ಹೊನ್ನಾವರ: ತಾಲೂಕಿನಲ್ಲಿ ಶುಕ್ರವಾರ ಭಾರೀ ಮಳೆಯಾಗಿದೆ. ಮಳೆ ಹಾಗೂ ಡ್ಯಾಂನಿಂದ ನೀರು ಬಿಟ್ಟ ಹಿನ್ನೆಲೆಯಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಎಡೆಬಿಡದೇ ಸುರಿದ ಮಳೆಗೆ ಜನತೆ ಹೈರಾಣಾಗಿದ್ದಾರೆ.
ತಾಲೂಕಾಡಳಿತ ಆಗಬಹುದಾದ ಅಪಾಯ ತಪ್ಪಿಸಲು 11 ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆದಿದೆ. ಈ 11 ಕೇಂದ್ರಗಳಲ್ಲಿ 129 ಕುಟುಂಬಗಳಿಂದ 368 ಜನರು ರಕ್ಷಣೆ ಪಡೆದಿದ್ದಾರೆ. ತಾಲೂಕಿನಲ್ಲಿ ಸರಳಗಿ, ಹೆರಂಗಡಿ, ಮೇಲಿನ ಇಡಗುಂಜಿ, ಜಲವಳ್ಳಿ, ಗುಂಡಬಾಳ, ಚಿಕ್ಕನಕೋಡ, ಹೊಸಾಕುಳಿ, ಖರ್ವಾ, ಮುಗ್ವಾ, ಬೇರೊಳ್ಳಿ, ಹಡಿನಬಾಳದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ.
ಇನ್ನು ಪ್ರವಾಹ ಪೀಡಿತ ಪ್ರದೇಶ ಕೊಡಾಣಿಗೆ ತಹಸೀಲ್ದಾರ್ ಭೇಟಿ ನೀಡಿದರು. ಪ್ರವಾಹ ಸಂದರ್ಭದಲ್ಲಿ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಿದರು. ಈ ವೇಳೆ ಅಧಿಕಾರಿಗಳು ತಹಸಿಲ್ದಾರ್ ಗೆ ಸಾಥ್ ನೀಡಿದರು.ಗೇರಸೊಪ್ಪದ ಬಸವನ ಬೆಟ್ಟ, ಜಲವಳ್ಳಿ, ಮಾಗೋಡ, ಹೆರಂಗಡಿ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಹೆಚ್ಚಿತ್ತು. ಇನ್ನು ಭಾಸ್ಕೇರಿ ಹೊಳೆ ತುಂಬಿ ಹರಿದಿದ್ದರಿಂದ ಗುಡ್ಡೆಬಾಳ, ಹೊಸಾಕುಳಿ, ಸಾಲ್ಕೊಡ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಭೂ ಕುಸಿತ:ಇನ್ನು ಮಳೆಯ ಅಬ್ಬರ ಜೋರಾಗಿದ್ದರಿಂದ ತಾಲೂಕಿನಲ್ಲಿ ಭೂ ಕುಸಿತವಾಗಿರುವ ವರದಿಗಳು ಬಂದಿವೆ. ಪಟ್ಟಣದ ಎಲ್‌ಐಸಿ ಕಟ್ಟಡದ ಸಮೀಪದ ಕರ್ನಲ್ ಕಂಬದ ಬಳಿ ಶುಕ್ರವಾರ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಧರೆ ಕುಸಿತವಾಗಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಣ್ಣು ಹಾಗೂ ಚಿಕ್ಕ ಪುಟ್ಟ ಮರಗಳು ಬಿದ್ದಿವೆ. ಆದರೆ ಮಣ್ಣು ಸಣ್ಣ ಪ್ರಮಾಣದಲ್ಲಿ ಕುಸಿದಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಓಡಾಟಕ್ಕೆ ಯಾವುದೇ ತೊಂದರೆ ಉಂಟಾಗಿಲ್ಲ.
ಇನ್ನು ತಾಲೂಕಿನ ಅರೆಅಂಗಡಿಯ ಸಮೀಪವಿರುವ ಕರಿಕಾನ ಪರಮೇಶ್ವರಿ ದೇವಾಲಯಕ್ಕೆ ಹೋಗುವ ರಸ್ತೆಯಲ್ಲಿಯೂ ಭೂ ಕುಸಿತ ಉಂಟಾಗಿದೆ. ಕರಿಕಾನ ದೇವಾಲಯಕ್ಕೆ ಹೋಗುವ ತೊಟ್ಲಗುಂಡಿ ಎಂಬಲ್ಲಿ ಡಾಂಬರು ರಸ್ತೆಯ ಭಾಗ ಕುಸಿದಿದ್ದು, ತಾತ್ಕಾಲಿಕವಾಗಿ ರಸ್ತೆಯನ್ನು ಬಂದ್ ಮಾಡಲಾಗಿದೆ.ಇನ್ನು ಗೇರುಸೊಪ್ಪದ ಡ್ಯಾಂನಿಂದ 1 ಲಕ್ಷ ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಡ್ಯಾಂನ ಸಮತೋಲನ ಕಾಪಾಡಲು ನಿರ್ಧರಿಸಿ ಹೆಚ್ಚುವರಿ 13 ಸಾವಿರ ಕ್ಯೂಸೆಕ್ಸ್ ನೀರನ್ನು ಡ್ಯಾಂನಿಂದ ಹೊರಬಿಡಲಾಗಿದೆ. ಹೆಚ್ಚುವರಿ ನೀರನ್ನು ಬಿಟ್ಟರೂ ಜನರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ನೋಡಿಕೊಳ್ಳಲು ತಹಸಿಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.