ಅರಸೀಕೆರೆ: ಲೋಕಕಲ್ಯಾಣಾರ್ಥವಾಗಿ ನಗರದ ಅರಸೀ ಕಾಳಿಕಾಂಬ ದೇವಾಲಯದಲ್ಲಿ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಹಾಗೂ ಅರಸೀ ಕಾಳಿಕಾಂಬ ಆಶ್ರಮದ ಋಷಿಕುಮಾರ್ ಸ್ವಾಮೀಜಿಯವರ ನೇತೃತ್ವದಲ್ಲಿ ಗಣಪತಿ ಹೋಮ, ನವಗ್ರಹ ಹೋಮ ಹಾಗೂ ಚಂಡಿಕಾ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು.
ಪೂರ್ಣಾಹುತಿ ಕಾರ್ಯಕ್ರಮದ ಬಳಿಕ ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿದ ಕೋಡಿಮಠದ ಶ್ರೀಗಳು, ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಯಾವುದೇ ಧರ್ಮವಾಗಿರಲಿ, ಎಲ್ಲ ಧರ್ಮಗಳ ಮೂಲ ಆಶಯವೂ ಮನುಕುಲದ ಶಾಂತಿ ಮತ್ತು ಸೌಹಾರ್ದತೆಯನ್ನು ಬಯಸುವುದೇ ಆಗಿದೆ. ಈ ನಿಟ್ಟಿನಲ್ಲಿ ಅರಸೀ ಕಾಳಿಕಾಂಬ ದೇವಾಲಯದ ಋಷಿಕುಮಾರ್ ಸ್ವಾಮೀಜಿಯವರು ಸಮಾಜದ ಒಳಿತಿಗಾಗಿ ನಿರಂತರವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಅರಸೀ ಕಾಳಿಕಾಂಬ ಆಶ್ರಮದ ಋಷಿಕುಮಾರ್ ಸ್ವಾಮೀಜಿಯವರು, ಕ್ಷೇತ್ರದೇವತೆ ಅರಸೀ ಕಾಳಿಕಾಂಬೆಯ ಅನುಗ್ರಹ ಹಾಗೂ ತಮ್ಮ ನೆಚ್ಚಿನ ಗುರುಗಳಾದ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಯವರ ಆಶೀರ್ವಾದದಿಂದ ಶ್ರೀಕ್ಷೇತ್ರವು ದಿನದಿಂದ ದಿನಕ್ಕೆ ನಾಡಿನ ಪ್ರಮುಖ ಪವಿತ್ರ ಧಾರ್ಮಿಕ ಯಾತ್ರಾಸ್ಥಳವಾಗಿ ಬೆಳೆಯುತ್ತಿದೆ. ಜೀವನದಲ್ಲಿ ಕಷ್ಟ, ನಷ್ಟ, ನೋವು ಹಾಗೂ ಸಂಕಷ್ಟಗಳನ್ನು ಎದುರಿಸುತ್ತಿರುವ ಅನೇಕ ಭಕ್ತರು ದೇವಿಯ ದರ್ಶನ ಮತ್ತು ಆಶೀರ್ವಾದದಿಂದ ನೆಮ್ಮದಿ ಹಾಗೂ ಆತ್ಮಸ್ಥೈರ್ಯ ಪಡೆಯುತ್ತಿರುವುದು ದೇವಿಯ ಮಹಿಮೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.ಪೂರ್ಣಾಹುತಿ ಕಾರ್ಯಕ್ರಮದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಅರಸೀ ಕಾಳಿಕಾಂಬ ಕ್ಷೇತ್ರದ ನೂರಾರು ಭಕ್ತರು ಉಪಸ್ಥಿತರಿದ್ದರು. ಧಾರ್ಮಿಕ ಕಾರ್ಯಕ್ರಮದ ಬಳಿಕ ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು.