ಇಸ್ರೋ ನೆರವು ಪಡೆದ ಬೆಳೆ ಸಮೀಕ್ಷೆಯಲ್ಲಿ ಕಳ್ಳಾಟಕ್ಕೆ ಬ್ರೇಕ್‌

Published : Jul 06, 2026, 12:13 PM IST
Crop

ಸಾರಾಂಶ

ಫಸಲ್ ಬಿಮಾ ಯೋಜನೆಯಲ್ಲಿ ನಡೆಯುತ್ತಿದ್ದ ಅಕ್ರಮ ತಡೆಗಟ್ಟುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಳೆವಿಮೆಗೆ ಹೊಸ ಅಗತ್ಯ ಮಾರ್ಗಸೂಚಿಗಳನ್ನು ಒಳಗೊಂಡಿರುವ ಆದೇಶವನ್ನು ಜೂ.30ರಂದು ಹೊರಡಿಸಿದ್ದು, ಇದರಿಂದಾಗಿ ಬೆಳೆ ಸಮೀಕ್ಷೆ ಪ್ರಕ್ರಿಯೆ ಮತ್ತಷ್ಟು ಪಾರದರ್ಶಕ, ತಾಂತ್ರಿಕವಾಗಿ ಸಶಕ್ತವಾಗಲಿದೆ.

ಶಿವಕುಮಾರ ಕುಷ್ಟಗಿ

  ಗದಗ :  ಫಸಲ್ ಬಿಮಾ ಯೋಜನೆಯಲ್ಲಿ ನಡೆಯುತ್ತಿದ್ದ ಅಕ್ರಮ ತಡೆಗಟ್ಟುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಳೆವಿಮೆಗೆ ಹೊಸ ಅಗತ್ಯ ಮಾರ್ಗಸೂಚಿಗಳನ್ನು ಒಳಗೊಂಡಿರುವ ಆದೇಶವನ್ನು ಜೂ.30ರಂದು ಹೊರಡಿಸಿದ್ದು, ಇದರಿಂದಾಗಿ ಬೆಳೆ ಸಮೀಕ್ಷೆ ಪ್ರಕ್ರಿಯೆ ಮತ್ತಷ್ಟು ಪಾರದರ್ಶಕ, ತಾಂತ್ರಿಕವಾಗಿ ಸಶಕ್ತವಾಗಲಿದೆ.

ಬೆಳೆ ಸಮೀಕ್ಷೆಯಲ್ಲಿ ತಪ್ಪು ಮಾಹಿತಿ ದಾಖಲಿಸುವುದು, ಬೆಳೆ ಬೆಳೆಯದ ಜಮೀನಿನಲ್ಲೂ ಬೆಳೆ ತೋರಿಸುವುದು, ಒಂದೇ ಜಮೀನನ್ನು ಹಲವು ಬಾರಿ ದಾಖಲಿಸುವುದು, ಬೆಳೆ ವಿಮೆ ಹಾಗೂ ಪರಿಹಾರ ಪಡೆಯಲು ಸುಳ್ಳು ದಾಖಲೆಗಳನ್ನು ಸೃಷ್ಟಿಸುವುದು ಸೇರಿದಂತೆ ಹಲವು ಅಕ್ರಮಗಳ ಬಗ್ಗೆ ದೂರುಗಳು ಬರುತ್ತಿದ್ದವು. ಇದರಿಂದ ಸರ್ಕಾರದ ಕೋಟ್ಯಂತರ ರುಪಾಯಿ ಸಬ್ಸಿಡಿ, ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ ಹಾಗೂ ಇತರ ಕೃಷಿ ಯೋಜನೆಗಳಲ್ಲಿ ದುರುಪಯೋಗವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರವು ತಂತ್ರಜ್ಞಾನ ಆಧಾರಿತ ಸಮೀಕ್ಷೆಗೆ ಹೆಚ್ಚಿನ ಒತ್ತು ನೀಡಿದೆ.

ನೂತನ ಆದೇಶದಲ್ಲೇನಿದೆ?:

ಮೊಬೈಲ್ ಆಧಾರಿತ ಡಿಜಿಟಲ್ ಬೆಳೆ ಸಮೀಕ್ಷೆ ಮಾಡಬೇಕು, ಪ್ರತಿ ದಾಖಲೆಗೆ ಜಿಯಾಗ್ರಾಫಿಕಲ್ ರೆಫರೆನ್ಸ್‌ ಫೋಟೋ ಕಡ್ಡಾಯ. ಅಲ್ಲದೇ ಸ್ಥಳದಲ್ಲೇ ರೈತರ ಹಾಗೂ ಜಮೀನಿನ ಮಾಹಿತಿಯನ್ನು ಪರಿಶೀಲಿಸಿ ದಾಖಲಿಸುವ ವ್ಯವಸ್ಥೆ ರೂಪಿಸಲಾಗಿದೆ. ಇಸ್ರೋ ಸಹಾಯದಲ್ಲಿ ಕೇವಲ 5 ಮೀಟರ್ ಎತ್ತರದಿಂದ ರೈತರು ಜಮೀನುಗಳಲ್ಲಿ ಬಿತ್ತನೆ ಮಾಡಿದ ಬೆಳೆಗಳ ಫೋಟೋಗಳನ್ನು ತೆಗೆಯಲಾಗುತ್ತದೆ. ಇವುಗಳನ್ನು ಜಿಐಎಸ್ ಮಾಹಿತಿಯೊಂದಿಗೆ ಸಮನ್ವಯ ಮಾಡಿ ಸ್ಥಳದಲ್ಲಿಯೇ ಪರಿಶೀಲನೆ ಮಾಡಲಾಗುತ್ತದೆ. ಇದರಿಂದಾಗಿ ಬೆಳೆ ಬೆಳೆಯದ ಜಮೀನನ್ನು ಬೆಳೆ ಪ್ರದೇಶ ಎಂದು ದಾಖಲಿಸುವ ಅವಕಾಶ ಇರುವುದಿಲ್ಲ. ಜತೆಗೆ ಅಧಿಕಾರಿಗಳ ಜವಾಬ್ದಾರಿ ಹೆಚ್ಚಿಸಿದ್ದು, ತಪ್ಪು ದಾಖಲೆಗಳಿಗೆ ಸಹಿ ಮಾಡಿದಲ್ಲಿ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಸಮೀಕ್ಷೆ ಪೂರ್ಣಗೊಂಡ ಬಳಿಕ ಬಹುಹಂತದ ಪರಿಶೀಲನೆ ಮತ್ತು ದೃಢೀಕರಣ ಕಡ್ಡಾಯಗೊಳಿಸಲಾಗಿದೆ.

ಹಲವು ರೀತಿಯಲ್ಲಿ ಲಾಭ:

ನಕಲಿ ಬೆಳೆ ದಾಖಲೆಗಳನ್ನು ಸೃಷ್ಟಿಸುವುದು ಕಷ್ಟವಾಗುತ್ತದೆ. ಒಂದೇ ಜಮೀನಿಗೆ ಹಲವು ಬಾರಿ ದಾಖಲಾತಿ ಮಾಡುವ ಸಾಧ್ಯತೆ ಕಡಿಮೆ ಆಗುತ್ತದೆ. ಬೆಳೆ ವಿಮೆ ಹಾಗೂ ಪರಿಹಾರಕ್ಕೆ ಸಲ್ಲಿಸುವ ಸುಳ್ಳು ಮಾಹಿತಿಯನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ನೈಜವಾಗಿ ಬೆಳೆ ಬೆಳೆದ ರೈತರಿಗೆ ಮಾತ್ರ ಸರ್ಕಾರಿ ಸೌಲಭ್ಯಗಳು ತಲುಪುವ ಸಾಧ್ಯತೆ ಹೆಚ್ಚುತ್ತದೆ. ಉಪಗ್ರಹ ಮಾಹಿತಿ, ಜಿಯೋ ಟ್ಯಾಗ್ ಹಾಗೂ ಸ್ಥಳ ಪರಿಶೀಲನೆ ಒಂದಕ್ಕೊಂದು ಹೊಂದಾಣಿಕೆ ಆಗದಿದ್ದರೆ ತಕ್ಷಣವೇ ವ್ಯತ್ಯಾಸ ಪತ್ತೆಯಾಗಲಿದೆ.

ಬೇರೆ ಬ್ಯಾಂಕಲ್ಲಿ ಸಾಲ ಪಡೆದಿಲ್ಲ ಎಂದು ಸ್ವಯಂ ಘೋಷಣೆ ಕಡ್ಡಾಯ:

ಫಸಲ್ ಬಿಮಾ ಯೋಜನೆ ಬೆಳೆಸಾಲ ಪಡೆದುಕೊಂಡ ರೈತರು ಬೇರೆ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿಲ್ಲ ಎಂಬುದನ್ನು ಸ್ವಯಂ ಘೋಷಿಸುವುದು ಕಡ್ಡಾಯ. ಆದರೆ ಯಾವ ಹೊಲದ ಮೇಲೆ ಬೆಳೆಸಾಲ ಪಡೆದಿರುತ್ತಾರೆಯೋ ಅದೇ ಬೆಳೆಗೆ ಸಹಜವಾಗಿಯೇ ಸಾಲಕೊಟ್ಟ ಬ್ಯಾಂಕ್‌ನಲ್ಲಿ ಬೆಳೆ ವಿಮೆ ಭರಣ ಮಾಡಲಾಗುತ್ತಿತ್ತು. ಅದೇ ಜಮೀನನ್ನು ರೈತರು ಗ್ರಾಮ ಒನ್ ಅಥವಾ ನೆಟ್ ಸೆಂಟರ್‌ಗಳಲ್ಲಿ ತಮಗೆ ಬೇಕಾದ ಬೆಳೆಗೆ ಇದುವರೆಗೂ ವಿಮೆ ಭರಣ ಮಾಡುತ್ತಿದ್ದರು. ಆದರೆ ಈ ಬಾರಿ ಬೆಳೆಸಾಲ ಪಡೆದುಕೊಂಡಿರುವ ರೈತರು ಕಡ್ಡಾಯವಾಗಿ ನಾನು ಬೇರೆಡೆ ಎಲ್ಲಿಯೂ ಸಾಲ ಪಡೆದುಕೊಂಡಿಲ್ಲ ಎಂದು ಸ್ವಯಂ ಧೃಢೀಕರಣ ಕೊಡಬೇಕಿದೆ. ಬ್ಯಾಂಕ್ ಸಾಲ, ಸ್ವಯಂ ಧೃಢೀಕರಣ ಪತ್ರ ಮತ್ತು ಹೊಲದಲ್ಲಿನ ಬೆಳೆ ಎಲ್ಲವೂ ತಾಳೆ ಆದಾಗ ಮಾತ್ರ ರೈತರಿಗೆ ವಿಮೆ ಪರಿಹಾರ ಸಿಗಲಿದೆ.

ತಪ್ಪು ಮಾಹಿತಿಗೆ ಕಡಿವಾಣ:

ಸರ್ಕಾರದ ನೂತನ ನಿಯಮಗಳ ಅಡಿಯಲ್ಲಿ ನೈಜ ರೈತರಿಗೆ ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ, ಇನ್‌ಪುಟ್ ಸಬ್ಸಿಡಿ, ಕೃಷಿ ಯೋಜನೆಗಳ ಲಾಭ ಹಾಗೂ ಬ್ಯಾಂಕ್ ಸಾಲದ ಪ್ರಕ್ರಿಯೆಯಲ್ಲಿ ನಿಖರ ದಾಖಲೆಗಳು ಲಭ್ಯವಾಗಲಿವೆ. ತಪ್ಪು ಮಾಹಿತಿ ಹಾಗೂ ದಾಖಲೆಗಳನ್ನು ನೀಡುವುದಕ್ಕೆ ಕಡಿವಾಣ ಬೀಳಲಿದೆ. ಪ್ರಾಮಾಣಿಕ ರೈತರು ವಂಚಿತರಾಗುವ ಸಾಧ್ಯತೆಯೂ ಕಡಿಮೆಯಾಗಲಿದೆ.

-ಚೇತನಾ ಪಾಟೀಲ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಗದಗ 

PREV
Stay updated with the latest news from Gadag district (ಗದಗ ಸುದ್ದಿ) — covering local developments, civic issues, politics, culture, heritage, crime, and community stories. Get timely headlines, in-depth reporting and district-level updates from Gadag via Kannada Prabha.
Read more Articles on

Recommended Stories

ವೀರೇಶ್ವರ ಪುಣ್ಯಾಶ್ರಮ ಅತ್ಯಂತ ಪವಿತ್ರ ಪುಣ್ಯಕ್ಷೇತ್ರ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ಡಾ. ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರ 33 ದಿನ ಶಿವಯೋಗ ಸಮಾಧಿ ಅನುಷ್ಠಾನ ಮಂಗಲ