ಹೊಸಪೇಟೆ: ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬದಲಾವಣೆ ಮಾಡಬೇಕು. ಜಿಲ್ಲೆಯಲ್ಲಿ ಪಕ್ಷ ಮೂರು ಹೋಳಾಗಿದೆ. ಅವರನ್ನು ಬದಲಾಯಿಸಿದರೆ ಮಾತ್ರ ಪಕ್ಷ ಸಂಘಟನೆ ಉಳಿಯಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಸಿರಾಜ್ ಶೇಕ್ ದೂರಿದರು.
ಜಿಲ್ಲೆಯಲ್ಲಿ ಭ್ರಷ್ಟಾಚಾರ ಮೀತಿ ಮೀರುತ್ತಿದೆ. ಕೊಪ್ಪಳ, ಗಂಗಾವತಿ, ಬೆಂಗಳೂರಿನವರು ಬಂದು ಜಿಲ್ಲೆಯಲ್ಲಿ ಭ್ರಷ್ಟಾಚಾರಕ್ಕೆ ಇಳಿದಿದ್ದಾರೆ. ಜಿಲ್ಲಾಧಿಕಾರಿ ಕಚೇರಿಗೆ ಪದೇ ಪದೇ ಸಚಿವರ ಬೆಂಬಲಿಗರು ಏಕೆ ಹೋಗುತ್ತಾರೆ? ಸಿಸಿ ಕ್ಯಾಮೆರಾ ಪರಿಶೀಲಿಸಿದರೆ ಎಲ್ಲವೂ ಗೊತ್ತಾಗಲಿದೆ. ನಾನು ಮಾಹಿತಿ ಹಕ್ಕಿನಲ್ಲಿ ಸಿಸಿ ಕ್ಯಾಮೆರಾ ದೃಶ್ಯಾವಳಿ ಪಡೆಯುವೆ. ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರ ಬಳಿಯೂ ಈ ಬಗ್ಗೆ ಸುದೀರ್ಘ ಚರ್ಚಿಸುವೆ. ಸಚಿವರ ಹಿಂದೆ ಭ್ರಷ್ಟರ ಕೂಟ ಇದೆ ಎಂದು ಆರೋಪಿಸಿದರು.
ಹಂಪಿ ಉತ್ಸವದಲ್ಲಿ ಖಾಸಗಿ ವ್ಯಕ್ತಿಗಳ ಕೆಲಸ ಏನು? ಗಾಯತ್ರಿ ಪೀಠದ ಪ್ರಧಾನ ವೇದಿಕೆಯಲ್ಲೂ ಪದೇ ಪದೇ ಸಚಿವರ ಬೆಂಬಲಿಗರ ಪಡೆ ಕಾಣಿಸಿಕೊಂಡಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲೂ ಕಾಣಿಸಿಕೊಂಡಿದ್ದಾರೆ. ಸಚಿವರ ಹೆಸರು ಹೇಳಿ ಭ್ರಷ್ಟಾಚಾರಕ್ಕೆ ಇಳಿದಿದ್ದಾರೆ. ಜಿಲ್ಲೆಯ ಇಲಾಖೆಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಇದಕ್ಕೆ ಕಡಿವಾಣ ಹಾಕಬೇಕು. ಆಹಾರ, ಮರಳು, ಭೂ ಮಾಫಿಯಾದ ಬಗ್ಗೆ ದಾಖಲೆ ಸಮೇತ ಆಗಮಿಸಿ ಬಹಿರಂಗಪಡಿಸುವೆ ಎಂದರು.ಉಸ್ತುವಾರಿ ಸಚಿವರು ಜಿಲ್ಲೆಯ ವಾಸ್ತವ ಸ್ಥಿತಿಗತಿ ಅರಿಯಲು ಪ್ರಯತ್ನಿಸಿಲ್ಲ. ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಅವರು ಯಾರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ? ಹೆಲಿಕಾಪ್ಟರ್‌ನಲ್ಲಿ ಶೋ ಮಾಡುತ್ತಿದ್ದಾರೆ. ಬಡವರಿಗೆ ಐದು ಸಾವಿರ ರು. ಎಣಿಸಿ, ಎಣಿಸಿ ನೀಡಿ ಫೋಟೊ ಹಾಕಿಕೊಂಡು ಗಿಮಿಕ್ ಮಾಡುತ್ತಿದ್ದಾರೆ. ಅದರ ಬದಲಿಗೆ ಸರ್ಕಾರದ ಯೋಜನೆಗಳನ್ನು ಬಡವರಿಗೆ ತಲುಪಿಸಬೇಕು. ಈ ಕಾರ್ಯ ಆಗುತ್ತಿಲ್ಲ ಎಂದರು.
ಉತ್ಸವಕ್ಕೆ ಆಹ್ವಾನ ಇಲ್ಲ: ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಿಗೆ, ನಗರಸಭೆ ಸದಸ್ಯರಿಗೆ ಹಂಪಿ ಉತ್ಸವಕ್ಕೆ ಆಹ್ವಾನ ನೀಡಿರಲಿಲ್ಲ. ನಗರಸಭೆ ಸದಸ್ಯರು ಚುನಾಯಿತ ಪ್ರತಿನಿಧಿಗಳನ್ನು ಕಡೆಗಣಿಸಲಾಗಿದೆ. ಇದು ಮತದಾರರಿಗೆ ಮಾಡಿದ ಅವಮಾನವಾಗಿದೆ. ಮಾಜಿ ಶಾಸಕನಾದ ನನಗೆ ಆಹ್ವಾನ ಇರಲಿಲ್ಲ. ವೈಯಕ್ತಿಕ ಪಾಸ್ ಕೇಳಿದಾಗ ಹಗರಿಬೊಮ್ಮನಹಳ್ಳಿ ತಹಸೀಲ್ದಾರ್ ಏನ್ಮಾಡ್ತೀರಾ? ಜಿಲ್ಲಾಧಿಕಾರಿಗಳಿಗೆ ಹೇಳ್ತೀರಾ ಹೇಳ್ಕೊ ಹೋಗಿ ಎಂದು ಏರುಧ್ವನಿಯಲ್ಲಿಯೇ ಹೇಳಿದ್ದಾರೆ. ಈ ಬಾರಿಯ ಹಂಪಿ ಉತ್ಸವವು ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಜಿಲ್ಲಾಧಿಕಾರಿಗಳ ಉತ್ಸವವಾಗಿತ್ತು ಎಂದು ದೂರಿದರು.
ಪಕ್ಷದ ಜಿಲ್ಲಾ ಉಪಾಧ್ಯಕ್ಷ ಕೆ.ಎಂ. ಹಾಲಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿನಾಯಕ ಶೆಟ್ಟರ್, ಸಿ. ಖಾಜಾ ಹುಸೇನ್, ಮುಖಂಡರಾದ ಡಿ. ವೆಂಕಟರಮಣ, ತಮನಳೇಪ್ಪ, ಮರಡಿ ಮಂಜುನಾಥ, ಇಂದುಮತಿ, ಸಂಗಪ್ಪ, ನಗರಸಭೆ ಸದಸ್ಯ ಕೆ.ಗೌಸ್ ಮತ್ತಿತರರಿದ್ದರು.