ಎಸ್‌ಸಿಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ಶುಕ್ರವಾರ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌ ಅಧ್ಯಕ್ಷತೆಯಲ್ಲಿ ಉಭಯ ಜಿಲ್ಲೆಗಳ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳ ಸಭೆ ಸಂಪನ್ನಗೊಂಡಿತು.

ಮಂಗಳೂರು: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಕಡಿಮೆ ವಿಮಾ ಮೊತ್ತ ಪಾವತಿಯಾಗಿದ್ದು, ಇದನ್ನು ಪುನರ್‌ ಪರಿಶೀಲಿಸಿ ಸೂಕ್ತ ಮೊತ್ತ ಮರು ಪಾವತಿಸುವಂತೆ ಕೃಷಿ ಪತ್ತಿನ ಸಹಕಾರ ಸಂಘಗಳ ಸಭೆ ರಾಜ್ಯ ಸರ್ಕಾರ ಹಾಗೂ ವಿಮಾ ಕಂಪನಿಗಳನ್ನು ಆಗ್ರಹಿಸಿದೆ.ಇಲ್ಲಿನ ಎಸ್‌ಸಿಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ಶುಕ್ರವಾರ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌ ಅಧ್ಯಕ್ಷತೆಯಲ್ಲಿ ನಡೆದ ಉಭಯ ಜಿಲ್ಲೆಗಳ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಆಗ್ರಹಿಸಲಾಗಿದೆ. ಒಂದು ಹೆಕ್ಟೇರ್‌ ಅಡಕೆ ಹಾಗೂ ಕಾಳುಮೆಣಸು ಬೆಳೆಗೆ ಶೇ.5ರಷ್ಟು ವಿಮಾ ಮೊತ್ತವನ್ನು ಬೆಳೆಗಾರರು ಪಾವತಿಸಿದ್ದಾರೆ. ಮೇ ತಿಂಗಳಲ್ಲಿ ವಿಪರೀತ ಉಷ್ಣ ಹವೆ ಹಾಗೂ ಮಳೆಗಾಲದಲ್ಲಿ ಭಾರಿ ಮಳೆಯಿಂದಾಗಿ ಅಡಕೆ ತೋಟಗಳಿಗೆ ಹಾನಿಯಾಗಿದೆ. ಆದರೆ ವಿಮಾ ಕಂಪನಿ ಈ ಬಾರಿ ಬೆಳೆಗಾರರು ಪಾವತಿಸಿದ ಮೊತ್ತಕ್ಕಿಂತ ಸ್ವಲ್ಪ ಹೆಚ್ಚಿನ ಮೊತ್ತ ನೀಡಿದ್ದು ಬಿಟ್ಟರೆ ನ್ಯಾಯಯುತ ಪರಿಹಾರ ಮೊತ್ತ ಪಾವತಿಸಿಲ್ಲ. ಮೊದಲೇ ಫಸಲು ನಷ್ಟದ ಆತಂಕದಲ್ಲಿ ಇರುವ ಬೆಳೆಗಾರರು ಇದರಿಂದ ಮತ್ತಷ್ಟು ಕಂಗಾಲಾಗುವಂತಾಗಿದೆ ಎಂದು ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರುಗಳು ಪ್ರಸ್ತಾಪಿಸಿದರು.

ಸುಳ್ಯ, ಪುತ್ತೂರು ತಾಲೂಕುಗಳಲ್ಲಿ ಕಳೆದ ಅವಧಿಯಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾಗಿದ್ದು, ವಿಮಾ ಪರಿಹಾರ ಮೊತ್ತ ಕೂಡ ನ್ಯಾಯಯುತವಾಗಿ ಪಾವತಿಗೊಂಡಿತ್ತು. ಈ ಬಾರಿ ಭಾರಿ ಪ್ರಮಾಣದಲ್ಲಿ ಪಾವತಿಯಲ್ಲಿ ವ್ಯತ್ಯಾಸವಾಗಿದೆ. ಇದಕ್ಕೆ ತೋಟಗಾರಿಕೆ ಹಾಗೂ ವಿಮಾ ಕಂಪನಿಯ ಅಧಿಕಾರಿಗಳು ಸಬೂಬು ನೀಡುತ್ತಿದ್ದಾರೆ. ಆದ್ದರಿಂದ ವಿಮಾ ಮೊತ್ತದಲ್ಲಿನ ವ್ಯತ್ಯಾಸವನ್ನು ಸರಿಪಡಿಸಿ ಮರು ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಸಂಘಗಳ ಅಧ್ಯಕ್ಷರುಗಳು ಒತ್ತಾಯಿಸಿದರು. 10 ದಿನದಲ್ಲಿ ಪೂರ್ಣ ಪಾವತಿ:

ದ.ಕ. ಜಿಲ್ಲಾ ತೋಟಗಾರಿಕೆ ಇಲಾಖಾ ಸಹಾಯಕ ನಿರ್ದೇಶಕ ದರ್ಶನ್‌ ಮಾತನಾಡಿ, ಟಾಟಾ ಏಜೆನ್ಸಿಗೆ ಸೇರಿದ ವಿಮಾ ಕಂಪನಿ ಈ ಜಿಲ್ಲೆಯಲ್ಲಿ ಕಳೆದ ವರ್ಷದಿಂದ ಮೂರು ವರ್ಷಗಳ ಕಾಲ ಹವಾಮಾನ ಆಧಾರಿತ ಬೆಳೆ ವಿಮೆ ಬಗ್ಗೆ ಸರ್ಕಾರದ ಜೊತೆ ಶೇ.35ರ ಪ್ರೀಮಿಯಮ್‌ ಪಾವತಿಗೆ ಒಪ್ಪಂದ ಮಾಡಿಕೊಂಡಿದೆ. 2023-24ರಲ್ಲಿ 215 ಕೋಟಿ ಮೊತ್ತದ ಪ್ರೀಮಿಯಮ್‌ ಹೊಂದಿದ್ದು, 270 ಕೋಟಿ ರು. ವಿಮಾ ಮೊತ್ತವನ್ನು ಪಾವತಿಸಿದೆ. 2024-25ನೇ ಸಾಲಿನಲ್ಲಿ 277 ಕೋಟಿ ರು.ಗಳ ಪ್ರೀಮಿಯಮ್‌ ಪಡೆದಿದ್ದು, ಈ ವರೆಗೆ 169 ಕೋಟಿ ರು.ಗಳ ವಿಮಾ ಮೊತ್ತ ಪಾವತಿಸಿದೆ. ಇನ್ನು 10 ದಿನಗಳಲ್ಲಿ ಬಾಕಿ ಉಳಿದ ಎಲ್ಲ ವಿಮಾ ಮೊತ್ತಗಳ ಪಾವತಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದರು.

ಈಗಾಗಲೇ ಕಡಿಮೆ ವಿಮಾ ಮೊತ್ತ ಪಾವತಿಯಾಗಿರುವ ಪ್ರಕರಣಗಳನ್ನು ಮರು ಪರಿಶೀಲಿಸಿ ಸೂಕ್ತ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು. ಹವಾಮಾನ ಇಲಾಖೆಯಿಂದ ಡಾಟಾ ತರಿಸಿಕೊಂಡು ಅದನ್ನು ಪುನರ್‌ ಪರಿಶೀಲನೆ ನಡೆಸಲಾಗುವುದು. ಬಳಿಕಷ್ಟೆ ಮರು ಪಾವತಿಗೆ ಕ್ರಮ ಕೈಗೊಳ್ಳಲಾಗುವುದು. ತೋಟಗಾರಿಕೆ ಅಥವಾ ಕಂಪನಿ ಹಂತದಲ್ಲಿ ಏನೂ ಮಾಡುವಂತಿಲ್ಲ. ಏನಿದ್ದರೂ ಹವಾಮಾನ ಇಲಾಖೆಯ ವರದಿಯನ್ನು ಆಧರಿಸಿಯೇ ಪರಿಹಾರ ಮೊತ್ತ ಪಾವತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿ ದರ್ಶನ್‌ ಸ್ಪಷ್ಟಪಡಿಸಿದರು.

ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ , ಎಸ್‌ಸಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಬ್ಯಾಂಕ್ ನಿರ್ದೇಶಕರಾದ ಟಿ.ಜಿ. ರಾಜಾರಾಮ ಭಟ್ , ಎಂ.ವಾದಿರಾಜ ಶೆಟ್ಟಿ, ಶಶಿಕುಮಾರ್ ರೈ ಬಾಲ್ಯೋಟ್ಟು, ಎಸ್.ಬಿ. ಜಯರಾಮ್ ರೈ, ಕೆ.ಜೈರಾಜ್ ಬಿ. ರೈ, ರಾಜೇಶ್ ರಾವ್, ಸದಾಶಿವ ಉಳ್ಳಾಲ್, ಎಸ್.ಎನ್.ಮನ್ಮಥ, ಕುಶಲಪ್ಪ ಗೌಡ, ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ , ಸ್ಕ್ಯಾಡ್ಸ್ ಅಧ್ಯಕ್ಷರಾದ ರವೀಂದ್ರ ಕಂಬಳಿ‌, ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕ ರಮೇಶ್ ಎಚ್.ಎನ್, ಉಡುಪಿ ಜಿಲ್ಲೆಯ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ನಿಧೀಶ್, ಟಾಟಾ ಎಐಜಿ ಜನರಲ್ ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿ ಶುಭಂ ಇದ್ದರು.

ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್‌ ರೈ ಬಾಲ್ಯೋಟ್ಟು ಸ್ವಾಗತಿಸಿದರು. ಈ ಸಂದರ್ಭ ಕ್ಯಾಂಪ್ಕೋ ಅಧ್ಯಕ್ಷರಾಗಿ ಆಯ್ಕೆಯಾದ ಎಸ್‌.ಆರ್‌.ಸತೀಶ್ಚಂದ್ರ ಅವರನ್ನು ಎಸ್‌ಸಿಡಿಸಿಸಿ ಬ್ಯಾಂಕ್‌ ವತಿಯಿಂದ ಸನ್ಮಾನಿಸಲಾಯಿತು.

ಕಡಿಮೆ ವಿಮೆ ಮೊತ್ತ ಪಾವತಿಯನ್ನು ಸರಿಪಡಿಸಿ: ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌

ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌, ಹವಾಮಾನ ಆಧಾರಿತ ಬೆ‍ಳೆವಿಮೆ ಪ್ರೀಮಿಯಮ್‌ ತುಂಬುವುದು ಸಹಕಾರಿ ಸಂಘಗಳಲ್ಲಿ, ವಿಮಾ ಮೊತ್ತ ಪಾವತಿಯನ್ನು ಕಂಪನಿಯು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಮಾಡುತ್ತದೆ. ಆಧಾರ್‌ ಲಿಂಕ್‌ ಹೆಸರಿನಲ್ಲಿ ಈ ರೀತಿ ಮಾಡುವುದು ಸರಿಯಲ್ಲ ಎಂದರು.

ಬೆಳೆ ವಿಮೆ ಕಡಿಮೆ ಪಾವತಿಯಾಗಿರುವ ಬಗ್ಗೆ ಬೆಳಗಾವಿಯ ಅಧಿವೇಶದನಲ್ಲೂ ಗುರುವಾರ ಪ್ರಸ್ತಾಪಗೊಂಡಿದೆ. ಸರ್ಕಾರ ಹಾಗೂ ಕಂಪನಿಯ ಈ ಕ್ರಮದಿಂದ ಬೆಳೆಗಾರರು ತೊಂದರೆಗೆ ಒಳಗಾಗಿದ್ದಾರೆ. ಆದ್ದರಿಂದ ಈಗಾಗಲೇ ಕಡಿಮೆ ವಿಮೆ ಮೊತ್ತ ಪಾವತಿಗೊಂಡ ಪ್ರಕರಣಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು. ಅಲ್ಲದೆ ಮುಂದೆ ಸರಿಯಾದ ನ್ಯಾಯಯುತ ಮೊತ್ತವನ್ನೇ ಬೆಳೆಗಾರರಿಗೆ ಪಾವತಿಸಲು ಮುಂದಾಗಬೇಕು ಎಂದು ಡಾ.ಎಂ.ಎನ್.ಆರ್‌. ಆಗ್ರಹಿಸಿದರು.

ಪ್ರೀಮಿಯಮ್‌ ಪಾವತಿ, ವಿಮಾ ಪಾವತಿ ಒಂದೇ ಕಡೆ ಆಗಲಿಹವಾಮಾನ ಆಧಾರಿತ ಬೆಳೆ ವಿಮೆಯ ಪ್ರೀಮಿಯಮ್‌ ಮತ್ತು ವಿಮೆ ಪಾವತಿಯಲ್ಲಿ ಬೇರೆ ಬೇರೆ ಬ್ಯಾಂಕ್‌ಗಳನ್ನು ನಿಗದಿಪಡಿಸುವುದು ಸರಿಯಲ್ಲ. ಇದನ್ನು ಒಂದೇ ಬ್ಯಾಂಕ್‌ ವ್ಯವಸ್ಥೆಯಡಿ ತರಬೇಕು ಎಂಬ ಆಗ್ರಹ ಸಭೆಯಲ್ಲಿ ವ್ಯಕ್ತವಾಯಿತು.

ಬೆಳೆ ವಿಮೆಯ ಪ್ರೀಮಿಯಮ್‌ ಮೊತ್ತವನ್ನು ಎಲ್ಲ ಪತ್ತಿನ ಕೃಷಿ ಸಹಕಾರ ಸಂಘಗಳಿಂದ ವಸೂಲಿ ಮಾಡಲಾಗುತ್ತದೆ. ಆದರೆ ವಿಮಾ ಮೊತ್ತವನ್ನು ಆಧಾರ್‌ ಲಿಂಕ್ ಇರುವ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಮಾತ್ರ ಪಾವತಿಸಲಾಗುತ್ತಿದೆ. ಈ ವೇಳೆ ಬೆಳೆಗಾರರ ಸಾಲ ಅಂತಹ ಬ್ಯಾಂಕ್‌ನಲ್ಲಿ ಇದ್ದರೆ ವಿಮೆಯ ಮೊತ್ತವನ್ನು ಸಾಲಕ್ಕೆ ವಜಾಗೊಳಿಸುವ ವಿದ್ಯಮಾನಗಳೂ ನಡೆಯುತ್ತಿವೆ. ಕೃಷಿ ಪತ್ತಿನ ಸಹಕಾರಿ ಸಂಘಗಳು ರುಪೇ ಖಾತೆ ತೆರೆಯುವಾಗ ಆಧಾರ್‌ ಲಿಂಕ್‌ ಮಾಡಿರುತ್ತಾರೆ. ಆದ್ದರಿಂದ ಪ್ರೀಮಿಯಮ್‌ ಮೊತ್ತ ಪಾವತಿಸುವ ಸಹಕಾರ ಬ್ಯಾಂಕ್‌ಗಳಿಗೇ ವಿಮಾ ಮೊತ್ತ ಪಾವತಿಸಬೇಕು ಎಂಬ ಆಗ್ರಹ ಸಭೆಯಲ್ಲಿ ವ್ಯಕ್ತಗೊಂಡಿತು.

ರಸಗೊಬ್ಬರ ಪೂರೈಕೆಗೆ ಸಂಬಂಧಿಸಿ ಅಗತ್ಯ ಬೇಡಿಕೆ ಪಟ್ಟಿಯನ್ನು ಕೂಡಲೇ ಸಹಕಾರ ಸಂಘಗಳು ಸಲ್ಲಿಸಬೇಕು. ಬೆಳೆಗಾರರಿಗೆ ಅಗತ್ಯ ಇರುವ ರಸಗೊಬ್ಬರ ಪೂರೈಕೆ ಮಾಡಲಾಗುತ್ತದೆ.

-ಡಾ.ಎಂ.ಎನ್‌.ರಾಜೇಂದ್ರ ಕುಮಾರ್‌, ಅಧ್ಯಕ್ಷರು, ಎಸ್‌ಸಿಡಿಸಿಸಿ ಬ್ಯಾಂಕ್‌