ಸ್ವಾತಂತ್ರ್ಯ ಹೋರಾಟಕ್ಕೆ ಗದಗ ಕೊಡುಗೆ ಅಪಾರ

KannadaprabhaNewsNetwork |  
Published : Aug 16, 2024, 12:51 AM IST
ಸ್ವಾತಂತ್ರ್ಯೋತ್ಸವದ ಅಂಗವಾಗಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಕರ್ಷಕ ಪಥ ಸಂಚಲನ ಜರುಗಿತು. | Kannada Prabha

ಸಾರಾಂಶ

ಸತ್ಯಾಗ್ರಹವು ಸ್ವಾತಂತ್ರ್ಯ ಸಂಗ್ರಾಮ ಮತ್ತು ನಂತರ ಸ್ವಾತಂತ್ರೋತ್ತರ ಭಾರತದಲ್ಲಿ ಪ್ರಬಲ ಅಸ್ತ್ರವಾಗಿ ಪರಿಣಮಿಸಿತ್ತು

ಗದಗ: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಗದಗ ಜಿಲ್ಲೆಯ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಮಹಾತ್ಮಗಾಂಧಿ, ಜವಾಹರಲಾಲ್‌ ನೆಹರು ಸೇರಿದಂತೆ ಅನೇಕ ನಾಯಕರು ಗದಗ ಜಿಲ್ಲೆಗೆ ಭೇಟಿ ನೀಡಿದ್ದೇ ಉತ್ತಮ ಸಾಕ್ಷಿಯಾಗಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅವರು ಗುರುವಾರ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಜರುಗಿದ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಶತಮಾನಗಳ ದಾಸ್ಯತ್ವ ಕಳಚಿ ಸ್ವತಂತ್ರವಾದ ಭಾರತ, 77 ವರ್ಷಗಳನ್ನು ಪೂರ್ಣಗೊಳಿಸಿ 78 ರಲ್ಲಿ ಪಾದಾರ್ಪಣೆ ಮಾಡುತ್ತಿದೆ. ಮಹಾತ್ಮ ಗಾಂಧೀಜಿಯವರು ತೋರಿದ, ಸತ್ಯ,ಅಹಿಂಸೆ ಹೋರಾಟದೊಂದಿಗೆ ಸಾವಿರಾರು ಸಂಖ್ಯೆಯ ದೇಶ ಭಕ್ತರು ಬ್ರಿಟೀಷ್ ಆಡಳಿತದ ಗುಂಡಿಗೆ ಎದೆ ಒಡ್ಡಿ, ಲಾಠಿ ಏಟು ತಿಂದು ಜೈಲಿನಲ್ಲಿ ನೊಂದು ಬ್ರಿಟಿಷರು ನೀಡಿದ ನೋವಿನಲ್ಲಿ ಬೆಂದು,ಅವರ್ಣನೀಯ ಕಷ್ಟ ಅನುಭವಿಸಿ, ದೇಶವನ್ನು ಗುಲಾಮಗಿರಿಯ ಸಂಕೋಲೆಯಿಂದ ಮುಕ್ತಗೊಳಿಸಿದರು. ಸತ್ಯಾಗ್ರಹವು ಸ್ವಾತಂತ್ರ್ಯ ಸಂಗ್ರಾಮ ಮತ್ತು ನಂತರ ಸ್ವಾತಂತ್ರೋತ್ತರ ಭಾರತದಲ್ಲಿ ಪ್ರಬಲ ಅಸ್ತ್ರವಾಗಿ ಪರಿಣಮಿಸಿತ್ತು. ಈಗ ಅದನ್ನೇ ಕಿತ್ತುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಲೋಕಮಾನ್ಯ ಬಾಲಗಂಗಾಧರ ತಿಲಕ, ಪಂಡಿತ ಜವಾಹರಲಾಲ ನೆಹರು,ಮಹಾತ್ಮ ಗಾಂಧಿಯವರನ್ನು ಜಿಲ್ಲೆಗೆ ಬರಮಾಡಿಕೊಂಡ ಗದಗ ರಚನಾತ್ಮಕ ಕೆಲಸಗಳ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಬಲ ತುಂಬಿತ್ತು. ಸ್ವದೇಶಿ ಆಂದೋಲನವನ್ನು ಉಸಿರಾಗಿಸಿಕೊಂಡ ನಮ್ಮ ಹಿರಿಯರು ಹತ್ತಾರು ಶೈಕ್ಷಣಿಕ ಸಂಸ್ಥೆ ಕಟ್ಟಿದರು. ದೇಶಿ ಕ್ರೀಡೆಗೆ ಪ್ರೋತ್ಸಾಹ ನೀಡಿದರು. ನರಗುಂದದ ಬಾಬಾ ಸಾಹೇಬ, ಮುಂಡರಗಿಯ ಭೀಮರಾವ್‌, ಡಂಬಳದ ಕೆಂಚನಗೌಡ್ರು, ಅನಂತರಾವ್‌ ಜಾಲಿಹಾಳ, ಡಾ.ವಾಸುದೇವರಾವ ಉಮಚಗಿ, ಬೆಟಗೇರಿಯ ತ್ರಿಮಲ್ಲೆ, ಮಳೇಕರ, ಜಯರಾಮಾಚಾರ್ಯ ಮಳಗಿ, ಡಂಬಳದ ಶ್ರೀನಿವಾಸರಾವ್ ಕಳ್ಳಿ, ತಿಪ್ಪಣ್ಣ ಶಾಸ್ತ್ರಿ, ಅಂದಾನಪ್ಪ ದೊಡ್ಡಮೇಟಿ, ಕೌತಾಳ ವೀರಪ್ಪ, ಕೆ.ಎಚ್. ಪಾಟೀಲರು ಸೇರಿ ಅಸಂಖ್ಯ ಸ್ವಾತಂತ್ರ್ಯ ಸೇನಾನಿಗಳು ದೇಶಕ್ಕಾಗಿ ಸರ್ವತ್ಯಾಗ ಮಾಡಿದ್ದು ನೆನೆದರೆ ಹೃದಯದಲ್ಲಿ ಹೆಮ್ಮೆಯ ಪ್ರವಾಹ ಹರಿಯುವುದು. ದೇಶಭಕ್ತ ಮೈಲಾರ ಮಹಾದೇವಪ್ಪ ನೇತೃತ್ವದಲ್ಲಿ ಕೋಗನೂರು, ಶಿಗ್ಲಿ, ಹೆಬ್ಬಾಳ, ನಾಗರಮಡುವು, ವರವಿ, ಹೊಸೂರ, ಅಂಕಲಿ, ಮೊದಲಾದ ಗ್ರಾಮಗಳ ಸ್ವಾತಂತ್ರ್ಯ ಹೋರಾಟಗಾರರು ಚಳವಳಿಯಲ್ಲಿ ಧುಮುಕಿ ಅಪಾರ ತ್ಯಾಗ ಮಾಡಿದ್ದು ಸ್ಮರಣೀಯ ಎಂದರು.

ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಜಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಪಂ ಸಿಇಓ ಭರತ್ ಎಸ್, ಎಸ್ಪಿ ಬಿ.ಎಸ್. ನೇಮಗೌಡರ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರು, ಸಾರ್ವಜನಿಕರು, ಅಪಾರ ಸಂಖ್ಯೆಯಲ್ಲಿ ಶಾಲಾ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌