ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮೂರನೇ ಆಷಾಢ ಶುಕ್ರವಾರ ಹಿನ್ನೆಲೆ ಐತಿಹಾಸಿಕ ದೇವಾಲಯವಾದ ಚಾಮರಾಜನಗರದ ಚಾಮರಾಜೇಶ್ವರ ದೇಗುಲದಲ್ಲಿ ಚಾಮುಂಡೇಶ್ವರಿ ದೇವಿಗೆ ಸಹಸ್ರಾರು ಮಹಿಳೆಯರು ತುಂತುರು ಮಳೆ ನಡುವೆ ನಿಂಬೆಹಣ್ಣಿನ ಆರತಿ ಬೆಳಗಿದರು.ಅಷಾಢ ಶುಕ್ರವಾರದಂದು ನಿಂಬೆಹಣ್ಣಿನ ಆರತಿ ಬೆಳಗಿದರೇ ಇಷ್ಟಾರ್ಥ ಸಿದ್ಧಿ, ಕಂಕಣ ಭಾಗ್ಯ, ಸಂತಾನ ಭಾಗ್ಯ, ಸುಮಂಗಲಿ ಭಾಗ್ಯ ಕೂಡಿ ಬರಲಿದೆ ಎಂಬ ನಂಬಿಕೆ ಹಿನ್ನೆಲೆ ಸಹಸ್ರಾರು ಮಹಿಳೆಯರು, ಯುವತಿಯರು ನಿಂಬೆಹಣ್ಣಿನ ಆರತಿ ಬೆಳಗಿ ಪ್ರಾರ್ಥನೆ ಸಲ್ಲಿಸಿದರು.
ಈಶ್ವರ ಅಭಿಷೇಕ ಪ್ರಿಯನಾದರೆ, ವಿಷ್ಣು ಅಲಂಕಾರ ಪ್ರಿಯ. ಅದೇ ರೀತಿ ಚಾಮುಂಡೇಶ್ವರಿ ದೇವಿ ಸ್ತೋತ್ರ ಪ್ರಿಯಳಾಗಿದ್ದಾಳೆ. ಆಷಾಢ ಮಾಸದಲ್ಲಿ ದೇವಿಯನ್ನು ಸ್ಮರಿಸಿ ಸ್ತೋತ್ರ ಹೇಳಿದರೆ ದೇವಿ ನಮ್ಮೆಲ್ಲಾ ಕಷ್ಟಗಳನ್ನು ದೂರ ಮಾಡುತ್ತಾಳೆ ಎಂಬ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿಗೆ ಮಹಿಳೆಯರು ಆಗಮಿಸಿ ಇಷ್ಟಾರ್ಥ ಈಡೇರಲಿ ಎಂದು ನಿಂಬೆಹಣ್ಣಿನ ಆರತಿ ಮಾಡುತ್ತಾರೆ.ಇನ್ನೂ ಕೆಲವರು ಸೇಬು, ನಿಂಬೆ, ಕಿತ್ತಳೆ ಸೇರಿದಂತೆ ವಿವಿಧ ಬಗೆಯ ಹಣ್ಣಿನ ಹಾರ ತಯಾರಿಸಿ ದೇವರಿಗೆ ಅರ್ಪಿಸುತ್ತಾರೆ. ನಿಂಬೆಹಣ್ಣಿಗೆ ಆಕರ್ಷಣಾ ಶಕ್ತಿ ಹೆಚ್ಚು. ಹೀಗಾಗಿ ನಿಂಬೆಹಣ್ಣನ್ನು ದೇವತಾ ಪಾದಕ್ಕೆ ಹಿಂಡಿ ಅದರ ಸಿಪ್ಪೆಯಿಂದ ದೀಪ ತಯಾರಿಸಿ ಅದರಿಂದ ಆರತಿ ಮಾಡಿದರೆ ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆ ತಲತಲಾಂತರದಿಂದ ನಡೆದುಕೊಂಡು ಬಂದಿದ್ದು ತುಂತುರು ಮಳೆ ನಡುವೆ ಸಹಸ್ರಾರು ಮಹಿಳೆಯರು ನಿಂಬೆಹಣ್ಣಿನ ಆರತಿ ಬೆಳಗಿದರು.
ಆಷಾಢ ಶುಕ್ರವಾರವಾದ ಇಂದು ಚಾಮುಂಡೇಶ್ವರಿ ದೇಗುಲಕ್ಕೆ ಭಕ್ತರ ದಂಡೆ ಹರಿದು ಬಂದಿತ್ತು. ದೇವಾಲಯದ ಅಂಗಳದ ತುಂಬಾ ಮಹಿಳೆಯರು ನಿಂಬೆ ಹಣ್ಣಿನಿಂದ ದೀಪ ತಯಾರಿಸಿ ದೇವಿಗೆ ಆರತಿ ಬೆಳಗುತ್ತಿದ್ದ ದೃಶ್ಯ ಕಣ್ಮನ ಸೆಳೆಯಿತು. ಮೂರನೇ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿಗೆ ಗಜಲಕ್ಷ್ಮೀ ಅಲಂಕಾರವನ್ನು ಅರ್ಚಕ ನಾಗರಾಜ್ ದೀಕ್ಷಿತ್ ಮಾಡಿದರು.