂರು ನೀಡುತ್ತಿರುವ ಬಗ್ಗೆ ಅಧಿಕಾರಿಗಳು ಪರಿಶೀಲಿಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
9,337 ಶಾಲೆಗಳಿಗೆ
ಬಿಸಿಯೂಟಕ್ಕೆ ಪಾತ್ರೆ
ರಾಜ್ಯದ 9337 ಶಾಲೆಗಳಲ್ಲಿ ಬಿಸಿಯೂಟ ಸಿದ್ಧಪಡಿಸಲು ಕ್ಷೀರ ಭಾಗ್ಯ ಯೋಜನೆಯಡಿ ಹೊಸ ಪಾತ್ರೆ-ಪರಿಕರಗಳನ್ನು 21.55 ಕೋಟಿ ರು. ಅಂದಾಜು ಮೊತ್ತ ಭರಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಹೀಗಾಗಿ ಇಷ್ಟೂ ಶಾಲೆಗಳ ಬಿಸಿಯೂಟಕ್ಕೆ ಹೊಸ ಪಾತ್ರೆ ಸಿಗಲಿದೆ ಎಂದು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.