ಸಿದ್ದಾಪುರ: ಗಣಪತಿ ಹೆಗಡೆ ವಡ್ಡಿನಗದ್ದೆ ಅವರ ಪರಿಸರದ ಕುರಿತಾದ ಕಾಳಜಿ ಅಪರೂಪವಾದದ್ದು. ಅವರದ್ದು ಪರಿಸರ ಮತ್ತು ಪ್ರಕೃತಿಗೆ ನೀಡುತ್ತಿರುವ ವಿಶಿಷ್ಟ ಸೇವೆ ಎಂದು ಸಿದ್ದಾಪುರ ವಲಯದ ವಲಯ ಅರಣ್ಯಾಧಿಕಾರಿ ಅಜಯಕುಮಾರ ಎಂ.ಎಸ್. ಹೇಳಿದರು.
ಗಣಪತಿ ಹೆಗಡೆ ವಡ್ಡಿನದ್ದೆಯವರು ಅಪರೂಪದ ಸಸ್ಯ, ಬಳ್ಳಿಗಳ ಸಂರಕ್ಷಣೆಗೆ ಪಣ ತೊಟ್ಟು ಬರ್ಕಬಾಳೆ ಮಾತ್ರವಲ್ಲದೇ ವಿನಾಶದಂಚಿನಲ್ಲಿರುವ ಹಲವಾರು ಪ್ರಭೇದದ ಸಸ್ಯಗಳನ್ನು ಸಂರಕ್ಷಿಸುತ್ತಿದ್ದಾರೆ. ಅವರ ಈ ಕಾರ್ಯ ಮಾದರಿಯಾದುದು. ನಮ್ಮ ಸುತ್ತಲಿನ ವಾತಾವರಣ ಪರಿಶುದ್ಧವಾಗಿದ್ದರೆ ನಾವು ಆರೋಗ್ಯಕರ ಜೀವನ ನಡೆಸಲು ಸಾಧ್ಯ. ಗಿಡ-ಮರ ಸಂರಕ್ಷಿಸುವ ಜತೆಗೆ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವತ್ತ ಗಮನವಹಿಸಬೇಕು ಎಂದರು.
ಪರಿಸರ ತಜ್ಞ ಎಂ.ಬಿ. ನಾಯ್ಕ ಕಡಕೇರಿ ಮಾತನಾಡಿ, ಇಂದು ಮನುಷ್ಯ ತನ್ನ ಸ್ವಾರ್ಥ ಸಾಧನೆಗಾಗಿ ನಮಗೆ ಅತ್ಯಗತ್ಯವಿರುವ ಪರಿಸರವನ್ನೇ ನಾಶ ಮಾಡುತ್ತಿದ್ದಾನೆ. ಕಾಡಿನಲ್ಲಿ ಅನೇಕ ಉಪಯುಕ್ತ ಮರಗಳು ಇಂದು ನಾಶವಾಗುತ್ತಿವೆ. ವಿಶಿಷ್ಟ ಪ್ರಭೇದದ ಮರಗಳು ನಾಶವಾದರೆ ಅವುಗಳನ್ನು ಅವಲಂಬಿಸಿರುವ ಪ್ರಾಣಿ-ಪಕ್ಷಿಗಳೂ ಕೂಡ ಅವನತಿ ಹೊಂದುತ್ತವೆ. ಬರ್ಕ ಬಾಳೆ ಸಸ್ಯ ಇಂದು ಅವನತಿಯತ್ತ ಸಾಗುತ್ತಿರುವುದರಿಂದ ಅದನ್ನು ಅವಲಂಬಿಸಿದ್ದ ಬರ್ಕ ಎನ್ನುವ ಪ್ರಾಣಿಯೂ ಕೂಡ ಇಂದು ವಿರಳವಾಗುತ್ತಿದೆ. ಆದ್ದರಿಂದ ನಮ್ಮ ಪರಿಸರ, ಗಿಡ-ಮರ ಕಾಪಾಡಿಕೊಳ್ಳುವುದು ಇಂದಿನ ಅನಿವಾರ್ಯತೆಯಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಭಾಗಿಯಾದ ಸ್ಥಳೀಯ ಲಯನ್ಸ್ ಕ್ಲಬ್ ಅಧ್ಯಕ್ಷ ರಾಘವೇಂದ್ರ ಭಟ್ಟ ಕಲ್ಲಾಳ, ಸಂಕಲ್ಪ ಸೇವಾ ಸಂಸ್ಥೆಯ ಪಿ.ಬಿ. ಹೊಸೂರು, ಸಾಹಿತಿ, ಪತ್ರಕರ್ತ ಗಂಗಾಧರ ಕೊಳಗಿ, ಪತ್ರಕರ್ತ ಸುಜಯ ಭಟ್ಟ ಮಾತನಾಡಿದರು. ಸಿದ್ದಾಪುರ ಅರಣ್ಯ ಇಲಾಖೆಯ ವನಪಾಲಕಿ ಅಕ್ಷತಾ ನಾಯ್ಕ ಇದ್ದರು.
ಗಣಪತಿ ಹೆಗಡೆ ವಡ್ಡಿನದ್ದೆ ಪ್ರಾಸ್ತಾವಿಕ ಮಾತನಾಡಿದರು. ಕಾಂತಾರ ಯಜ್ಞ ಸಂಸ್ಥೆಯ ಮಂಜುನಾಥ ಹೆಗಡೆ ಕೆರೆಕೊಪ್ಪ ಸ್ವಾಗತಿಸಿ, ನಿರೂಪಿಸಿದರು.