- ಸುಂಕದ ಕಟ್ಟೆಯಲ್ಲಿ 21 ನೇ ಗಣೇಶೋತ್ಸವದಲ್ಲಿ ಸಾಧಕರಿಗೆ ಸನ್ಮಾನ। ಸಭಾ ಭವನ ಉದ್ಘಾಟನೆ
ಬಾಲ ಗಂಗಾಧರ ತಿಲಕ್ ಅವರು ಸಾಮೂಹಿಕ ಗಣೇಶೋತ್ಸವನ್ನು ಸ್ವಾತಂತ್ರ ಹೋರಾಟದ ಸಮಯದಲ್ಲೂ ಹಿಂದೂಗಳ ಸಂಘಟನೆಗೆ ಬಳಸಿಕೊಂಡು ಗಣಪತಿ ಆಶೀರ್ವಾದ ಪಡೆಯಲಾಗಿತ್ತು ಎಂದು ಸಿಂಹನಗದ್ದೆ ಬಸ್ತಿಮಠದ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ತಿಳಿಸಿದರು.
ಶುಕ್ರವಾರ ರಾತ್ರಿ ಪಟ್ಟಣದ ಸುಂಕದ ಕಟ್ಟೆ ಯುವಕ ಸಂಘ ಆಯೋಜಿಸಿದ್ದ 21ನೇ ಗಣೇಶೋತ್ಸವದಲ್ಲಿ ಸುಂಕದಕಟ್ಟೆ ದೃಷ್ಠಿ ಕಲ್ಲು ಮಾರಿ ಗದ್ದುಗೆ ಸಮುದಾಯ ಭವನ ಉದ್ಘಾಟನೆ, ಸಾಧಕರಿಗೆ ಸನ್ಮಾನ, ಶಿವಧೂತ ಗುಳಿಗ ನಾಟಕ ಉದ್ಘಾಟಿಸಿ ಆಶೀರ್ವಾಚನ ನೀಡಿದರು. ಭಾರತೀಯರಾದ ನಾವು ಸನಾತನ ಧರ್ಮದಲ್ಲಿ ಹೆಜ್ಜೆ ಹಾಕುತ್ತಿದ್ದೇವೆ. ಗಣೇಶ ನನ್ನು ಬಪ್ಪ ಎಂದು ಕರೆಯುತ್ತೇವೆ. ಗಣೇಶ ದೇವರಾಗಿ, ಮಿತ್ರರಾಗಿ, ಸಾತ್ವಿಕ ಸಮಾಜ ಸೃಷ್ಠಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ ಎಂದರು.ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ ಸುಂಕದ ಕಟ್ಟೆ ಯುವಕ ಸಂಘದವರು ಸಮಾಜ ಮುಖಿ ಕೆಲಸ ಮಾಡುತ್ತಿದ್ದಾರೆ.ಎಲ್ಲಾ ವಿಘ್ನಗಳ ನಿವಾರಕ ವಿಘ್ನೇಶ್ವರನು ಎಲ್ಲಾ ಸಂಕಷ್ಟ ಪರಿಹರಿಸುತ್ತಾನೆ. ಶೃಂಗೇರಿ ಕ್ಷೇತ್ರದ ಅಭಿವೃದ್ಧಿಗೆ ನಾನು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇನೆ. ಸುಂಕದಕಟ್ಟೆಯಲ್ಲಿ ದೃಷ್ಠಿ ಕಲ್ಲು ಮಾರಿ ಗದ್ದಿಗೆ ಸಮು ದಾಯ ಭವನಕ್ಕೆ ₹25 ಲಕ್ಷ ನೀಡಿದ್ದೇನೆ. ಇಂದು ಬಸ್ತಿಮಠದ ಶ್ರೀಗಳ ಸಾನ್ನಿಧ್ಯದಲ್ಲಿ ಉದ್ಘಾಟಿಸಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಪುಷ್ಪ ಆಸ್ಪತ್ರೆ ಪ್ರಸೂತಿ ತಜ್ಞೆ ಡಾ.ಮೇರಿ ಸೂಸನ್ನ, ಮಲ್ಪೆಯ ಈಜು ತಜ್ಞ ಈಶ್ವರ ಮಲ್ಪೆ,ಕಲಾವಿದೆ ರೂಪ ಅವರನ್ನು ಸನ್ಮಾನಿಸಲಾಯಿತು. ಕು.ವಿಶ್ರೇಯ ಪ್ರಾರ್ಥಿಸಿದರು.ಅಭಿನವ ಗಿರಿರಾಜ್ ಸ್ವಾಗತಿಸಿದರು.ಸುನೀತ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ಸಮಾರಂಭಕ್ಕೆ ಆಗಮಿಸಿದ ಬಸ್ತಿಮಠದ ಶ್ರೀಗಳು, ಶಾಸಕ ಟಿ.ಡಿ.ರಾಜೇಗೌಡ ಹಾಗೂ ಇತರ ಅತಿಥಿಗಳಿಗೆ ಸ್ಥಳೀಯ ಮಹಿಳೆಯರು ಪೂರ್ಣ ಕುಂಬದೊಂದಿಗೆ ಸ್ವಾಗತಿಸಿದರು.ಮುಖ್ಯ ರಸ್ತೆಯಿಂದ ಸುಂಕದಕಟ್ಟೆ ದೃಷ್ಠಿ ಕಲ್ಲು ಮಾರಿ ಗದ್ದುಗೆ ಸಭಾ ಭವನದವರೆಗೆ ಚಂಡೆ, ವಾದ್ಯದೊಂದಿಗೆ ಮೆರವಣಿಗೆ ನಡೆಯಿತು.