ವಿಶೇಷ ಮಕ್ಕಳಿಂದ ಅದ್ಭುತ ನೃತ್ಯ ಪ್ರದರ್ಶನ

KannadaprabhaNewsNetwork |  
Published : Feb 07, 2026, 01:15 AM IST
11 | Kannada Prabha

ಸಾರಾಂಶ

ಮೊದಲು ಪುಟಾಣಿಗಳು ಸಾಮಾಜಿಕ ನೃತ್ಯ ಪ್ರದರ್ಶಿಸಿದರು. ನಂತರ ಇತರೆ ವಿದ್ಯಾರ್ಥಿಗಳು ಭರತನಾಟ್ಯ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ನೃತ್ಯ, ಯಕ್ಷಗಾನ ಪ್ರದರ್ಶಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರುಮೈತ್ರಿ ಚಾರಿಟಬಲ್‌ ಟ್ರಸ್ಟ್‌ ನಡೆಸುತ್ತಿರುವ ವಿಶೇಷ ಶಾಲೆಯ 44ನೇ ವಾರ್ಷಿಕೋತ್ಸವವು ಶುಕ್ರವಾರ ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ಗಾನಭಾರತೀಯ ರಮಾಗೋವಿಂದ ವೇದಿಕೆಯಲ್ಲಿ ಜರುಗಿತು. ಮಕ್ಕಳು ಜಾನಪದ, ಯಕ್ಷಗಾನ ಸೇರಿದಂತೆ ವಿವಿಧ ನೃತ್ಯಗಳನ್ನು ಪ್ರದರ್ಶಿಸಿ, ಸಭಿಕರನ್ನು ನಿಬ್ಬೆರಗಾಗಿಸಿದರು.ಮೊದಲು ಪುಟಾಣಿಗಳು ಸಾಮಾಜಿಕ ನೃತ್ಯ ಪ್ರದರ್ಶಿಸಿದರು. ನಂತರ ಇತರೆ ವಿದ್ಯಾರ್ಥಿಗಳು ಭರತನಾಟ್ಯ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ನೃತ್ಯ, ಯಕ್ಷಗಾನ ಪ್ರದರ್ಶಿಸಿದರು. ಅವರ ನೃತ್ಯವನ್ನು ನೋಡಿದ ಸಭಿಕರು ಕರತಾಡನ ಮಾಡುತ್ತಾ, ಪ್ರೋತ್ಸಾಹಿಸಿದರು.ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲಾ ಸರಿ ಇರುವವರಿಗಿಂತ ವಿಶೇಷ ಮಕ್ಕಳಲ್ಲಿ ಅಗಾಧವಾದ ಪ್ರತಿಭೆ ಇರುತ್ತದೆ. ಇದಕ್ಕೆ ಹಲವಾರು ನಿದರ್ಶನಗಳಿವೆ. ಇವರು ಅನುಕಂಪಕ್ಕಿಂತ ಅವಕಾಶಗಳನ್ನು ಬಯಸುತ್ತಾರೆ. ಹೀಗಾಗಿ ಸಮಾಜ, ಸಂಘಸಂಸ್ಥೆಗಳು ಹಾಗೂ ಸರ್ಕಾರ ಇಂಥವರಿಗೆ ಪ್ರೋತ್ಸಾಹ ನೀಡಬೇಕು ಎಂದರು.ವಿಶೇಷ ಮಕ್ಕಳ ನಿರ್ವಹಣೆಗೆ ಮಾತೃಹೃದಯ ಇರಬೇಕು. ಇಲ್ಲಿನ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಅತ್ಯಂತ ತಾಳ್ಮೆ, ಸಂಯಮದಿಂದ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡು ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ ಅಧ್ಯಕ್ಷ ರವೀಂದ್ರ ಜೋಶಿ ಮಾತನಾಡಿ, ಪ್ರೊ.ಎನ್‌. ವೆಂಕೋಬರಾವ್‌ ಹಾಗೂ ಅವರ ಪತ್ನಿ ಮಾಯಾದೇವಿ ಅವರು 44 ವರ್ಷಗಳ ಹಿಂದೆ ಈ ವಿಶೇಷ ಮಕ್ಕಳ ಶಾಲೆಯನ್ನು ಆರಂಭಿಸಿದರು. ಅಟಲ್‌ ಬಿಹಾರಿ ವಾಜಪೇಯಿ, ಲಾಲ್‌ ಕೃಷ್ಣ ಆಡ್ವಾಣಿ ಸೇರಿದಂತೆ ಹಲವಾರು ರಾಷ್ಟ್ರ ನಾಯಕರ ನಿಕಟ ಸಂಪಕ್ಕ ಇದ್ದರೂ ಯಾರ ಬಳಿಯೂ ನೆರವು ಕೇಳಲಿಲ್ಲ. ಬದಲಿಗೆ ಪ್ರೊ.ವೆಂಕೋಬರಾವ್‌ ಅವರು ತಮಗೆ ಬರುತ್ತಿದ್ದ ಪಿಂಚಣಿ ಹಣದಲ್ಲಿಯೇ ಶಾಲೆಯನ್ನು ನಡೆಸಿಕೊಂಡು ಬಂದರು ಎಂದು ಸ್ಮರಿಸಿದರು.ಪ್ರೊ.ವೆಂಕೋಬರಾವ್‌ ಹಾಗೂ ರಾಜಶೇಖರ ಕೋಟಿ ಅವರಿಂದಾಗಿ ನಾನು ಸಮಾಜಸೇವೆಯಲ್ಲಿ ಗುರುತಿಸಿಕೊಳ್ಳುವಂತೆ ಆಗಿದೆ. ವೆಂಕೋಬರಾವ್‌ ಅವರು ಕಟ್ಟಿದ ಈ ಸಂಸ್ಥೆಯನ್ನು ಎಲ್ಲಾ ಟ್ರಸ್ಟಿಗಳ ಸಹಕಾರದಿಂದ ಮುನ್ನಡೆಸುತ್ತಿದ್ದೇವೆ. ಇತ್ತೀಚೆಗೆ ಸರ್ಕಾರದ ಅನುದಾನಕ್ಕೂ ಒಳಪಟ್ಟಿದೆ ಎಂದರು.ಟ್ರಸ್ಟಿನ ಮ್ಯಾನೇಜಿಂಗ್‌ ಟ್ರಸ್ಟಿ ಪೃಥ್ವಿ ಸುಧೀಂದರ್‌ ಮಾತನಾಡಿ, ಮಕ್ಕಳಿಗೆ ದೀಪ, ಪೇಪರ್‌ ಬ್ಯಾಗ್‌, ಎನ್‌ಲೋಪ್‌ ಕವರ್‌ಗಳು, ಚಿತ್ರಕಲೆಯನ್ನು ಕಲಿಸಲಾಗುತ್ತದೆ. ವಿವಿಧೆಡೆ ಪ್ರದರ್ಶನ ಮಾಡುತ್ತೇವೆ. ಮದುವೆ ಮತ್ತಿತರ ಸಮಾರಂಭಗಳಿಗೆ ಫಲತಾಂಬೂಲ ನೀಡಲು ಯಾರಾದರೂ ಬೇಡಿಕೆ ಇಟ್ಟರೆ ಮಾಡಿಕೊಡುತ್ತೇವೆ. ಅದರಿಂದ ಬಂದ ಹಣದಿಂದ ಮಕ್ಕಳಿಗೆ ಬಹುಮಾನ ನೀಡುತ್ತಿದ್ದೇವೆ ಎಂದರು.ಉದ್ಯಮಿ ಎಂ. ಜಗನ್ನಾಥ ಶೆಣೈ ಬಹುಮಾನ ವಿತರಿಸಿದರು. ಟ್ರಸ್ಟಿಗಳಾದ ಪ್ರವೀಣ್‌ ಪಾಲ್‌, ಅಂಜಲಿ ಮಾತನಾಡಿದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಕೆ.ಎಸ್. ರಾಘವೇಂದ್ರ. ಡಾ.ಹರ್ಲೆ, ಡಾ.ಚನ್ನಕೇಶವ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಕ್ಷ್ಮೀ ಹೆಬ್ಬಾಳಕರ್‌ ಬ್ಯಾಟಿಂಗ್‌ಗೆ ಶಾಸಕ ಆಸೀಫ್ ಸೇಠ್ ಬೋಲ್ಡ್‌
ಮೆಟ್ರೋ ದರ ಏರಿಸಿದ್ದು ನಾವಲ್ಲ, ಕೇಂದ್ರ : ಸಿಎಂ ಸಿದ್ದರಾಮಯ್ಯ