ಕನ್ನಡಪ್ರಭ ವಾರ್ತೆ ಮದ್ದೂರು
ಗಾಂಧಿ ಬದುಕು, ವಿಚಾರಧಾರೆಗಳನ್ನು ಪ್ರತಿ ಮನೆ ಮನಗಳಿಗೆ ತಲುಪಿಸಬೇಕು. ಇಲ್ಲದಿದ್ದರೆ ಗಾಂಧಿ ಮತ್ತು ಇಂದಿನ ಯುವ ಜನಾಂಗದ ನಡುವೆ ಬಹಳ ದೊಡ್ಡ ಕಂದಕ ನಿರ್ಮಾಣ ಮಾಡಿದಂತಾಗುತ್ತದೆ. ಇಂದಿನ ಪೀಳಿಗೆಯಲ್ಲಿ ನಿಷೇಧಾತ್ಮಕ ಚಿಂತನಗಳು ಗಾಂಧಿಯ ಕುರಿತು ಮೂಡಲು ಕಾರಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಸ್ತುತ ಶಿಕ್ಷಕರು ಬೆಲ್ಲು ಬಿಲ್ಲುಗಳಿಗೆ ಸೀಮಿತವಾಗಿರುವ ದುರ್ದಿನಗಳನ್ನು ಕಾಣುತ್ತಿದ್ದೇವೆ. ಶಿಕ್ಷಣ ಸಂಸ್ಥೆಗಳು ಆಧ್ಯಾತ್ಮಿಕ ಕೇಂದ್ರಗಳಾಗಬೇಕು. ಮೌಲ್ಯ, ಸಚ್ಚಾರಿತ್ರ್ಯ, ಸುಸಂಸ್ಕೃತ, ಸಜ್ಜನರನ್ನು ರೂಪಿಸುವ ಕೆಲಸ ಮಾಡಬೇಕು. ಕಿತ್ತು ತಿನ್ನುವ ಪ್ರಪಂಚದಲ್ಲಿ ಪ್ರತಿಯೊಬ್ಬರಲ್ಲೂ ಪರಿವರ್ತನೆ ತರುವ, ಒಳ್ಳೆಯ ಚಿಂತನೆಗಳನ್ನು ಬಿತ್ತುವ ಕಾರ್ಯ ಮಾಡಬೇಕು ಎಂದರು.ಗಾಂಧಿ ಭವನಕ್ಕೆ ಉಚಿತ ನಿವೇಶನ:
ಸಂಸ್ಥೆ ಅಧ್ಯಕ್ಷ, ಮಾಜಿ ಶಾಸಕ ಬಿ.ರಾಮಕೃಷ್ಣ ಮಾತನಾಡಿ, ಗ್ರಾಮೀಣ ಭಾಗದ ಜನರಲ್ಲಿ ಗಾಂಧಿ ತತ್ವಗಳ ಅರಿವು ಮತ್ತು ಅನುಷ್ಠಾನ ಗೊಳಿಸು ಉದ್ದೇಶದಿಂದ ಸಂಸ್ಥೆ ಆವರಣದಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಉಚಿತವಾಗಿ ಅಗತ್ಯ ನಿವೇಶನ ಒದಗಿಸುವುದಾಗಿ ಹೇಳಿದರು.ಗಾಂಧಿ ಸ್ಮಾರಕ ಮಾನವ ಸಂಪನ್ಮೂಲ ಕೇಂದ್ರ ಸ್ಥಾಪಿಸಲು ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನೋಡೋಜ ಡಾ.ವೋಡೇ ಪಿ.ಕೃಷ್ಣ ಅವರಿಗೆ ಭವನ ನಿರ್ಮಾಣಕ್ಕೆ ನಿವೇಶನ ದೊರಕಿಸುವ ಭರವಸೆ ಪತ್ರ ಹಸ್ತಾಂತರಿಸಿ ಇದಕ್ಕೆ ಬೇಕಾದ 2 ಎಕರೆ ಭೂಮಿಯನ್ನು ಸಂಸ್ಥೆ ಉಚಿತವಾಗಿ ನೀಡಲಿದೆ ಎಂದು ಘೋಷಿಸಿದರು.
ಈ ಭಾಗದಲ್ಲಿ ಗಾಂಧಿ ಸ್ಮಾರಕ ಭವನ ನಿರ್ಮಾಣವಾದರೆ ಗಾಂಧಿ ವಿಚಾರಧಾರೆಗಳನ್ನು ಪಸರಿಸಲು ಸಾಧ್ಯ. ಸಂಸ್ಥೆ ಆವರಣದಲ್ಲಿ ಕೇವಲ ಗಾಂಧಿ ಭವನ ನಿರ್ಮಾಣ ಮಾತ್ರವಲ್ಲದೇ ಗಾಂಧಿ ತತ್ವಗಳ ಕುರಿತು ಪುಸ್ತಕ ಉಳ್ಳ ಲೈಬ್ರರಿ ಜೊತೆಗೆ ಗ್ರಾಮೀಣ ಜನರಲ್ಲಿ ಗಾಂಧೀಜಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳ ನಡೆಸಲು ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.ಅಧ್ಯಕ್ಷರ ಮನವಿಗೆ ಸ್ಥಳದಲ್ಲಿಯೇ ಸ್ಪಂದಿಸಿದ ನಾಡೋಜ ವೂಡೇ ಪಿ.ಕೃಷ್ಣ ಅವರು ಈ ವಿಷಯನ್ನು ಆಡಳಿತ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಗ್ರಾಮೀಣ ಭಾಗದಲ್ಲಿ ಗಾಂಧಿ ಸ್ಮಾರಕ ಭವನ ಮಾಡುವುದು ಕೂಡ ಉತ್ತಮ ಕಾರ್ಯ. ಈ ಕುರಿತು ಚರ್ಚಿಸಿ ತೀರ್ಮಾನಿಸುತ್ತೇವೆ ಎಂದರು.