ಕನ್ನಡಪ್ರಭ ವಾರ್ತೆ ಹಾಸನ
ವಾಣಿಜ್ಯಶಾಸ್ತ್ರ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಪ್ರಸ್ತುತ ಸಾಕಷ್ಟು ಉದ್ಯೋಗವಕಾಶಗಳು ಇದ್ದು, ಅಧ್ಯಯನದ ಜೊತೆಗೆ ಉದ್ಯೋಗಕ್ಕೆ ಬೇಕಾಗುವ ಕೌಶಲ್ಯವನ್ನು ಕಲಿಯಬೇಕು ಎಂದು ಹಾಸನ ಮಹಾನಗರ ಪಾಲಿಕೆಯ ಮಹಾಪೌರ ಎಚ್.ಸಿ. ಗಿರೀಶ್ ಚನ್ನವೀರಪ್ಪ ಹೇಳಿದರು.ನಗರದ ಆರ್. ಸಿ. ರಸ್ತೆ ಗಂಧದಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಪ್ರಥಮ ವರ್ಷದ ಬಿ.ಕಾಂ. ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಹೊರಹಾಕಲು ಕಾಲೇಜು ಹಂತದಲ್ಲಿ ಸಾಕಷ್ಟು ಅವಕಾಶಗಳು ಇರುತ್ತದೆ. ಅದನ್ನು ಸದ್ಭಳಕೆ ಮಾಡಿಕೊಂಡು ಜೀವನದಲ್ಲಿ ಸಾಧನೆ ಹಾದಿ ಹಿಡಿಯಬೇಕು. ಪೋಷಕರು ತಮ್ಮ ಮಕ್ಕಳ ಮೇಲೆ ಸಾಕಷ್ಟು ವಿಶ್ವಾಸ, ನಂಬಿಕೆ ಇಟ್ಟು ಶಿಕ್ಷಣ ಕೊಡಿಸುತ್ತಾರೆ, ಅವರ ನಂಬಿಕೆಯನ್ನು ಉಳಿಸಿಕೊಂಡು ಉತ್ತಮ ವ್ಯಕ್ತಿಗಳಾಗಬೇಕು. ವಾಣಿಜ್ಯಶಾಸ್ತ್ರ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಇಂದು ವಿವಿಧ ಇಲಾಖೆ ಸೇರಿದಂತೆ ಸರ್ಕಾರಿ ಹಾಗೂ ಖಾಸಗಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅವಕಾಶಗಳು ಇದ್ದು, ಅದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ವಿದ್ಯಾನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಧ್ಯಾಪಕ ಬಿ.ಜಿ. ಮೂರ್ತಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದಲ್ಲಿನ ವಿಷಯಗಳನ್ನು ಅಧ್ಯಯನ ಮಾಡುವುದರ ಜೊತೆ ಜೊತೆಗೆ ವೃತ್ತಿ ಅವಕಾಶಗಳಿಗೆ ಬೇಕಾಗುವ ಕೌಶಲ್ಯಗಳನ್ನು ಕಲಿಯಬೇಕು. ಜೀವನದಲ್ಲಿ ಶಿಸ್ತು ಇಲ್ಲವೆಂದರೆ ಯಾವುದನ್ನು ಕಲಿಯಲು ಸಾಧ್ಯವಿಲ್ಲ, ಹಾಗಾಗಿ ಶಿಸ್ತು, ಸಮಯಪಾಲನೆ ಅತ್ಯವಶ್ಯಕ. ಪೋಷಕರು ನೀಡುವ ಜೀವನದ ನೀತಿ ಪಾಠ ಹಾಗೂ ಶಿಕ್ಷಕರು ನೀಡುವ ಸಲಹೆ ಸೂಚನೆಗಳನ್ನು ಜೀವನದಲ್ಲಿ ಪಾಲನೆ ಮಾಡಿದರೆ ಯಾವುದೇ ವ್ಯಕ್ತಿ ಸಮಾಜದಲ್ಲಿ ಉತ್ತಮ ವ್ಯಕಿಯಾಗಲು ಸಾಧ್ಯ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಿ.ಕೆ. ಮಂಜಯ್ಯ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಸರ್ಕಾರಿ ಕಾಲೇಜುಗಳಲ್ಲಿ ಇಂದು ಮೂಲಭೂತ ಸೌಲಭ್ಯಗಳು ಉತ್ತಮವಾಗಿದ್ದು, ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಯುವತಿಯರು ಜೀವನದಲ್ಲಿ ಉನ್ನತ ಶಿಕ್ಷಣ ಪೂರ್ಣಗೊಳಿಸಿ ಆನಂತರ ಒಳ್ಳೆಯ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಮನೆಗೆ ಆಧಾರಸ್ತಂಭವಾಗಬೇಕು ಎಂದು ತಿಳಿಸಿದರು. ಐ.ಕ್ಯೂ.ಎ.ಸಿ. ಸಂಚಾಲಕ ಜಿ.ಆರ್. ಮೋಹನ್ ಕುಮಾರ್, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ನಂದನ್ ಪಿ., ಅಧ್ಯಾಪಕರಾದ ಡಿ.ಜೆ. ರಮ್ಯ, ಎಸ್.ಜಿ. ರೇಖಾ, ಉಪನ್ಯಾಸಕರಾದ ಸುಧಾರಾಣಿ, ಸೌಮ್ಯ ಸಿ.ಎಸ್ ಹಾಗೂ ಇತರರು ಹಾಜರಿದ್ದರು.