ಗಡಾಯಿಕಲ್ಲು ಸಂದರ್ಶನ ನಿರ್ಬಂಧ ತೆರವು: ಆನ್‌ಲೈನ್ ನೋಂದಣಿ ಕಡ್ಡಾಯ

KannadaprabhaNewsNetwork | Published : Sep 25, 2024 12:57 AM

ಸಾರಾಂಶ

ಪ್ರಸಿದ್ಧ ಪ್ರವಾಸೀ ತಾಣ ನರಸಿಂಹ ಗಢ (ಗಡಾಯಿ ಕಲ್ಲು) ಪ್ರವೇಶ ನಿರ್ಬಂಧ ರದ್ದಾಗಿದೆ.ಗಢಾಯಿಕಲ್ಲು ಪ್ರದೇಶ ಸಂದರ್ಶನಕ್ಕೆ ವಯಸ್ಕರಿಗೆ ಟಿಕೆಟ್ ದರ 150 ರು., ಮಕ್ಕಳಿಗೆ 25 ರು. ವಿಧಿಸಲಾಗಿದೆ. ಇಲಾಖೆ ನಿಗದಿಪಡಿಸಿದ ವೆಬ್‌ಸೈಟ್ (Kuduremukhana- tionalpark.in) ನಲ್ಲಿ ನೋಂದಾಯಿಸಿದವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಇಲ್ಲಿನ ಪ್ರಸಿದ್ಧ ಪ್ರವಾಸೀ ತಾಣ ನರಸಿಂಹ ಗಢ (ಗಡಾಯಿ ಕಲ್ಲು) ಪ್ರವೇಶ ನಿರ್ಬಂಧ ರದ್ದಾಗಿದೆ.

ಗಢಾಯಿಕಲ್ಲು ಪ್ರದೇಶ ಸಂದರ್ಶನಕ್ಕೆ ವಯಸ್ಕರಿಗೆ ಟಿಕೆಟ್ ದರ 150 ರು., ಮಕ್ಕಳಿಗೆ 25 ರು. ವಿಧಿಸಲಾಗಿದೆ.

ಗಡಾಯಿಕಲ್ಲಿಗೆ ಗೆ ಬೆಳಗ್ಗೆ 7ರಿಂದ ಮಧ್ಯಾಹ್ನ 2 ಗಂಟೆವರೆಗೆ ಏರಲು ಅವಕಾಶ ನೀಡಲಾ ಗಿದೆ. ರಾತ್ರಿ ವಾಸ್ತವ್ಯಕ್ಕೆ ಅವಕಾಶವಿಲ್ಲ. ಇಲಾಖೆ ನಿಗದಿಪಡಿಸಿದ ವೆಬ್‌ಸೈಟ್ (Kuduremukhana- tionalpark.in) ನಲ್ಲಿ ನೋಂದಾಯಿಸಿದವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಪ್ರಸ್ತುತ ನೀಡಿರುವ ಅವಕಾಶ ಡಿಸೆಂಬರ್ ತನಕ ಮುಂದುವರಿಯುವ ಸಾಧ್ಯತೆ ಇದೆ. ಡಿಸೆಂಬರ್ ಬಳಿಕ ಕಾಡಿಚ್ಚಿನ ಮುಂಜಾಗ್ರತೆಗಾಗಿ ಮತ್ತೆ ನಿಷೇಧ ಮುಂದುವರಿಯುವ ಸಾಧ್ಯತೆ ಇದೆ.

ಪರಿಸರದ ಅರಣ್ಯದಲ್ಲಿರುವ ಪ್ರಾಣಿಗಳಿಗೆ ತೊಂದರೆ ಉಂಟು ಮಾಡಬಾರದು, ಮತ್ತು ಪರಿಸರ ಸ್ವಚ್ಛತೆ ಕಾಪಾಡಲು ಚಾರಣಿಗರು ಆದ್ಯತೆ ನೀಡಬೇಕು ಎಂದು ಸೂಚಿಸಲಾಗಿದೆ.

ಅನಪೇಕ್ಷಿತ ಚಟುವಟಿಕೆ ನಡೆಸುವುದು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಗಢವು ಸಂಪೂರ್ಣ ಪ್ಲಾಸ್ಟಿಕ್ ನಿಷೇಧಿತ ಪ್ರದೇಶವಾಗಿರುತ್ತದೆ.

ಸಮುದ್ರ ಮಟ್ಟದಿಂದ 1,788 ಅಡಿ ಎತ್ತರದಲ್ಲಿರುವ ಈ ಕೋಟೆಯ ತುದಿ ತಲುಪಬೇಕಾದರೆ ಸುಮಾರು 2,800ಕ್ಕೂ ಅಧಿಕ ಕಡಿದಾದ ಮೆಟ್ಟಿಲುಗಳನ್ನು ಏರಬೇಕು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಗಡಾಯಿಕಲ್ಲನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸಿದೆ. ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಡ ಗ್ರಾಪಂ ವ್ಯಾಪ್ತಿಯಲ್ಲಿರುವ ಗಡಾಯಿಕಲ್ಲು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಸುಪರ್ದಿಯಲ್ಲಿದೆ.

ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕು ಕೇಂದ್ರದಿಂದ 1 ಕಿ.ಮೀ. ದೂರದ ಲಾಯಿಲ ಎಂಬಲ್ಲಿಂದ ಕಿಲ್ಲೂರು ಮಾರ್ಗದಲ್ಲಿ 5 ಕಿ.ಮೀ. ಸಾಗಿದರೆ ಮಂಜೊಟ್ಟಿ ಎನ್ನುವ ಊರು ಸಿಗುತ್ತದೆ. ಅಲ್ಲಿಂದ 3 ಕಿ.ಮೀ. ಕ್ರಮಿಸಿದರೆ ಗಡಾಯಿಕಲ್ಲಿನ ಬುಡಕ್ಕೆ ತಲುಪಬಹುದು. ಮಂಜೊಟ್ಟಿತನಕ ಬಸ್ ವ್ಯವಸ್ಥೆ ಇದೆ. ಸ್ವಂತ ವಾಹನಗಳಿಗೆ ಕೋಟೆಯ ಸಮೀಪ ಪಾರ್ಕಿಂಗ್ ವ್ಯವಸ್ಥೆ ಇದೆ. ಗೂಗಲ್ ಮ್ಯಾಪ್‌ನಲ್ಲಿದಾರಿಯ ವಿವರ ಲಭ್ಯವಿದೆ.

....................

ಮಳೆಗಾಲದಲ್ಲಿ ಇಲ್ಲಿನ ಜಾರುವ ಬಂಡೆ, ಮೆಟ್ಟಿಲು, ಕಲ್ಲುಗಳಿಂದ ಅಪಾಯ ಉಂಟಾಗಬಾರದು ಎಂಬ ಉದ್ದೇಶದಿಂದ ಸಂಬಂಧಪಟ್ಟ ಇಲಾಖೆ ಪ್ರವೇಶ ನಿಷೇಧಿಸಿತ್ತು. ಇದೀಗ ಮಳೆ ಕಡಿಮೆಯಾಗಿ ಬಂಡೆ ಒಣಗಿರುವ ಕಾರಣ ಅವಕಾಶ ಕಲ್ಪಿಸಲಾಗಿದೆ.

-ಶರ್ಮಿಷ್ಟ ಆರ್‌ಎಫ್‌ಒ, ವನ್ಯಜೀವಿ ವಿಭಾಗ, ಬೆಳ್ತಂಗಡಿ

Share this article