ಕನ್ನಡಪ್ರಭ ವಾರ್ತೆ ಕಮಲಾಪುರ
ಪ್ರಸ್ತುತ ವರ್ಷದ ಮಳೆ ಇಲ್ಲದೆ ರೈತರ ಬೆಳೆಗಳು ಸಂಪೂರ್ಣ ಬಾಡಿ ಹೋಗಿ ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂತೆ ಪರದಾಡುವಂತಹ ಪರಿಸ್ಥಿತಿ ಇದ್ದು, ಎಡದಂಡೆ ನೀರಿನ ವ್ಯರ್ಥ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ. ಸಾರ್ವಜನಿಕರು ಕೆಟ್ಟುಹೋದ ಗೇಟ್ ದುರಸ್ತಿಗೊಳಿಸುವಂತೆ ಸಾಕಷ್ಟು ಮನವಿ ಮಾಡಿದ್ದರೂ ಅಧಿಕಾರಿಗಳು ತಮಗೂ ಅದಕ್ಕೂ ಸಂಬಂಧವಿಲ್ಲದಂತಿದ್ದಾರೆ. ರೈತರು ಈ ಕುರಿತು ಎಚ್ಚರಿಸಲು ಕರೆ ಮಾಡಿದರೆ ಸಂಬಂಧಿತ ಅಧಿಕಾರಿಗಳು ಕರೆ ಸ್ವೀಕರಿಸದೆ ನುಣುಚಿಕೊಳ್ಳುತ್ತಿದ್ದರೆ ಎಂದು ಸಾರ್ವಜನಿಕರು ದೂರಿದ್ದಾರೆ. ಕೂಡಲೇ ಎಡದಂಡೆಯ ಗೇಟ್ ಸರಿಪಡಿಸಬೇಕು, ತಪ್ಪಿದಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದು ರೈತರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಪ್ರಸ್ತುತ ವರ್ಷ ಮಳೆ ಇಲ್ಲದೆ ರೈತರು ಬಿತ್ತನೆಮಾಡಿದ ಬೆಳೆಗಳು ಸಂಪೂರ್ಣ ಬಾಡಿ ಹೋಗಿವೆ. ಜನ ಜಾನುವಾರುಗಳು ಕುಡಿಯಲು ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಇಲ್ಲದೆ ಬರಗಾಲ ಛಾಯೆ ಆವರಿಸಿದೆ. ಇಂತಹ ಸಂದರ್ಭ ನೀರು ಸಂರಕ್ಷಣೆ ಮಾಡಿಕೊಂಡು ಇಡಬೇಕಾದ ಅಧಿಕಾರಿಗಳ ಬೇಜವಾಬ್ದಾರಿತನದಿಂದ ನಿತ್ಯ ಸಾಕಷ್ಟು ನೀರು ವ್ಯರ್ಥವಾಗುತ್ತಿದ್ದು, ಒಂದು ವರ್ಷವಾದರೂ ಗೆಟ್ ದುರಸ್ಥಿಗೆ ಮುಂದಾಗಿಲ್ಲ. ಮುಂದಿನ ದಿನಗಳಲ್ಲಿ ರೈತರಿಗೆ ಜಾನುವಾರುಗಳಿಗೆ ನೀರಿನ ಸಮಸ್ಯೆ ಆದರೆ ಅಧಿಕಾರಿಗಳೇ ಹೊಣೆಗಾರರು ಎಂದು ಕಮಲಾಪುರ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸುಭಾಷ್ ಬಿರಾದಾರ ಎಚ್ಚರಿಸಿದರು.