ಗಾಳಿಬೀಡು- ಸುಬ್ರಹ್ಮಣ್ಯ ರಸ್ತೆ ಅಭಿವೃದ್ಧಿಗೆ ಪ್ರಯತ್ನ, ಇಕೋ ಟೂರಿಸಂ ಅಭಿವೃದ್ಧಿ

KannadaprabhaNewsNetwork |  
Published : Feb 07, 2024, 01:46 AM IST
ಕೊಲ್ಲಮೊಗ್ರ ಅರಣ್ಯ ಸಚಿವ ಈಶ್ವರ ಖಂಡ್ರೆ ಭೇಟಿ-ಗ್ರಾಮಸ್ಥರಿಂದ ಅಹವಾಲು ಸ್ವೀಕಾರ | Kannada Prabha

ಸಾರಾಂಶ

ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಕೊಲ್ಲಮೊಗ್ರ ಹಾಗೂ ಹರಿಹರ ಗ್ರಾಮದ ಜನರ ಸಮಸ್ಯೆಗಳ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಪರಿಹರಿಸಲಾಗುವುದು. ನಾಳೆ ನಡೆಯಲಿರುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಲಾಗುವುದು ಎಂದು ಸಚಿವರು ಹೇಳಿದರು.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಫೆ.೧೦ರಂದು ಪತ್ರಕರ್ತರು ಗ್ರಾಮ ವಾಸ್ತವ್ಯ ನಡೆಸುವ ಕೊಲ್ಲಮೊಗ್ರ ಗ್ರಾಮಕ್ಕೆ ರಾಜ್ಯ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಈಶ್ವರ ಖಂಡ್ರೆ ಮಂಗಳವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಗ್ರಾಮಕ್ಕೆ ಬೇಕಾದ ಸೌಕರ್ಯಗಳ ಪ್ರಮುಖ ಬೇಡಿಕೆಗಳ ಬಗ್ಗೆ ಗ್ರಾಮಸ್ಥರು ಸಚಿವರಿಗೆ ಮನವಿ ಸಲ್ಲಿಸಿದರು. ದಕ್ಷಿಣ ಕನ್ನಡ- ಕೊಡಗು ಸಂಪರ್ಕ ಕಲ್ಪಿಸುವ ಗಾಳಿಬೀಡು- ಕಡಮಕಲ್ಲು- ಸುಬ್ರಹ್ಮಣ್ಯ ರಸ್ತೆ ಅಭಿವೃದ್ಧಿ ಮಾಡಬೇಕು, ಕೊಲ್ಲಮೊಗ್ರ, ಹರಿಹರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಗ್ರೀನ್ ಟ್ರಾಕ್‌ಗಳನ್ನು ಇಕೋ ಟೂರಿಸಂ ನೆಲೆಯಲ್ಲಿ ಅಭಿವೃದ್ಧಿ ಪಡಿಸಬೇಕು. ಭಾಗಶಃ ಅರಣ್ಯ ಸಮಸ್ಯೆಯಿಂದ ಹಲವು ಕುಟುಂಬಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ, ಕಾಡಾನೆ ಹಾಗೂ ಇತರ ವನ್ಯ ಜೀವಿಗಳ ಹಾವಳಿಯಿಂದ ಕೃಷಿಕರು ತೀವ್ರ ಸಮಸ್ಯೆ ಎದುರಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಇತ್ಯಾದಿ ಮನವಿಗಳನ್ನು ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಕೊಲ್ಲಮೊಗ್ರ ಹಾಗೂ ಹರಿಹರ ಗ್ರಾಮದ ಜನರ ಸಮಸ್ಯೆಗಳ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಪರಿಹರಿಸಲಾಗುವುದು. ನಾಳೆ ನಡೆಯಲಿರುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಲಾಗುವುದು ಎಂದು ಸಚಿವರು ಹೇಳಿದರು. ಮಡಿಕೇರಿ ಸಂಪರ್ಕಿಸುವ ಗಾಳಿಬೀಡು- ಸುಬ್ರಹ್ಮಣ್ಯ ರಸ್ತೆ ಅಭಿವೃದ್ಧಿಗೆ ಎಲ್ಲ ಪ್ರಯತ್ನಗಳನ್ನೂ ನಡೆಸಲಾಗುವುದು. ಅರಣ್ಯದಲ್ಲಿ ಹಾದು ಹೋಗುವ ರಸ್ತೆಯ ಅನುಮತಿಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು ಸೇರಿದಂತೆ ಎಲ್ಲ ಪ್ರಯತ್ನ ನಡೆಸಲಾಗುವುದು. ಅರಣ್ಯ ಸಮಸ್ಯೆಯಿಂದ ಹಲವು ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಸಾಧ್ಯವಾಗದ ಸಮಸ್ಯೆ ಗಮನಕ್ಕೆ ಬಂದಿದೆ. ಇದರ ಪರಿಹಾರಕ್ಕೆ ಜಂಟಿ ಸರ್ವೆ ನಡೆಸುವುದು ಸೇರಿದಂತೆ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಗ್ರಾಮಸ್ಥರಿಗೆ ಭರವಸೆ ನೀಡಿದರು. ಕಾಡಾನೆ ತಡೆಗೆ ಶಾಶ್ವತ ಪರಿಹಾರ ಯೋಜನೆ: ಆನೆ ಹಾವಳಿ ತಡೆಯಲು ಶಾಶ್ವತ ಪರಿಹಾರ ಕಂಡುಕೊಳ್ಳುವ ಯೋಜನೆ ರೂಪಿಸಲಾಗಿದೆ. ರೈಲ್ವೇ ಹಳಿ ಬಳಸಿ ಬೇಲಿ ನಿರ್ಮಾಣ, ಆನೆ ಕಂದಕ, ಸೋಲಾರ್ ಬೇಲಿ ನಿರ್ಮಾಣ ಸೇರಿದಂತೆ ಯೋಜನೆ ರೂಪಿಸಲಾಗುತಿದೆ. ಆನೆ ಕಾರ್ಯಪಡೆ, ಚಿರತೆ ಕಾರ್ಯಪಡೆ ರಚಿಸಲಾಗಿದೆ ಎಂದು ಸಚಿವರು ತಿಳಿಸಿದರು. ಈಕೋ ಟೂರಿಸಂ ಅಭಿವೃದ್ಧಿಗೆ ಸರ್ಕಾರ ಎಲ್ಲ ರೀತಿಯ ಉತ್ತೇಜನ ನೀಡಲಾಗುತ್ತಿದೆ. ಕೊಲ್ಲಮೊಗ್ರ ಹರಿಹರ ಗ್ರಾಮ ವ್ಯಾಪ್ತಿಯಲ್ಲಿ ಗ್ರೀನ್ ಟ್ರಾಕ್‌ಗಳನ್ನು ಇಕೋ ಟೂರಿಸಂ ಯೋಜನೆಯಲ್ಲಿ ಅಭಿವೃದ್ಧಿ ಪಡಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು. ಏಕಬಳಕೆಯ ಪ್ಲಾಸ್ಟಿಕ್ ಮುಕ್ತ ಗ್ರಾಮ ಅಭಿಯಾನಕ್ಕೆ ಸಚಿವರು ಈ ಸಂದರ್ಭದಲ್ಲಿ ಚಾಲನೆ ನೀಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ಹರಿಹರ ಕೊಲ್ಲಮೊಗ್ರು ಸಹಕಾರಿ ಕೃಷಿ ಪತ್ತಿನ ಬ್ಯಾಂಕ್ ಅಧ್ಯಕ್ಷ ಡಿ.ಎಸ್. ಹರ್ಷಕುಮಾರ ದೇವಜನ ಈ ಭಾಗದ ಸಮಸ್ಯೆಗಳ ಕುರಿತು ಸಚಿವರಿಗೆ ವಿವರಿಸಿದರು.ಕೊಲ್ಲಮೊಗ್ರು ಗ್ರಾ.ಪಂ ಅಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ಅಶ್ವತ್ ಯಾಲದಾಳು, ಹರಿಹರ ಗ್ರಾ.ಪಂ ಉಪಾಧ್ಯಕ್ಷ ಜಯಂತ ಬಾಳುಗೋಡು, ಮಾಧವ ಚಾಂತಾಳ, ಉದಯ ಶಿವಾಲ,ಡಾ. ಸೋಮಶೇಖರ ಕಟ್ಟೆಮನೆ, ಡ್ಯಾನಿ ಯಾಲದಾಳು, ವಿನೂಪ ಮಲ್ಲಾರ, ಶೇಖರ ಅಂಬೆಕಲ್ಲು, ಬೆಳ್ಯಪ್ಪ ಖಂಡಿಗೆ, ಸತೀಶ್ ಟಿ.ಎನ್, ದಿನೇಶ್ ಮಡ್ತಿಲ, ಚಂದ್ರಶೇಖರ ಕೋನಡ್ಕ,ಮೋನಪ್ಪ ಕೊಳಗೆ, ಚೆನ್ನಕೇಶವ ಕೊಲ್ಲಮೊಗ್ರು, ಶಿವಾನಂದ ಕಲ್ಮಕಾರ್, ಪುಷ್ಪರಾಜ್ ಕೊಲ್ಲಮೊಗ್ರ, ಕಾಂಗ್ರೆಸ್ ಮುಖಂಡರಾದ ಜಿ.ಕೃಷ್ಣಪ್ಪ, ಭರತ್ ಮುಂಡೋಡಿ, ರಕ್ಷಿತ್ ಶಿವರಾಂ, ಸುಧೀರ್ ಕುಮಾರ್ ಶೆಟ್ಟಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕೋಶಾಧಿಕಾರಿ ಬಿ.ಎನ್. ಪುಷ್ಪರಾಜ್, ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ, ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಯಾನಂದ ಕಲ್ನಾರ್, ಮಹಾರಾಷ್ಟ್ರ ಕನ್ನಡಿಗರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ್, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ವಿಶ್ವನಾಥ ನಡುತೋಟ, ಪತ್ರಕರ್ತರಾದ ಬಾಲಕೃಷ್ಣ ಭೀಮಗುಳಿ, ಲೋಕೇಶ್ ಬಿ.ಎನ್, ಗಿರೀಶ್ ಅಡ್ಪಂಗಾಯ, ರತ್ನಾಕರ ಸುಬ್ರಹ್ಮಣ್ಯ, ಪ್ರಕಾಶ್ ಸುಬ್ರಹ್ಮಣ್ಯ, ಶಿವರಾಮ ಕಜೆಮೂಲೆ ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ