ಮನರೇಗಾ ಯೋಜನೆ ಹೆಸರು ಬದಲಿಸುವ ಮೂಲಕ ಮತ್ತೊಮ್ಮೆ ಗಾಂಧಿ ಹತ್ಯೆ

KannadaprabhaNewsNetwork |  
Published : Jan 16, 2026, 12:45 AM IST
ಮಯೂರ್ ಜಯಕುಮಾರ | Kannada Prabha

ಸಾರಾಂಶ

ಮನರೇಗಾ ಯೋಜನೆಯ ಮೂಲಕ 5-6 ಕೋಟಿ ಬಡ ಕುಟುಂಬಕ್ಕೆ ಉದ್ಯೋಗ ಕಲ್ಪಿಸಿದೆ. ಆದರೆ, ಈಗ ಕೇಂದ್ರ ಸರ್ಕಾರವು ಈ ಹೆಸರು ಬದಲಿಸುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದೆ.

ಹುಬ್ಬಳ್ಳಿ:

ಆರ್‌ಎಸ್‌ಎಸ್ ಸಂಘ ಪರಿವಾರವು ನಾಥುರಾಮ್ ಗೋಡ್ಸೆ ಮೂಲಕ 1948ರಲ್ಲಿ ಮಹಾತ್ಮ ಗಾಂಧೀಜಿ ಅವರನ್ನು ಹತ್ಯೆ ಮಾಡಿತ್ತು. ಈಗ ಮನರೇಗಾ ಯೋಜನೆಯ ಹೆಸರು ತಿರುಚುವ ಮೂಲಕ ಕೇಂದ್ರದಲ್ಲಿನ ಬಿಜೆಪಿ ಸರ್ಕಾರ 2ನೇ ಬಾರಿಗೆ ಅವರನ್ನು ಹತ್ಯೆ ಮಾಡಿದೆ ಎಂದು ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಉತ್ತರ ಕರ್ನಾಟಕದ ಉಸ್ತುವಾರಿ ಮಯೂರ್ ಜಯಕುಮಾರ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನರೇಗಾ ಯೋಜನೆಯ ಮೂಲಕ 5-6 ಕೋಟಿ ಬಡ ಕುಟುಂಬಕ್ಕೆ ಉದ್ಯೋಗ ಕಲ್ಪಿಸಿದೆ. ಆದರೆ, ಈಗ ಕೇಂದ್ರ ಸರ್ಕಾರವು ಈ ಹೆಸರು ಬದಲಿಸುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದೆ ಎಂದರು. ಇದಕ್ಕಾಗಿ ಪ್ರತ್ಯೇಕ ಅಧಿವೇಶನ ನಡೆಸಿ ಸಾಧಕ-ಬಾಧಕ ಚರ್ಚಿಸಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಯೋಜಿಸಿದೆ ಎಂದು ಹೇಳಿದರು.

ಚುನಾವಣೆಗೆ ಕಾಂಗ್ರೆಸ್‌ ಸಿದ್ಧ:

ಪದವೀಧರ ಕ್ಷೇತ್ರದ ಚುನಾವಣೆಗೆ ಕಾಂಗ್ರೆಸ್ ಸಂಪೂರ್ಣವಾಗಿ ಸಿದ್ಧಗೊಂಡಿದ್ದು, ಮೋಹನ್ ಲಿಂಬಿಕಾಯಿ ಅವರನ್ನು ಕಣಕ್ಕಿಳಿಸಿದ್ದು ಪಕ್ಷದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಗೆಲ್ಲುವ ವಿಶ್ವಾಸವಿದೆ ಎಂದರು.

ಹೋರಾಟಕ್ಕೆ ದಿನ ನಿಗದಿ:

ಮಹಾನಗರ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಲ್ತಾಫ ಹಳ್ಳೂರ ಮಾತನಾಡಿ, ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿರುವಂತೆ ಜಿ ರಾಮ್ ಜಿ ಯೋಜನೆ ಜಾರಿ ವಿರೋಧಿಸಿ ಪ್ರತಿ ಜಿಲ್ಲಾ ಕೇಂದ್ರದಲ್ಲಿ 10 ಕಿಮೀ ಪಾದಯಾತ್ರೆ, ಒಂದು ದಿನ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ. ಜಿಲ್ಲೆಯಲ್ಲಿ ಈ ಕುರಿತು ಮುಖಂಡರೊಂದಿಗೆ ಚರ್ಚಿಸಿ ದಿನಾಂಕ ನಿಗದಿಗೊಳಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ವಿಪಂ ಸದಸ್ಯ ಎಫ್.ಎಚ್‌. ಜಕ್ಕಪ್ಪನವರ, ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ, ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಮುಖಂಡರಾದ ಇಸ್ಮಾಯಿಲ್ ತಮಟಗಾರ, ದೀಪಕ ಚಿಂಚೋರೆ, ಸದಾನಂದ ಡಂಗನವರ, ಎಂ.ಎಸ್.ಅಕ್ಕಿ, ಅಲ್ತಾಫ ಕಿತ್ತೂರ, ಯೂಸೂಫ ಸವಣೂರ ಸೇರಿದಂತೆ ಹಲವರಿದ್ದರು.

ಪ್ರತ್ಯೇಕ ಅಧಿವೇಶನ: ಅಬ್ಬಯ್ಯ

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಮನರೇಗಾ ಹೆಸರು ತಿರುಚಿದ ವಿಚಾರಕ್ಕೆ ಸಂಬಂಧಿಸಿದಂತೆ ಸಮಗ್ರವಾಗಿ ಚರ್ಚಿಸಲು ಪ್ರತ್ಯೇಕ ಅಧಿವೇಶನ ಕರೆಯಲಾಗಿದೆ. ಒಂದು ವೇಳೆ ಬಿಜೆಪಿಗರು ಈ ಅಧಿವೇಶನಕ್ಕೆ ಹಾಜರಾಗದಿದ್ದರೆ, ಅದು ಅವರ ವೈಫಲ್ಯತೆ ಪ್ರದರ್ಶಿಸುತ್ತದೆ. ಹೀಗಾಗಿ ಅಧಿವೇಶನಕ್ಕೆ ಹಾಜರಾಗಿ ತಮ್ಮ ವಿಚಾರಧಾರೆ ಪ್ರತಿಪಾದಿಸಬೇಕು. ಇದನ್ನು ಬಿಟ್ಟು ದೂರ ಉಳಿದರೆ, ಅದನ್ನು ಸಮರ್ಥಿಸಿಕೊಳ್ಳಲು ಬಿಜೆಪಿಗರ ಬಳಿ ಉತ್ತರವೇ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀರಂಗಪಟ್ಟಣ: ಕೋಟ್ಪಾ ಕಾಯ್ದೆ ನಿಯಮದಡಿ ವಿಶೇಷ ಕಾರ್ಯಾಚರಣೆ
ಹಲಬೆರಕೆ ಹಾಲಿನ ಘಟಕದ ಮೇಲೆ ದಾಳಿ: ಐವರ ಬಂಧನ