ಬೈಪಾಸ್ ರಸ್ತೆಗೆ ಗಡ್ಕರಿಯಿಂದ ಶೀಘ್ರ ಭೂಮಿ ಪೂಜೆ

KannadaprabhaNewsNetwork |  
Published : Aug 31, 2025, 01:08 AM IST
ಕ್ಯಾಪ್ಶನ್ | Kannada Prabha

ಸಾರಾಂಶ

ಮುಂದಿನ ಒಂದೂವರೆ ತಿಂಗಳಲ್ಲಿ ಜಿಲ್ಲೆಗೆ ಮಂಜೂರಾಗಿರುವ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭೂಮಿ ಪೂಜೆ ನೆರವೇರಿಸುವರು ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರು ಮುಂದಿನ ಒಂದೂವರೆ ತಿಂಗಳಲ್ಲಿ ಜಿಲ್ಲೆಗೆ ಮಂಜೂರಾಗಿರುವ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭೂಮಿ ಪೂಜೆ ನೆರವೇರಿಸುವರು ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು. ಜಿಲ್ಲೆಯ ಗುಬ್ಬಿ ಬೈಪಾಸ್ ಚೆನ್ನಿಶೆಟ್ಟಿಹಳ್ಳಿ ಬಳಿ ಅಂಡರ್ ಪಾಸ್ ಮೇಲೆ ವಾಹನ ಸಂಚಾರಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಿಂದ ತುಮಕೂರಿಗೆ 2 ಹಂತದಲ್ಲಿ ಬೈಪಾಸ್ ರಸ್ತೆಗಳು 2650 ಕೋಟಿ ರು. ವೆಚ್ಚದಲ್ಲಿ ಮಂಜೂರಾಗಿವೆ. ಈ ಎರಡು ಬೈಪಾಸ್ ರಸ್ತೆಗಳಿಗೆ ಹಂತ ಹಂತವಾಗಿ ಡಿಪಿಆರ್ ಕೂಡ ಮಾಡಲಾಗುತ್ತದೆ ಎಂದರು.ರಾಷ್ಟ್ರೀಯ ಹೆದ್ದಾರಿ-206 ರಲ್ಲಿ ಕಾಮಗಾರಿಗಳಿಗೆ ಅಡಚಣೆ ಉಂಟಾಗಿದ್ದರಿಂದ ಸಾರ್ವಜನಿಕರಿಗೆ ಹಾಗೂ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿತ್ತು. ಈಗ ಇದ್ದ ಅಡಚಣೆ ನ್ಯಾಯಾಲಯದಲ್ಲಿ ಮುಗಿದಿದ್ದು ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗಳನ್ನು ಹೆದ್ದಾರಿ ಪ್ರಾಧಿಕಾರದವರು ಶೀಘ್ರ ಪೂರ್ಣಗೊಳಿಸಿ, ಸಾರ್ವಜನಿಕ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲಿದ್ದಾರೆ ಎಂದರು. ತಿಪಟೂರು, ಕಡೂರು, ಬೀರೂರು, ತರೀಕೆರೆಯಲ್ಲಿ ಇರುವ ಅಡಚಣೆಗಳನ್ನು ಬಗೆಹರಿಸಲು ಸಹ ಕ್ರಮ ವಹಿಸುತ್ತಿದ್ದೇವೆ ಎಂದ ಅವರು, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ. ಹಾಗಾಗಿ ಆದಷ್ಟು ಬೇಗ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಹೆದ್ದಾರಿ ಪ್ರಾಧಿಕಾರಿದ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.ಗುಬ್ಬಿ ಪಟ್ಟಣದ 9 ಕಿ.ಮೀ. ದೂರ ಸಿಮೆಂಟ್ ಕಾಂಕ್ರೀಟ್ ರಸ್ತೆ, ಮಧ್ಯೆದಲ್ಲಿ 3 ಕಿ.ಮೀ. ಡಬಲ್ ರಸ್ತೆ ನಿರ್ಮಾಣವಾಗುತ್ತಿದೆ. ಗುಬ್ಬಿ ರೈಲ್ವೆ ನಿಲ್ದಾಣದಲ್ಲಿ ಎಲ್‌ಸಿ ಗೇಟ್ ಇರಲಿಲ್ಲ. ಈಗ ಲಘು ಮೇಲ್ಸೇತುವೆ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದ್ದು, ಕಾಮಗಾರಿ ಪ್ರಾರಂಭ ಮಾಡಲಾಗುತ್ತಿದೆ ಎಂದರು.ತುಮಕೂರು ಜಿಲ್ಲೆಯಲ್ಲೇ ಗುಬ್ಬಿ ತಾಲೂಕಿನಲ್ಲಿ ರೈಲ್ವೆ ಗೇಟ್‌ಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಈ ಎಲ್ಲ ಗೇಟ್‌ಗಳ ಬಳಿ ಸಾರ್ವಜನಿಕರ ಅನುಕೂಲಕ್ಕಾಗಿ ಅಂಡರ್‌ಪಾಸ್ ಹಾಗೂ ಲಘು ಮೇಲ್ಸೇತುವೆ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.ಈ ಕಾಮಗಾರಿಯಿಂದಾಗಿ ರೈತರಿಗೆ ತೊಂದರೆಯಾಗುವುದು ಸಹಜ. ಆದರೆ ಇದರಿಂದ ಸಾರ್ವಜನಿಕವಾಗಿ ತುಂಬಾ ಅನುಕೂಲವಾಗಲಿದೆ. ಸರ್ಕಾರ ನೀಡುವ ಹಣ ಯಾರ ಬಳಿಯೂ ಇರುವುದಿಲ್ಲ. ರೈತರು ನೀಡುವ ಭೂಮಿಯಲ್ಲಿ ಮಾಡುವ ಕೆಲಸ ಮಾತ್ರ ಶಾಶ್ವತವಾಗಿ ಉಳಿಯಲಿದೆ ಎಂದರು.ಪ್ರಧಾನಿ ನರೇಂದ್ರ ಮೋದಿಯವರು ಅಭಿವೃದ್ಧಿಯಲ್ಲಿ ರಾಜಕಾರಣ ಮಾಡಬೇಡಿ, ಚುನಾವಣೆ ವೇಳೆ ಮಾತ್ರ ರಾಜಕಾರಣ ಮಾಡಿ ಎಂದು ಹೇಳಿದ್ದಾರೆ. ಹಾಗಾಗಿ ಪಕ್ಷಾತೀತವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದರು.ಭಾರತದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ದೇಶದ ಇತಿಹಾಸಕ್ಕೆ ಸ್ವಲ್ವವೂ ಚ್ಯುತಿಬಾರದಂತೆ ನರೇಂದ್ರ ಮೋದಿಯವರು 11 ವರ್ಷಗಳ ಕಾಲ ಪ್ರಧಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಕನಸಿನ ಭಾರತವನ್ನು ನನಸು ಮಾಡುವ ನಿಟ್ಟಿನಲ್ಲಿ ಪಕ್ಷಾತೀತವಾಗಿ, ಜಾತ್ಯತೀತವಾಗಿ ನಾವೆಲ್ಲರೂ ಒಂದಾಗೋಣ ಎಂದರು.ಇದೇ ಸಂದರ್ಭದಲ್ಲಿ ಸಚಿವ ಸೋಮಣ್ಣ ಅವರು ಗುಬ್ಬಿಯ ಚನ್ನಬಸವೇಶ್ವರ ಸ್ವಾಮಿ ದೇವಾಲಯದ ಬಳಿ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ವೈಟ್ ಟ್ಯಾಪಿಂಗ್ ಕಾರ್ಯಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಶಾಸಕ ಹಾಗೂ ಕೆಎಸ್ಸಾರ್ಟಿಸಿ ನಿಗಮದ ಅಧ್ಯಕ್ಷ ಎಸ್. ಆರ್. ಶ್ರೀನಿವಾಸ್, ಮಾಜಿ ಸಂಸದ ಜಿ.ಎಸ್. ಬಸವರಾಜು, ಹೆದ್ದಾರಿ ಪ್ರಾಧಿಕಾರದ ಮುಖ್ಯಸ್ಥರಾದ ಬ್ರಹ್ಮಾಂಕರ್, ದಿಲೀಪ್‌ಕುಮಾರ್, ಹೊನ್ನಗಿರಿಗೌಡ, ಗ್ಯಾಸ್ ಬಾಬು, ನಾಗರಾಜು, ಯೋಗಾನಂದ್, ವೈ.ಎಚ್. ಹುಚ್ಚಯ್ಯ, ಬ್ಯಾಟರಂಗೇಗೌಡ, ರುದ್ರೇಶ್, ಬೈರಣ್ಣ, ಬೆಟ್ಟಸ್ವಾಮಿ, ಶಿವಪ್ರಸಾದ್, ಪ್ರಕಾಶ್ ಮತ್ತಿತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!