ದೇವಾಲಯದ ದರ್ಶನ ದಿಂದ ಪುಣ್ಯ ಪ್ರಾಪ್ತಿ: ಗುಣನಾಥ ಶ್ರೀಗಳು

KannadaprabhaNewsNetwork | Published : May 11, 2025 11:48 PM
Follow Us

ಸಾರಾಂಶ

ಕೊಪ್ಪ, ಪುಣ್ಯಕ್ಷೇತ್ರಗಳ ದರ್ಶನ ಹಾಗೂ ಪಾವಿತ್ರ್ಯತೆಯಿಂದ ಕೂಡಿದ ಸಣ್ಣಸಣ್ಣ ದೇವಾಲಯದ ದರ್ಶನ ಗಳಿಂದಲೂ ಪುಣ್ಯ ಪ್ರಾಪ್ತಿಯಾಗುವುದು ಎಂದು ಶ್ರೀಕ್ಷೇತ್ರ ಆದಿ ಚುಂಚನಗಿರಿ ಶೃಂಗೇರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.

ಮೆಣಸಿನಹಾಡ್ಯದ ಕಲ್ಲುಗುಡ್ಡೆಯಲ್ಲಿ ಶ್ರೀ ಜಲದುರ್ಗಾಪರಮೇಶ್ವರಿ, ಚೌಡೇಶ್ವರಿ ಪುನರ್ ಪ್ರತಿಷ್ಠೆ ವೇಳೆ ಆಶೀರ್ವಚನ

ಕನ್ನಡಪ್ರಭ ವಾರ್ತೆ, ಕೊಪ್ಪ

ಪುಣ್ಯಕ್ಷೇತ್ರಗಳ ದರ್ಶನ ಹಾಗೂ ಪಾವಿತ್ರ್ಯತೆಯಿಂದ ಕೂಡಿದ ಸಣ್ಣಸಣ್ಣ ದೇವಾಲಯದ ದರ್ಶನ ಗಳಿಂದಲೂ ಪುಣ್ಯ ಪ್ರಾಪ್ತಿಯಾಗುವುದು ಎಂದು ಶ್ರೀಕ್ಷೇತ್ರ ಆದಿ ಚುಂಚನಗಿರಿ ಶೃಂಗೇರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.ತಾಲೂಕಿನ ಮೇಗುಂದ ಹೊಬಳಿ ಬಸ್ರಿಕಟ್ಟೆ ಸಮೀಪದ ಮೆಣಸಿನಹಾಡ್ಯದ ಕಲ್ಲುಗುಡ್ಡೆಯಲ್ಲಿ ಶ್ರೀ ಜಲದುರ್ಗಾಪರಮೇಶ್ವರಿ ಮತ್ತು ಚೌಡೇಶ್ವರಿ ಅಮ್ಮನವರ ಪುನರ್ ಪ್ರತಿಷ್ಠೆ ನೇರವೇರಿಸಿ ಆಶೀರ್ವಚನ ನೀಡಿ ಮಾತನಾಡಿದರು. ದೇವಾಲಯಗಳನ್ನು ನಿರ್ಮಿಸಿ ದೇವರನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುವ ಪದ್ಧತಿ ನಮ್ಮ ಹಿಂದೂ ಧರ್ಮದಲ್ಲಿ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದರು.

ಪ್ರಕೃತಿ ನಡುವೆ ಮೈದುಂಬಿ ಹರಿಯುವ ಹಳ್ಳದ ಬದಿಯಲ್ಲಿ ಪುನರ್ ಪ್ರತಿಷ್ಠಾಪನೆಗೊಂಡಿರುವ ಜಲದುರ್ಗಾದೇವಿ ಶಕ್ತಿಯುತ ದೇವಿಯಾಗಿದ್ದಾಳೆ ಎನ್ನುವ ನಂಬಿಕೆ ನನ್ನದು. ಊರಿಗೊಂದು ನದಿ ಮತ್ತು ಗುರುವಿನ ಸಾನಿಧ್ಯವಿರ ಬೇಕು. ಪ್ರಸ್ತುತ ಕಾಲ ಘಟ್ಟದಲ್ಲಿ ಹಳ್ಳಿಯ ಜೀವನ ತೊರೆದು ನಗರ ಜೀವನಕ್ಕೆ ಮನಸೋತು ಅನೇಕರು ನಗರಗಳತ್ತ ವಲಸೆ ಹೋಗಿ ಜೀವನ ಕಂಡುಕೊಂಡಿದ್ದಾರೆ. ನಗರಗಳಲ್ಲಿ ಸಾಕಷ್ಟು ಕೆಲಸವೂ ಇದೆ. ಕೈತುಂಬಾ ಹಣ ಸಂಪಾದನೆಯೂ ಆಗುತ್ತದೆ. ಅದೇ ರೀತಿ ಕಲುಷಿತ ವಾತಾವರಣದಿಂದ ಮೈತುಂಬ ಕಾಯಿಲೆಗಳು ತುಂಬಿಕೊಳ್ಳುತ್ತದೆ. ಸುಂದರ ಪ್ರಕೃತಿ ನಡುವೆ ವಾಸಿಸುತ್ತಿರುವ ನೀವುಗಳು ಪುಣ್ಯವಂತರು. ಇಲ್ಲಿಯ ಕಲುಷಿತವಲ್ಲದ ವಾತಾವರಣ ನಿಮ್ಮ ಆರೋಗ್ಯವನ್ನು ಸದಾ ಕಾಪಾಡುತ್ತದೆ ಎಂದರು. ಕಲ್ಲುಗುಡ್ಡೆಯ ಜಲದುರ್ಗಾ ಪರಮೇಶ್ವರಿ ಸೇವಾ ಸಮಿತಿ ಹಮ್ಮಿಕೊಂಡ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಸೇವಾ ಸಮಿತಿ ಮತ್ತು ಗ್ರಾಮಸ್ಥರು ಶ್ರೀಗಳನ್ನು ಪೂರ್ಣಕುಂಭ ಸ್ವಾಗತ ನೀಡಿ ಗ್ರಾಮಕ್ಕೆ ಬರಮಾಡಿಕೊಂಡರು. ಗಿರಿಜನ ಮುಖಂಡರಾದ ಗಿರಿಯಪ್ಪ, ಎನ್.ಟಿ. ಗೋಪಾಲಕೃಷ್ಣ ಸೇರಿದಂತೆ ಜಲದುರ್ಗಾಪರಮೇಶ್ವರಿ ಸೇವಾ ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು ಕಾರ್ಯಕ್ರಮದಲ್ಲಿದ್ದರು.

-- ಬಾಕ್ಸ್‌--

ಗಿರಿಜನ ಮನೆಯಲ್ಲಿ ಭೋಜನ: ಜಾತ್ಯಾತೀತ ಭಾವನೆ ಮೆರೆದ ಶ್ರೀಗಳುಜಾತ್ಯಾತೀತ ಎನ್ನುವುದು ಇತ್ತೀಚಿನ ದಿನಗಳಲ್ಲಿ ಕೇವಲ ಭಾಷಣದ ವಸ್ತುವಾಗಿ ವೇದಿಕೆಗೆ ಮಾತ್ರ ಸೀಮಿತವಾಗಿರುವಾಗ ಅದಕ್ಕೆ ಅಪವಾದ ಎನ್ನುವಂತೆ ಶ್ರೀ ಗುಣನಾಥ ಶ್ರೀಗಳು ಗಿರಿಜನ ಮುಖಂಡರ ಮನೆಗೆ ತೆರಳಿ ಅವರೊಂದಿಗೆ ಕುಳಿತು ಭೋಜನ ಸ್ವೀಕರಿಸಿ ನೈಜ ಜಾತ್ಯಾತೀತ ಮನೋಭಾವನೆ ಮೆರೆದರು. ಶ್ರೀಗಳು ನಮ್ಮಂತಹ ಗಿರಿಜನರ ಮನೆಗೆ ಬಂದು ನಮ್ಮೊಂದಿಗೆ ಕುಳಿತು ಭೋಜನ ಮಾಡುತ್ತಾರೆ ಎನ್ನುವುದು ನಾವು ಕನಸಿ ನಲ್ಲಿಯೂ ನೆನೆಸಿರಲಿಲ್ಲ. ಕಾರ್ಯಕ್ರಮದ ವೇಳೆ ನಿಮ್ಮ ಮನೆಗೆ ಊಟಕ್ಕೆ ಬರುತ್ತೇವೆ ಎಂದಾಗ ಅಚ್ಚರಿಯಾಯಿತು. ನಮ್ಮೊಂದಿಗೆ ಕುಳಿತು ಬೋಜನ ಸ್ವೀಕರಿಸಿದ್ದು ಸಂತಸ ತಂದಿದೆ. -ಗೋಪಾಲಕೃಷ್ಣ

ಗಿರಿಜನ ಮುಖಂಡ,

ಅಧ್ಯಕ್ಷರು ಅತ್ತಿಕೊಡಿಗೆ ಗ್ರಾ.ಪಂ. ಮೆಣಸಿನಹಾಡ್ಯ