ತಂತ್ರಜ್ಞಾನ, ನೀರಿನ ಬಳಕೆಯಿಂದ ಕೃಷಿಯಲ್ಲಿ ಲಾಭ: ಪ್ರಗತಿಪರ ಕೃಷಿಕ

KannadaprabhaNewsNetwork |  
Published : Feb 23, 2024, 01:51 AM IST
22ಎಚ್ಎಸ್ಎನ್8 : ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣದಲ್ಲಿ ಏರ್ಪಡಿಸಿದ್ದ ಹಳ್ಳಿಧ್ವನಿ ಕಾರ್ಯಕ್ರಮದಲ್ಲಿ ಕೃಷಿ ಸಾಧಕರಾದ ಎಂ.ಟಿ. ಕೃಷ್ಣೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಆಧುನಿಕ ತಂತ್ರಜ್ಞಾನ ಅಳವಡಿಕೆ ಜತೆಗೆ ಮಳೆ ನೀರನ್ನು ಸಂರಕ್ಷಿಸಿ ಮಿತವಾಗಿ ಬಳಕೆ ಮಾಡಿ ಪರ್ಯಾಯ ಬೆಳೆಗಳನ್ನು ಬೆಳೆದರೆ ಕೃಷಿ ಕಾಯಕದಲ್ಲಿ ಲಾಭ ಹೊಂದಬಹುದು ಎಂದು ಪ್ರಗತಿಪರ ಕೃಷಿಕ ಎಂ.ಟಿ.ಕೃಷ್ಣೇಗೌಡ ಸಲಹೆ ನೀಡಿದರು. ಅರಕಲಗೂಡಲ್ಲಿ ಹಳ್ಳಿಧ್ವನಿ ಹಾಗೂ ರೇಡಿಯೋ ಕಿಸಾನ್ ದಿವಸ-24 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಳ್ಳಿಧ್ವನಿ । ಎಂ.ಟಿ.ಕೃಷ್ಣೇಗೌಡ ಸಲಹೆ । ಹಾಸನ ಆಕಾಶವಾಣಿ ಕೇಂದ್ರದಿಂದ ರೇಡಿಯೋ ಕಿಸಾನ್‌ ದಿವಸ-24ಕನ್ನಡಪ್ರಭ ವಾರ್ತೆ ಅರಕಲಗೂಡು

ಆಧುನಿಕ ತಂತ್ರಜ್ಞಾನ ಅಳವಡಿಕೆ ಜತೆಗೆ ಮಳೆ ನೀರನ್ನು ಸಂರಕ್ಷಿಸಿ ಮಿತವಾಗಿ ಬಳಕೆ ಮಾಡಿ ಪರ್ಯಾಯ ಬೆಳೆಗಳನ್ನು ಬೆಳೆದರೆ ಕೃಷಿ ಕಾಯಕದಲ್ಲಿ ಲಾಭ ಹೊಂದಬಹುದು ಎಂದು ಪ್ರಗತಿಪರ ಕೃಷಿಕ ಎಂ.ಟಿ.ಕೃಷ್ಣೇಗೌಡ ಸಲಹೆ ನೀಡಿದರು.

ತಾಲೂಕಿನ ಮಲ್ಲಿಪಟ್ಟಣದಲ್ಲಿ ಹಾಸನ ಆಕಾಶವಾಣಿ ಕೇಂದ್ರದ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಹಳ್ಳಿಧ್ವನಿ ಹಾಗೂ ರೇಡಿಯೋ ಕಿಸಾನ್ ದಿವಸ-24 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಮಳೆ ಪ್ರಮಾಣ ಕ್ಷೀಣಿಸುತ್ತಿದೆ. ಅತ್ಯಂತ ಕಡಿಮೆ ಮಳೆ ಬೀಳುವ ಇಸ್ರೇಲ್ ದೇಶ ಅತ್ಯುನ್ನತ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಕಡಿಮೆ ನೀರಿನಲ್ಲಿಯೇ ಹೆಚ್ಚು ಕೃಷಿ ಉತ್ಪನ್ನ ಪಡೆಯುತ್ತದೆ. ನೀರಿನ ಕುರಿತ ಜಾಗೃತಿ ಆ ದೇಶದ ಕೃಷಿಕರಲ್ಲಿ ಅತ್ಯಧಿಕವಾಗಿದೆ. ಅಂತಹ ಅರಿವು ಇಲ್ಲಿನ ರೈತರಲ್ಲಿಯೂ ಮೂಡಬೇಕು. ಇಲ್ಲಿ ನೀರೂ ಸೇರಿದಂತೆ ಇತರೆ ನೈಸರ್ಗಿಕ ಸಂಪನ್ಮೂಲಗಳು ಹೇರಳವಾಗಿ ದೊರೆಯುತ್ತಿವೆ. ಅವುಗಳನ್ನು ಲಭ್ಯವಿರುವ ತಂತ್ರಜ್ಞಾನದೊಂದಿಗೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಡಾ. ವಿಜಯ್ ಅಂಗಡಿ ಮಾತನಾಡಿ, ಹಳ್ಳಿ ಧ್ವನಿ ಆಕಾಶವಾಣಿಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಹಳ್ಳಿಗಳ ವಸ್ತುಸ್ಥಿತಿಯನ್ನು ಅರಿಯುವ ಸಲುವಾಗಿ ಇದನ್ನು ರೂಪಿಸಲಾಗಿದೆ. ಹಳ್ಳಿ ಧ್ವನಿಯ ಮೂಲಕ ಹಳ್ಳಿಗಳ ಇತಿಹಾಸ, ಅಲ್ಲಿನ ಜನ ಜೀವನವನ್ನು ತಿಳಿಯುವ ಹಾಗೂ ಆಕಾಶವಾಣಿಯ ಕೇಳುಗರಿಗೆ ತಲುಪಿಸಿ ಅದನ್ನು ದಾಖಲಿಸುವ ಕೆಲಸವನ್ನು ಆಕಾಶವಾಣಿ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಪರಿಸರಪ್ರಿಯ ಉತ್ಪನ್ನಗಳ ಮಹತ್ವ ಕುರಿತು ಆಕಾಶವಾಣಿ ನಿರ್ವಾಹಕ ಮಧುಸೂದನ್ ಮಾಹಿತಿ ನೀಡಿದರು. ಅಂಚೆ ಇಲಾಖೆಯ ನಿವೃತ್ತ ನೌಕರ ಚಂದ್ರಶೇಖರ್ ಸ್ಥಳೀಯ ಸಾಧಕರ ಸಾಧನೆಗಳನ್ನು ವಿವರಿಸಿದರು. ಸಂಘ ಸಂಸ್ಥೆಗಳು ಹಾಗೂ ದೇವಾಲಯಗಳ ಪರಿಚಯ ಕುರಿತು ಸಮಾಜ ಸೇವಕ ಎಂ.ಟಿ. ಹುಲ್ಮನೆ ಮಂಜುನಾಥ್ ಮಾಹಿತಿ ನೀಡಿದರು. ತಾಲೂಕಿನ ಗಡಿ ಗ್ರಾಮಗಳಲ್ಲಿ ಬಾಧಿಸುತ್ತಿರುವ ಆನೆ ಸಮಸ್ಯೆಯ ಆರಂಭ, ಉಪಟಳ ಹಾಗೂ ಪರಿಹಾರಗಳನ್ನು ಕುರಿತು ಸರ್ಕಾರ ನೆರವಿಗೆ ಧಾವಿಸುವಂತೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಆಗ್ರಹಿಸಿದರು.

ಮಲ್ಲಿಪಟ್ಟಣದಲ್ಲಿರುವ ಕೊರತೆಗಳು ಹಾಗೂ ಆಗಲೇಬೇಕಿರುವ ಕಾರ್ಯಗಳ ಕುರಿತು ಕಾಫಿ ಬೆಳೆಗಾರ ಎಚ್.ಎನ್. ವೆಂಕಟೇಶ್ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸೇವೆಗಳ ಕುರಿತು ಕಂದಲಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಟಿ.ನಾಗರಾಜ್ ವಿಚಾರಗಳನ್ನು ಹಂಚಿಕೊಂಡರು.

ಹಾಸನದ ಡಾ. ಶಿವಪ್ರಸಾದ್ ನೇತ್ರಾಲಯದ ತಂಡ ಉಚಿತ ಕಣ್ಣು ಪರೀಕ್ಷೆ ನಡೆಸಿತು. ಕೃಷಿ ಸಾಧಕರಾದ ಎಂ.ಟಿ. ಕೃಷ್ಣೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಆರ್.ರಂಗಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಗ್ರಾಪಂ ಅಧ್ಯಕ್ಷ ಯೋಗೇಶ್ ಕುಮಾರ್, ಉಪಾಧ್ಯಕ್ಷೆ ಟಿ.ಡಿ. ಸುಮಿತ್ರಮ್ಮ, ಲಲಿತಾ, ತಾಪಂ ಮಾಜಿ ಅಧ್ಯಕ್ಷ ದೇವರಾಜೇಗೌಡ, ಹಾಸನದ ಜೀವರಕ್ಷ ರಕ್ತನಿಧಿಯ ಮೇಲ್ವಿಚಾರಕ ಜಿ.ಎಸ್. ಮೋಹನ್, ಯೋಗ ತರಬೇತಿದಾರ ಎ.ಆರ್.ಚೇತನ್ ಕುಮಾರ್, ಡಿ.ಬಿ. ಶಿವರುದ್ರಪ್ಪ, ಶಿವಪ್ಪ, ಎಂ.ಎಚ್. ಸತೀಶ್, ವಸಂತಕುಮಾರ್, ಶ್ರೀನಿವಾಸ್, ಹರ್ಷ, ಎಂ.ಎನ್. ಚಂದ್ರಶೇಖರ್, ಹೊಸಹಳ್ಳಿ ವೆಂಕಟೇಶ್ ಇದ್ದರು. ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣದಲ್ಲಿ ಏರ್ಪಡಿಸಿದ್ದ ಹಳ್ಳಿಧ್ವನಿ ಕಾರ್ಯಕ್ರಮದಲ್ಲಿ ಕೃಷಿ ಸಾಧಕರಾದ ಎಂ.ಟಿ. ಕೃಷ್ಣೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ