ರೋಣ: ಜಿಪಂ ಸಿಇಒ ಭರತ್ ಎಸ್. ಅವರು ತಾಲೂಕಿನ ವಿವಿಧ ಗ್ರಾಪಂಗೆ ಭೇಟಿ ನೀಡಿ ಅನುಷ್ಠಾನಗೊಂಡ ವಿವಿಧ ಕಾಮಗಾರಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಕಾಮಗಾರಿ ಕಡತಗಳು ಹಾಗೂ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಅಳತೆಯ ಪ್ರಮಾಣ ಪರಿಶೀಲನೆ ನಡೆಸಿದರು.
ಯಾವಗಲ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಿಇಒ ಅವರು, ಆರೋಗ್ಯ ಕೇಂದ್ರದಲ್ಲಿ ರಜಿಸ್ಟರ್ ಚೆಕ್ ಮಾಡಿ, ಮಾಹಿತಿ ಪಡೆದರು. ಸೆಪ್ಟೆಂಬರ್ ತಿಂಗಳಲ್ಲಿ ಎಷ್ಟು ಜನರ ಬ್ಲಡ್ ಚೆಕ್ ಮಾಡಿಸಲಾಗಿದೆ? ಅದರಲ್ಲಿ ಹಿಮೋಗ್ಲೋಬಿನ್ ಕೊರತೆ ಎಷ್ಟು ಮಕ್ಕಳಿಗೆ ಇದೆ? ಎಂಬುದರ ಕುರಿತು ಮಾಹಿತಿ ಪಡೆದರು. ಆಸ್ಪತ್ರೆ ಶುಚಿಯಾಗಿಡಲು ಸೂಚನೆ ನೀಡಿದ ಅವರು, ಸರಿಯಾಗಿ ಕರ್ತವ್ಯ ನಿರ್ವಹಿಸುವಂತೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.ಬಳಿಕ ಗ್ರಾಮದ ಗ್ರಂಥಾಲಯಕ್ಕೆ ಭೇಟಿ ನೀಡಿ ಬೆಳವಣಕಿ ಹಾಗೂ ಯಾವಗಲ್ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣದ ಅಳತೆ ಹಾಗೂ ಗ್ರಾಮದಲ್ಲಿ ನಿರ್ಮಾಣವಾದ ಉದ್ಯಾನ, ಬದು ನಿರ್ವಹಣೆ ಕಾಮಗಾರಿ ಪರಿಶೀಲನೆ ನಡೆಸಿದರು.
ಮಕ್ಕಳ ಜತೆಗೆ ಸಂವಾದ: ಮಲ್ಲಾಪುರ ಗ್ರಾಮದ ವಿವಿಧ ಕಾಮಗಾರಿಗಳ ವೀಕ್ಷಣೆ ಬಳಿಕ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿ ಕುಳಿತು ಮಕ್ಕಳ ಸಂಖ್ಯೆ ಬಗ್ಗೆ ಮಾಹಿತಿ ಪಡೆದರು. ಮಕ್ಕಳ ಸಂಖ್ಯೆ ಕಡಿಮೆ ಆಗಲು ಕಾರಣವನ್ನು ಮಕ್ಕಳಿಂದ ಪಡೆದರು. ಮಕ್ಕಳಿಗೆ ತಮ್ಮ ಪರಿಚಯ ಮಾಡಿಕೊಂಡು ಪ್ರತ್ಯೇಕವಾಗಿ 15 ನಿಮಿಷಗಳ ಕಾಲ ಶಾಲಾ ಕೊಠಡಿಯಲ್ಲಿ ಮಕ್ಕಳೊಂದಿಗೆ ಸಂವಾದ ಮಾಡಿದರು.