ಗಾಣಗಾಪುರ: ದತ್ತಮಂದಿರ ಗರ್ಭಗುಡಿಯಲ್ಲಿ ಜಹಾಗಿರದಾರರ ಪೂಜೆ

KannadaprabhaNewsNetwork |  
Published : Nov 08, 2026, 02:00 AM IST
ಫೋಟೋ- ಗಾಣಗಾಪುರ 1 ಮತ್ತು ಗಾಣಗಪೂರ 2 | Kannada Prabha

ಸಾರಾಂಶ

ಅಫಜಲಪುರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದಲ್ಲಿ ಗರ್ಭಗುಡಿ ಪ್ರವೇಶದ ವಿಚಾರ ವಿವಾದಕ್ಕೆ ಕಾರಣವಾಗಿದೆ. ಏತನ್ಮಧ್ಯೆ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಚವಡಾಪುರದ ಜಹಾಗಿರದಾರ್ ಕುಟುಂಬದವರು ಶುಕ್ರವಾರ ಪೊಲೀಸ್ ಬಂದೋಬಸ್ತ್‌ನಲ್ಲಿ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿ ಪಾದುಕೆ ಹಾಗೂ ಮೂಲವಿಗ್ರಹಕ್ಕೆ ಪೂಜೆ ಸಲ್ಲಿಸಿ ಮಹಾನೈವೇದ್ಯ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ದೇವಲ ಗಾಣಗಾಪೂರಅಫಜಲಪುರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದಲ್ಲಿ ಗರ್ಭಗುಡಿ ಪ್ರವೇಶದ ವಿಚಾರ ವಿವಾದಕ್ಕೆ ಕಾರಣವಾಗಿದೆ. ಏತನ್ಮಧ್ಯೆ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಚವಡಾಪುರದ ಜಹಾಗಿರದಾರ್ ಕುಟುಂಬದವರು ಶುಕ್ರವಾರ ಪೊಲೀಸ್ ಬಂದೋಬಸ್ತ್‌ನಲ್ಲಿ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿ ಪಾದುಕೆ ಹಾಗೂ ಮೂಲವಿಗ್ರಹಕ್ಕೆ ಪೂಜೆ ಸಲ್ಲಿಸಿ ಮಹಾನೈವೇದ್ಯ ನೆರವೇರಿಸಿದರು. ಮತ್ತೊಂದೆಡೆ, ಅರ್ಚಕರಲ್ಲದವರ ಗರ್ಭಗುಡಿ ಪ್ರವೇಶದಿಂದ ಕ್ಷೇತ್ರದ ಸಂಪ್ರದಾಯ ಮತ್ತು ಪಾವಿತ್ರ್ಯಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿ ಅರ್ಚಕರು ಧರಣಿ ನಡೆಸಿ ಆಕ್ಷೇಪ ವ್ಯಕ್ತಪಡಿಸಿದರು.ದೇವಸ್ಥಾನದ ಗರ್ಭಗುಡಿಗೆ ಪ್ರವೇಶಿಸಿ ನಿರ್ಗುಣ ಪಾದುಕೆ ಹಾಗೂ ಮೂಲವಿಗ್ರಹ ಸ್ಪರ್ಶಿಸಿ ಪೂಜೆ ಸಲ್ಲಿಸುವುದು ಮೂಲ ಅರ್ಚಕರ ಕುಟುಂಬದ ಪರಂಪರೆ. ಆದರೆ, ಇತ್ತೀಚೆಗೆ ಜಹಾಗಿರದಾರ್ ಕುಟುಂಬದವರು ಗರ್ಭಗುಡಿ ಪ್ರವೇಶಿಸುವ ವಿಚಾರವಾಗಿ ಅರ್ಚಕರು ಮತ್ತು ಕುಟುಂಬದವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ತಿಂಗಳ ಹಿಂದೆ ಶ್ರೀಪಾದ ಜಹಾಗಿರದಾರ್, ನಿರಂಜನ್ ಜಹಾಗಿರದಾರ್ ಹಾಗೂ ಹೃಷಿಕೇಶ ಜಹಾಗಿರದಾರ್ ಅವರು ಗರ್ಭಗುಡಿ ಪ್ರವೇಶದ ವಿಚಾರವಾಗಿ ಅರ್ಚಕರೊಂದಿಗೆ ವಾಗ್ವಾದ ನಡೆಸಿದ್ದರು.ಈ ಘಟನೆ ಖಂಡಿಸಿದ್ದ ಸಾಲಕಾರಿ ಕಾರ್ಯದರ್ಶಿ ಪ್ರಿಯಾಂಕ್ ಪೂಜಾರಿ ಹಾಗೂ ಅರ್ಚಕರಾದ ಪ್ರಖ್ಯಾತ್ ಪೂಜಾರಿ, ಮನೋಹರ್ ಪೂಜಾರಿ ಮತ್ತು ಹೋಹಿತ್ ಪೂಜಾರಿ ಅವರು ಗರ್ಭಗುಡಿಗೆ ಅನಧಿಕೃತ ಪ್ರವೇಶ, ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಜೀವಬೆದರಿಕೆ ಆರೋಪದಡಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿದ್ದರು. ಅಲ್ಲದೆ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಯಿಂದಲೂ ಅರ್ಚಕರಲ್ಲದವರು ಗರ್ಭಗುಡಿ ಪ್ರವೇಶಿಸಲು ಯತ್ನಿಸಿ ವಾಗ್ವಾದ ನಡೆಸಿದವರ ವಿರುದ್ಧ ಕಲಂ 107ರ ಅಡಿ ಕ್ರಮ ಕೈಗೊಳ್ಳುವಂತೆ ದೇವಲ ಗಾಣಗಾಪುರ ಪೊಲೀಸ್ ಠಾಣೆಗೆ ಪತ್ರ ಬರೆಯಲಾಗಿತ್ತು. ಆದರೆ, ಈವರೆಗೆ ದೂರಿನ ಆಧಾರದ ಮೇಲೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಸಾಲಕಾರಿ ಕಾರ್ಯದರ್ಶಿ ಪ್ರಿಯಾಂಕ್ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇನ್ನೂ ಮುಂದೆ ಅಧಿಕೃತ ಅರ್ಚಕರಲ್ಲದವರು ಗರ್ಭಗುಡಿ ಪ್ರವೇಶಿಸುವುದನ್ನು ತಡೆಯಲು ಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ. ಇದೀಗ ನ್ಯಾಯಾಲಯದ ಆದೇಶದಂತೆ ಜಹಾಗಿರದಾರ್ ಕುಟುಂಬದವರಿಗೆ ಗರ್ಭಗುಡಿ ಪ್ರವೇಶಿಸಿ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ತಹಸೀಲ್ದಾರ್ ಸಂಜೀವಕುಮಾರ ದಾಸರ್, ಸಿಪಿಐ ಲಖನ್ ಮಸಗುಪ್ಪಿ, ಪಿಎಸ್‌ಐ ಕು. ಸಂಗೀತಾ ಸಿಂಧೇ, ಎಎಸ್‌ಐ ಬಾಬುರಾವ್ ಹಿಂಚಗೇರಿ, ಹಾಗೂ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶಿವಕಾಂತಮ್ಮ, ಸಿಬ್ಬಂದಿ ದತ್ತು ನಿಂಬರ್ಗಿ ಸೇರಿದಂತೆ ಅರ್ಚಕ ವರ್ಗದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿ ಹೃದಯದ ಡಾ.ಚೆನ್ನಬಸವ ಶ್ರೀಗಳು: ತೋಂಟದಾರ್ಯ ಶ್ರೀ
ಶಿರಗುಪ್ಪಿ ಕಾರ್ಖಾನೆಯಿಂದ ₹4,000 ದರ ಘೋಷಣೆ