ಸಂಡೂರು: ಸಂಡೂರಿನ ವಿವಿಧೆಡೆ ಬಹರೂಪಿ ಗಣಪನನ್ನು ಪ್ರತಿಷ್ಠಾಪಿಸಿ, ಅಲಂಕರಿಸಿ, ಪೂಜಿಸಿ ಸಂಭ್ರಮಿಸಲಾಯಿತು.
ಆಪರೇಷನ್ ಸಿಂದೂರ: ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ವೀರಶೈವ ವಿನಾಯಕ ತರುಣ ಸಂಘದವರು ಗಣೇಶನನ್ನು ಪ್ರತಿಷ್ಠಾಪಿಸಿರುವುದಲ್ಲದೆ, ಗಣೇಶನ ಬಳಿಯಲ್ಲಿ ಆಪರೇಷನ್ ಸಿಂಧೂರ, ೧೯೪೮ರಿಂದ ಇಲ್ಲಿಯವರೆಗೆ ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆದಿರುವ ಯುದ್ಧಗಳ ಮಾಹಿತಿಗೆ ಮೂರ್ತರೂಪ ನೀಡಿ, ಸುಂದರವಾಗಿ ಚಿತ್ರಿಸಿದ್ದಾರೆ.
ಗಣೇಶ ವಿಸರ್ಜನೆಗೆ ವ್ಯವಸ್ಥೆ ಕಲ್ಪಿಸಿದ ಪುರಸಭೆ: ಪುರಸಭೆಯಿಂದ ಪಟ್ಟಣದ ರಾಘವೇಂದ್ರಸ್ವಾಮಿ ಮಠದ ಬಳಿಯ ಬಾವಿಯ ಪಕ್ಕದಲ್ಲಿ ಕುಣಿ ತೋಡಿ, ಅದರಲ್ಲಿ ನೀರನ್ನು ಹಾಯಿಸಿ, ಗಣೇಶ ಮೂರ್ತಿಗಳ ವಿಸರ್ಜನೆಗೆ ಅವಕಾಶ ಕಲ್ಪಿಸಿದ್ದು ವಿಶೇಷವಾಗಿತ್ತು. ಮೊದಲ ದಿನವೇ ಗಣೇಶನನ್ನು ವಿಸರ್ಜನೆ ಮಾಡುವ ಕೆಲವರು ನಾರಿಹಳ್ಳದಲ್ಲಿ ಮೂರ್ತಿ ವಿಸರ್ಜನೆ ಮಾಡಿದ್ದು ಕಂಡು ಬಂದಿತು.ವೀಕ್ಷಣೆಗೆ ಮಳೆ ಅಡ್ಡಿ: ಬುಧವಾರ ಸಂಜೆ ಮಳೆ ಸುರಿದಿದ್ದರಿಂದ ಸಾರ್ವಜನಿಕರಿಗೆ ಗಣೇಶನ ಮೂರ್ತಿಗಳ ವೀಕ್ಷಣೆಗೆ ಕೆಲ ಸಮಯ ತೊಂದರೆಯಾಯಿತು. ಕೆಲವರು ಛತ್ರಿ ಹಿಡಿದು ತೆರಳಿ ವಿವಿಧೆಡೆ ಪ್ರತಿಷ್ಠಾಪನೆಗೊಂಡ ಗಣೇಶನ ಮೂರ್ತಿಗಳ ದರ್ಶನ ಪಡೆದರು.
ಮಳೆಯ ಸಿಂಚನದ ನಡುವೆಯೂ ಜನತೆ ಗಣೇಶನ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.ಇಲಿ ಮೂರ್ತಿಗೆ ಪೂಜೆ:
ಕೂಡ್ಲಿಗಿ ಸಮೀಪದ ಉಜ್ಜಿನಿ ಗ್ರಾಮದ ಶ್ರೀ ಸಾಲೇಶ್ವರ ದೇವಸ್ಥಾನದಲ್ಲಿ ನೇಕಾರ ಸಮುದಾಯದವರು ಇಲಿ ಮೂರ್ತಿ ಕೂರಿಸಿ ಪೂಜೆ ಸಲ್ಲಿಸಿದ್ದಾರೆ.ನೇಕಾರರು ತಮ್ಮ ಕುಲಕಸುಬಾದ ಬಟ್ಟೆ ನೇಯ್ಗೆಗೆ ತೊಂದರೆ ಬರದಿರಲಿ ಎಂದು ಬೇಡಿಕೊಳ್ಳುವ ಸಲುವಾಗಿ ಇಲ್ಲಿ ಗಣೇಶನ ಮೂರ್ತಿ ಬದಲು ಇಲಿರಾಯನ ಮೂರ್ತಿ ಕೂರಿಸುತ್ತಾರೆ. ನೂಲನ್ನು ಇಲಿಗಳು ಕಡಿದುಬಿಟ್ಟರೆ ಅವರ ಬದುಕು ಮೂರಾಬಟ್ಟೆಯಾಗುತ್ತದೆ. ಹಾಗಾಗಿ ಇಲಿರಾಯನಿಗೆ ದೇವರ ಸ್ಥಾನಮಾನ ನೀಡುತ್ತಾರೆ. ಪ್ರತಿವರ್ಷ ಗಣೇಶನ ಹಬ್ಬದ ಸಂದರ್ಭದಲ್ಲಿ 3 ದಿನಗಳ ಕಾಲ ಇಲಿರಾಯನ ಮೂರ್ತಿ ಪೂಜೆಸಿ ಪ್ರಾರ್ಥಿಸುತ್ತಾರೆ.ಇಲಿ ಮೂರ್ತಿ ಜತೆಗೆ ತಮಗೆ ಅನ್ನ ನೀಡುವ ಕೈಮಗ್ಗಕ್ಕೆ ಸಹ ಪೂಜೆ ಸಲ್ಲಿಸುತ್ತಾರೆ. ಆದರೆ ಯಾರೂ 3 ದಿನಗಳ ಕಾಲ ನೇಯ್ಗೆ ಮಾಡುವಂತಿಲ್ಲ, ನೇಯ್ಗೆ ಕೆಲಸ ಮಾಡಿದರೆ ಕೇಡಾಗುತ್ತದೆ, ಬೆಲೆಬಾಳುವ ರೇಷ್ಮೆ ನೂಲನ್ನು ವರ್ಷಪೂರ್ತಿ ಇಲಿರಾಯ ಕಡಿದು ಹಾಳು ಮಾಡುತ್ತಾನೆ ಎಂಬುದು ಇವರ ನಂಬಿಕೆಯಾಗಿದೆ.